ಉಜಿರೆ (ಡಿ.13) : ಶ್ರೀ ಧ.ಮಂ. ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಭಾಗದ ವತಿಯಿಂದ ‘ಆಹಾರ ವಸ್ತುಗಳಲ್ಲಿನ ಕಲಬೆರಕೆ ವಸ್ತುಗಳ ಪತ್ತೆ ಮತ್ತು ಮಣ್ಣಿನ ವಿಶ್ಲೇಷಣೆ’ ಕಾರ್ಯಾಗಾರ ನಡೆಯಿತು.
ಇದನ್ನೂ ಓದಿ: ಪುದುವೆಟ್ಟು: ಗ್ರಾ.ಪಂ. ಅಧ್ಯಕ್ಷರ ವಿರುದ್ದ ಅವಿಶ್ವಾಸ ನಿರ್ಣಯ ಪಾಸ್
ನಿತ್ಯ ಜೀವನದಲ್ಲಿ ರಸಾಯನಶಾಸ್ತ್ರದ ಪ್ರಾಯೋಗಿಕ ಅನ್ವಯಿಸುವಿಕೆಯ ಪ್ರಾತ್ಯಕ್ಷಿಕೆಗಾಗಿ ಉಜಿರೆಯ ಎಸ್.ಡಿ.ಎಂ. ವಸತಿಯುತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಅಂತಿಮ ಮತ್ತು ಪ್ರಥಮ ವರ್ಷದ ಬಿ.ಎಸ್ಸಿ. ಪದವಿ ವಿದ್ಯಾರ್ಥಿಗಳು ಹಾಲು, ಮೊಸರು, ತುಪ್ಪ, ಎಣ್ಣೆ, ಜೇನುತುಪ್ಪ ಇತ್ಯಾದಿ ಸಾಮಾನ್ಯ ದಿನಬಳಕೆಯ ಆಹಾರ ಪದಾರ್ಥಗಳಲ್ಲಿನ ಕಲಬೆರಕೆ ಪತ್ತೆಹಚ್ಚುವ ಸುಲಭ ವಿಧಾನಗಳನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.
ಅಂತಿಮ ವರ್ಷದ ವಿದ್ಯಾರ್ಥಿನಿ ಹರ್ಷಿತಾ, ಆರೋಗ್ಯದ ಮೇಲೆ ಆಹಾರ ಕಲಬೆರಕೆಯ ಹಾನಿಕಾರಕ ಪರಿಣಾಮಗಳ ಕುರಿತು ಮಾಹಿತಿ ನೀಡಿದರು. ಕಲಬೆರಕೆ ಕುರಿತು ಜಾಗೃತಿ ಹಾಗೂ ಆರೋಗ್ಯ ಮುಂಜಾಗ್ರತಾ ಕ್ರಮ ಅಗತ್ಯ ಎಂದು ಅವರು ತಿಳಿಸಿದರು.
ಮಣ್ಣು ಪ್ರಯೋಗಾಲಯದ ತಂತ್ರಜ್ಞ ರಂಜಿತ್ ಅವರು ಮಣ್ಣಿನ ಗುಣಮಟ್ಟ ಪರೀಕ್ಷಾ ಪ್ರಾತ್ಯಕ್ಷಿಕೆ ತೋರಿಸಿಕೊಟ್ಟರು. ಸಾರಜನಕ (Nitrogen), ರಂಜಕ (Phosphorus) ಮತ್ತು ಪೊಟಾಶಿಯಂ (Potassium) ಮಟ್ಟವನ್ನು ಪತ್ತೆ ಹಚ್ಚುವ ಬಗೆ ವಿವರಿಸಿದರು.
ಕೃಷಿ ಮತ್ತು ಪರಿಸರ ಸಂರಕ್ಷಣೆಗಾಗಿ ಮಣ್ಣು ಪರೀಕ್ಷೆಯ ಪ್ರಾಯೋಗಿಕ ಜ್ಞಾನದ ಅಗತ್ಯ ಕುರಿತು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥೆ ನಂದಾ ಕುಮಾರಿ ಕೆ. ಪಿ. ಅವರು ಕಾರ್ಯಾಗಾರದ ಉದ್ದೇಶ ವಿವರಿಸಿದರು.
ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಗಾನವಿ ಡಿ., ದಿವ್ಯ, ಸಂಗೀತ, ಅಮಿತ್ ಮತ್ತು ಎಸ್.ಡಿ.ಎಂ. ವಸತಿಯುತ ಪದವಿಪೂರ್ವ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರಶಾಂತ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಅನ್ವಿತಾ ಸ್ವಾಗತಿಸಿ, ಹರ್ಷಾ ವಂದಿಸಿದರು.