ಉಜಿರೆ,(ಡಿ.17): ಕೃತಕ ಬುದ್ಧಿಮತ್ತೆ (AI)ಯ ಸರಿಯಾದ ಬಳಕೆ ಮತ್ತು ನೈತಿಕ ಹಾಗೂ ಸಾಮಾಜಿಕ ಮೌಲ್ಯಗಳ ನಡುವಿನ ಸಮತೋಲನ ಕಾಪಾಡುವುದು ಆರ್ಥಿಕತೆಯ ಸಮಗ್ರ ಅಭಿವೃದ್ಧಿಗೆ ಅವಶ್ಯಕ ಎಂದು ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ. ರಮೇಶ್ ಸಾಲಿಯಾನ್ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಉಜಿರೆ: ಸಸ್ಯಶಾಸ್ತ್ರ ವಿಭಾಗದಿಂದ ನೇಜಿ ನಾಟಿ ಕಾರ್ಯಕ್ರಮ
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಅರ್ಥಶಾಸ್ತ್ರ ಮತ್ತು ಗ್ರಾಮೀಣಾಭಿವೃದ್ಧಿ ವಿಭಾಗ ಹಾಗೂ ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದಲ್ಲಿ ಡಿ. 14ರಂದು ಆಯೋಜಿಸಿದ್ದ ‘ಕ್ರಿಯೇಟರ್ ಎಕಾನಮಿ ಮತ್ತು ಕೃತಕ ಬುದ್ಧಿಮತ್ತೆ – ಆರ್ಥಿಕ ಅಭಿವೃದ್ಧಿಯ ಕಡೆಗೆ’ ಕುರಿತ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಪ್ರಸ್ತುತ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ವಿವಿಧ ವಿಷಯಾಧಾರಿತ ಮಾಹಿತಿಗಳನ್ನು ದಾಖಲಿಸಿ ಯೂಟ್ಯೂಬ್ ಹಾಗೂ ಇನ್ಸ್ಟಾಗ್ರಾಮ್’ನಲ್ಲಿ ಬಿತ್ತರಿಸುವ ಮೂಲಕ ಹಣ ಗಳಿಸಬಹುದು. ನಿರುದ್ಯೋಗವನ್ನು ಹೋಗಲಾಡಿಸಬಹುದು. ಆದರೆ, ಆ ಪ್ರಯತ್ನದಲ್ಲಿ ನೈತಿಕ ಹಾಗೂ ಸಾಮಾಜಿಕ ಮೌಲ್ಯಗಳನ್ನು ಮರೆಯಬಾರದು ಎಂದು ಅವರು ಹೇಳಿದರು.
“ಭವಿಷ್ಯದ ಆರ್ಥಿಕತೆಯು ಸೃಜನಶೀಲತೆಯನ್ನು ತಂತ್ರಜ್ಞಾನದೊಂದಿಗೆ ಮಿಳಿತಗೊಳಿಸುವ ಮೂಲಕ ಹೊಸ ಅವಕಾಶಗಳನ್ನೇನೋ ಕೊಡಲಿದೆ. ಆದರೆ ಈ ಜಾಗದಲ್ಲಿ ಮನುಷ್ಯನ ನೈತಿಕತೆ ಮತ್ತು ಮಾನವೀಯ ಮೌಲ್ಯಗಳು ಸಹ ಪ್ರಮುಖವಾಗುತ್ತವೆ. ವಿಚಾರಗಳ ಬಿತ್ತರದ ವೇಳೆ ಒಳಿತು-ಕೆಡುಕುಗಳ ವಿವೇಚನೆ, ಔಚಿತ್ಯದ ಅರಿವು ಹೊಂದಿ ಆರ್ಥಿಕತೆಯ ಅಭಿವೃದ್ಧಿಗೆ ಕೊಡುಗೆ ನೀಡಬಹುದು” ಎಂದರು.
ಕೃತಕ ಬುದ್ಧಿಮತ್ತೆ ಅಳವಡಿಕೆಯಿಂದ ತಯಾರಿಕಾ ಕ್ಷೇತ್ರ, ಸೇವಾ ವಲಯ, ಹಣಕಾಸು ವ್ಯವಸ್ಥೆ, ಶಿಕ್ಷಣ, ಆರೋಗ್ಯ ಸೇವೆ ಮುಂತಾದ ಪ್ರಮುಖ ಕ್ಷೇತ್ರಗಳಲ್ಲಿ ಅಪಾರ ಬದಲಾವಣೆಗಳಾಗುತ್ತಿವೆ ಎಂದರು. ಹೊಸ ಆರ್ಥಿಕ ಪರಿಕಲ್ಪನೆ ಹಾಗೂ ಆಧುನಿಕ ತಂತ್ರಜ್ಞಾನಗಳ ಬಗ್ಗೆ ಬೆಳಕು ಚೆಲ್ಲಿದರು.
ಸಾಮಾಜಿಕ ಜಾಲತಾಣಗಳ ಮೂಲಕ, ಕೃತಕ ಬುದ್ಧಿಮತ್ತೆಯ ಸಹಾಯದೊಂದಿಗೆ ಗ್ರಾಮೀಣ ಭಾಗದಲ್ಲಿ ಲಭ್ಯವಿರುವ ಅದೆಷ್ಟೋ ಔಷಧಿಗಳು, ಆಹಾರ ಪದ್ಧತಿಗಳು ಮತ್ತು ಅವುಗಳಲ್ಲಿರುವ ವೈಜ್ಞಾನಿಕ ದೃಷ್ಟಿಕೋನವನ್ನು ಹೊರಗಿನ ಜಗತ್ತಿಗೆ ಪರಿಚಯಿಸಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅರ್ಥಶಾಸ್ತ್ರ ಮತ್ತು ಗ್ರಾಮೀಣಾಭಿವೃದ್ಧಿ ವಿಭಾಗದ ಮುಖ್ಯಸ್ಥ ಡಾ. ಗಣರಾಜ ಕೆ. ಸ್ವಾಗತಿಸಿದರು. ಸಮಾಜಕಾರ್ಯ ವಿಭಾಗ ಮುಖ್ಯಸ್ಥ ಡಾ. ರವಿಶಂಕರ್ ಕೆ.ಆರ್. ಧನ್ಯವಾದಗೈದರು. ಸಮಾಜಕಾರ್ಯ ದ್ವಿತೀಯ ವರ್ಷದ ವಿದ್ಯಾರ್ಥಿನಿ ತೇಜಸ್ವಿನಿ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.