ನವದೆಹಲಿ:(ಡಿ.16) ಖ್ಯಾತ ತಬಲಾ ವಾದಕ ಜಾಕೀರ್ ಹುಸೇನ್ ಅವರನ್ನು ಹೃದಯ ಸಮಸ್ಯೆಯ ಹಿನ್ನೆಲೆಯಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
73 ವರ್ಷದ ಅಮೆರಿಕನ್ ಸಂಗೀತಗಾರ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದು ಅವರನ್ನು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಉಸ್ತಾದ್ ಜಾಕಿರ್ ಹುಸೇನ್ ಅವರ ತಂದೆ ಅಲ್ಲಾ ರಖಾ ಕೂಡ ಪ್ರಸಿದ್ಧ ತಬಲಾ ವಾದಕರಾಗಿದ್ದರು. ಪ್ರಸಿದ್ಧ ತಬಲಾ ವಾದಕ ಜಾಕೀರ್ ಹುಸೇನ್ ಅವರು ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಮುಂತಾದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಆಲ್-ಸ್ಟಾರ್ ಗ್ಲೋಬಲ್ ಕನ್ಸರ್ಟ್‌ನಲ್ಲಿ ಭಾಗವಹಿಸಲು ಮಾಜಿ ಅಧ್ಯಕ್ಷ ಬರಾಕ್ ಒಬಾಮರಿಂದ ಆಹ್ವಾನ ಪಡೆದ ಮೊದಲ ಭಾರತೀಯ ತಬಲಾ ವಾದಕ ಜಾಕಿರ್ ಹುಸೇನ್ ಆಗಿದ್ದಾರೆ.
ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ 1951ರಲ್ಲಿ ಜನಿಸಿದ ಜಾಕೀರ್ ಹುಸೇನ್ ಕೇವಲ 3 ವರ್ಷ ವಯಸ್ಸಿನಲ್ಲೇ ತಬಲಾವನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದರು. 7ನೇ ವಯಸ್ಸಿಗೆ ಪರಿಣತಿ ಪಡೆದಿದ್ದು 11ನೇ ವಯಸ್ಸಿನಲ್ಲಿ ಜಾಕೀರ್ ಹುಸೇನ್ ವಿವಿಧ ಸ್ಥಳಗಳಲ್ಲಿ ತಮ್ಮ ಕಾರ್ಯಕ್ರಮಗಳನ್ನು ನೀಡಲು ಪ್ರಾರಂಭಿಸಿದರು.