PV Sindhu:(ಡಿ.23) ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಹಾಗೂ ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ಅದ್ದೂರಿಯಾಗಿ ನಡೆದ ಮದುವೆ ಸಮಾರಂಭದಲ್ಲಿ ಉದ್ಯಮಿ ವೆಂಕಟ್ ದತ್ತಾ ಸಾಯಿ ಅವರೊಂದಿಗೆ ಸಿಂಧು ಸಪ್ತಪದಿ ತುಳಿದಿದ್ದಾರೆ. ಪಿವಿ ಸಿಂಧು ಮತ್ತು ವೆಂಕಟ್ ಮದುವೆಯ ಮೊದಲ ಫೋಟೋ ಇದೀಗ ವೈರಲ್ ಆಗಿದ್ದು, ಇದರಲ್ಲಿ ಇಬ್ಬರ ಜೋಡಿ ತುಂಬಾ ಸುಂದರವಾಗಿ ಕಾಣಿಸುತ್ತಿದೆ. ಇವರಿಬ್ಬರ ಮದುವೆಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ.
ಇದನ್ನೂ ಓದಿ: ಬೆಳ್ತಂಗಡಿ : ಧರ್ಮಸ್ಥಳಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ
ಮದುವೆಯ ಮೊದಲ ಫೋಟೋ
ಡಿಸೆಂಬರ್ 22 ರಂದೇ ಸಿಂಧು ಮತ್ತು ವೆಂಕಟ್ ಮದುವೆಯಾಗಿದ್ದಾರೆ. ಆದರೆ ಈ ವಿವಾಹ ಸಮಾರಂಭವನ್ನು ಅತ್ಯಂತ ಖಾಸಗಿಯಾಗಿ ಇರಿಸಲಾಗಿರುವುದರಿಂದ ಸಿಂಧು ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಇನ್ನೂ ಹಂಚಿಕೊಂಡಿಲ್ಲ. ಆದರೆ, ಈ ಮದುವೆಯಲ್ಲಿ ಭಾಗಿಯಾಗಿರುವ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ನವ ಜೋಡಿಯ ಮದುವೆಯ ಫೋಟೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು ನವದಂಪತಿಗಳಿಗೆ ಶುಭಕೋರಿದ್ದಾರೆ.
ವಾಸ್ತವವಾಗಿ ಇದೇ ತಿಂಗಳ 14ರಂದು ಇಬ್ಬರ ನಿಶ್ಚಿತಾರ್ಥವೂ ನಡೆದಿತ್ತು. ಇದೀಗ ಕುಟುಂಬಸ್ಥರು, ಆತ್ಮೀಯ ಸ್ನೇಹಿತರು ಹಾಗೂ ವಿಶೇಷ ಅತಿಥಿಗಳ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿರುವ ಈ ಜೋಡಿ ಮಂಗಳವಾರ ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ಆರತಕ್ಷತೆಯನ್ನು ಏರ್ಪಡಿಸಿದೆ. ಈ ಸಮಾರಂಭಕ್ಕೆ ದಂಪತಿಗಳಿಬ್ಬರು ಸಚಿನ್ ತೆಂಡೂಲ್ಕರ್ ಮತ್ತು ಪ್ರಧಾನಿ ನರೇಂದ್ರ ಮೋದಿಯಂತಹ ಸೆಲೆಬ್ರಿಟಿಗಳನ್ನು ಆಹ್ವಾನಿಸಿದ್ದಾರೆ.