ತಮಿಳುನಾಡು:(ಡಿ.22) ಸಾಮಾನ್ಯವಾಗಿ ನಾವೆಲ್ಲರೂ ದೇವಸ್ಥಾನಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ದೇವರ ದರ್ಶನ ಪಡೆದು ಕಾಣಿಕೆ ಹುಂಡಿಗೆ ಹಣ ಹಾಕುತ್ತೇವೆ ಅಲ್ವಾ. ಅದೇ ರೀತಿ ಇಲ್ಲೊಬ್ರು ಭಕ್ತರು ಕೂಡಾ ದೇವಾಲಯವೊಂದಕ್ಕೆ ದೇವರ ದರ್ಶನ ಪಡೆಯಲು ಬಂದಿದ್ದ ಸಂದರ್ಭದಲ್ಲಿ ಕಾಣಿಕೆ ಹುಂಡಿಗೆ ಹಣ ಹಾಕಲು ಮುಂದಾಗಿದ್ದಾರೆ.
ಹೀಗೆ ಕಾಣಿಕೆ ಹಾಕುವ ಸಂದರ್ಭದಲ್ಲಿ ಅವರ ಜೇಬಿನಲ್ಲಿದ್ದ ದುಬಾರಿ ಬೆಲೆಯ ಐಫೋನ್ ಕೂಡಾ ಆಕಸ್ಮಿಕವಾಗಿ ಹುಂಡಿಗೆ ಜಾರಿ ಬಿದ್ದಿದೆ. ಅವರು ಕೂಡಲೇ ದೇವಾಲಯದ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಒಮ್ಮೆ ಹುಂಡಿಗೆ ಬಿದ್ದ ವಸ್ತು ಅದು ದೇವರಿಗೆ ಸಲ್ಲುತ್ತದೆ ಅದನ್ನು ವಾಪಸ್ ನೀಡಲಾಗುವುದಿಲ್ಲ ಎಂದು ದೇವಸ್ಥಾನ ಆಡಳಿತ ಮಂಡಳಿ ಫೋನ್ ಕೊಡಲು ನಿರಾಕರಿಸಿದೆ. ಈ ಸುದ್ದಿ ಇದೀಗ ಸಖತ್ ವೈರಲ್ ಆಗುತ್ತಿದೆ.
ಈ ಘಟನೆ ತಮಿಳುನಾಡಿನ ತಿರುಪೋರೂರಿನ ಅರುಲ್ಮಿಗು ಕಂದಸ್ವಾಮಿ ದೇವಸ್ಥಾನದಲ್ಲಿ ನಡೆದಿದ್ದು, ಇತ್ತೀಚಿಗೆ ಈ ದೇವಸ್ಥಾನಕ್ಕೆ ಭಕ್ತರೊಬ್ಬರು ಭೇಟಿ ನೀಡಿದ್ದಂತಹ ಸಂದರ್ಭದಲ್ಲಿ ಆಕಸ್ಮಿಕವಾಗಿ ಅವರ ದುಬಾರಿ ಬೆಲೆಯ ಐಫೋನ್ ಕಾಣಿಕೆ ಹುಂಡಿಗೆ ಜಾರಿ ಬಿದ್ದಿದೆ. ಫೋನನ್ನು ಹಿಂದಿರುಗಿಸುವಂತೆ ಕೇಳಿದಾಗ, ಹುಂಡಿಗೆ ಬಿದ್ದ ಯಾವುದೇ ವಸ್ತುವನ್ನು ಹಿಂದಿರುಗಿಸಲು ಸಾಧ್ಯವಿಲ್ಲ ಎಂದು ದೇವಾಲಯದ ಆಡಳಿತ ಮಂಡಳಿ ಹೇಳಿಕೆ ನೀಡಿದೆ.
ವಿನಾಯಕಪುರಂ ನಿವಾಸಿ ದಿನೇಶ್ ಅವರು ತಮ್ಮ ಕುಟುಂಬದೊಂದಿಗೆ ದೇವಾಲಯಕ್ಕೆ ಪ್ರಾರ್ಥನೆ ಸಲ್ಲಿಸಲು ಬಂದಿದ್ದರು. ಹೀಗೆ ಪೂಜೆ ಮುಗಿಸಿ ಹುಂಡಿಗೆ ಕಾಣಿಕೆ ಹಾಕಲು ಜೇಬಿನಿಂದ ಹಣ ತೆಗೆಯುವ ಸಂದರ್ಭದಲ್ಲಿ ಜೇಬಿನಲ್ಲಿದ್ದ ಐಫೋನ್ ಜಾರಿ ಹುಂಡಿಗೆ ಬಿದ್ದಿದೆ. ಕೂಡಲೇ ದಿನೇಶ್ ದೇವಸ್ಥಾನದ ಅಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಫೋನ್ ವಾಪಸ್ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ ದೇವಾಲಯದ ಆಡಳಿತ ಮಂಡಳಿಯು ದೇವಸ್ಥಾನದ ಸಂಪ್ರದಾಯವನ್ನು ಉಲ್ಲೇಖಿಸಿ, ಹುಂಡಿಯಲ್ಲಿ ಹಾಕುವ ಯಾವುದೇ ವಸ್ತುವನ್ನು ವಾಪಸ್ ನೀಡಲಾಗುವುದಿಲ್ಲ, ಅದೆಲ್ಲವೂ ದೇವರಿಗೆ ಸಲ್ಲುತ್ತದೆ. ಅದು ಆಕಸ್ಮಿಕವಾಗಿ ಬಿದ್ದರೂ ಹಿಂದಿರುಗಿಸಲಾಗುವುದಿಲ್ಲ ಎಂದು ಹೇಳಿದೆ.
ಇದರಿಂದ ನಿರಾಶೆಗೊಂಡ ದಿನೇಶ್ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳಿಗೆ ದೂರು ಸಲ್ಲಿಸಿ ಹುಂಡಿಯನ್ನು ಯಾವಾಗ ತೆರೆಯಲಾಗುತ್ತದೆ ಎಂಬ ಮಾಹಿತಿಯನ್ನು ಪಡೆದರು. ಅಂತಿಮವಾಗಿ ಎರಡು ತಿಂಗಳ ಬಳಿಕ ಶುಕ್ರವಾರ (ಡಿ.20) ಐಫೋನ್ ಸಿಗುವ ಭರವಸೆಯಲ್ಲಿ ದಿನೇಶ್ ದೇವಸ್ಥಾನಕ್ಕೆ ಬಂದಿದ್ದು, ಯಾವುದೇ ಕಾರಣಕ್ಕೂ ಹುಂಡಿಯಲ್ಲಿ ಬಿದ್ದ ಫೋನನ್ನು ಕೊಡಲು ಸಾಧ್ಯವಿಲ್ಲ ಬೇಕಾದರೆ ಸಿಮ್ ಅನ್ನು ತೆಗೆದುಕೊಳ್ಳಿ ಎಂದು ಆಡಳಿತ ಮಂಡಳಿಯ ಅಧಿಕಾರಿಗಳು ಹೇಳಿದ್ದಾರೆ. ಈ ಸುದ್ದಿ ಇದೀಗ ಭಾರಿ ಚರ್ಚೆಯನ್ನು ಹುಟ್ಟು ಹಾಕಿದೆ.