ಮಂಡ್ಯ:(ಡಿ.18) ಮದುವೆಯಾಗಿದ್ದರೂ ಗೆಳೆಯನಿಗಾಗಿ ನದಿಗೆ ಹಾರಿ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡರೆ, ಪ್ರಿಯತಮೆ ಸಾವಿನ ವಿಚಾರ ತಿಳಿದು ಅತ್ತ ಪ್ರಿಯಕರ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಇದನ್ನೂ ಓದಿ: ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿ 20 ಅಡಿ ಆಳದ ಹೊಂಡಕ್ಕೆ ಬಿದ್ದ ಕ್ರೇನ್
ಮದ್ದೂರು ತಾಲೂಕಿನ ಯರಗನಹಳ್ಳಿ ಗ್ರಾಮದ ಸೃಷ್ಟಿ(20) ಮೃತ ಗೃಹಿಣಿಯಾಗಿದ್ದು, ಬನ್ನಹಳ್ಳಿ ಗ್ರಾಮದ ಪ್ರಸನ್ನ (25) ನೇಣಿಗೆ ಶರಣಾದ ಪ್ರಿಯಕರನಾಗಿದ್ದಾನೆ.
ಕಳೆದ ಕೆಲವು ವರ್ಷಗಳಿಂದ ಪ್ರಸನ್ನ ಹಾಗೂ ಸೃಷ್ಟಿ ಪ್ರೀತಿಸುತ್ತಿದ್ದರು. ಈ ಮಧ್ಯೆ ಪ್ರಸನ್ನ ಸೃಷ್ಟಿಯ ಸ್ನೇಹಿತೆ ಸ್ಪಂದನಾಳನ್ನು ಪ್ರೀತಿ ಮಾಡುತ್ತಿದ್ದ ಅಂತಿಮವಾಗಿ ಪ್ರಸನ್ನ ಮತ್ತು ಸ್ಪಂದನಾ ಮದುವೆಯಾದರೆ ಒಂದೂವರೆ ವರ್ಷದ ಹಿಂದೆ ದಿನೇಶ್ ಜೊತೆ ಸೃಷ್ಟಿಯ ಮದುವೆ ನಡೆದಿತ್ತು.
ಬೇರೆ ಬೇರೆ ಮದುವೆಯಾಗಿದ್ದರೂ ಪ್ರಸನ್ನ ಸೃಷ್ಟಿ ನಡುವೆ ಪ್ರೀತಿ ಮಾತುಕತೆ ನಡೆಯುತ್ತಿತ್ತು.
ಈ ವಿಚಾರಕ್ಕೆ ಸೃಷ್ಟಿ ಹಾಗೂ ಪತಿ ದಿನೇಶ್ ನಡುವೆ ಆಗಾಗ ಜಗಳ ನಡೆಯುತ್ತಿರುತ್ತದೆ. ಡಿ.11ರಂದು ಪತಿ ಮನೆಯಿಂದ ಸೃಷ್ಟಿ ನಾಪತ್ತೆಯಾಗಿದ್ದಳು. ಪತ್ನಿ ನಾಪತ್ತೆ ಬೆನ್ನಲ್ಲೇ ದಿನೇಶ್ ಕೆಸ್ತೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.
ಡಿ.16 ರಂದು ಶಿಂಷಾ ನದಿಯಲ್ಲಿ ನಾಪತ್ತೆಯಾದ ಸೃಷ್ಟಿಯ ಮೃತದೇಹ ಪತ್ತೆಯಾಗಿದ್ದು, ಇದರಿಂದ ಪ್ರಸನ್ನ ವಿಚಲಿತಗೊಂಡಿದ್ದ. ಸೃಷ್ಟಿ ಆತ್ಮಹತ್ಯೆ ಕುರಿತು ತನಿಖೆ ನಡೆಸಲು ಪೊಲೀಸರು ಮುಂದಾಗುತ್ತಿದ್ದಂತೆ ಪ್ರಸನ್ನ ಈಗ ತನ್ನ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.