Sat. Dec 28th, 2024

Mangaluru: ಜಾತ್ಯತೀತ ಪಕ್ಷಗಳು, ಸಂಘಟನೆಗಳ ಜಂಟಿ ವೇದಿಕೆ ನೇತೃತ್ವದಲ್ಲಿ ಧರಣಿ – ಪೊಲೀಸ್‌ ಆಯುಕ್ತ ಅನುಪಮ್ ಅಗರ್ವಾಲ್‌ ವರ್ಗಾವಣೆಗೆ ಆಗ್ರಹ

ಮಂಗಳೂರು :(ಡಿ.24) ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್‌ ಅವರನ್ನು ಅಮಾನತುಗೊಳಿಸುವಂತೆ ಮತ್ತು ಕಮಿಷನರೇಟ್ ವ್ಯಾಪ್ತಿಯಲ್ಲಿ ಧರಣಿ,ಪ್ರತಿಭಟನೆಗಳಿಗೆ ಅವಕಾಶ ನೀಡುವಂತೆ ಆಗ್ರಹಿಸಿ ದ.ಕ. ಜಿಲ್ಲಾ ಜಾತ್ಯತೀತ ಪಕ್ಷಗಳು ಹಾಗೂ ಸಂಘಟನೆಗಳ ಜಂಟಿ ವೇದಿಕೆ ಮಂಗಳೂರು ಇವುಗಳ ಆಶ್ರಯದಲ್ಲಿ ಕ್ಲಾಕ್ ಟವರ್ ಬಳಿ ಸೋಮವಾರ ಬೆಳಗ್ಗೆ ಸಾಮೂಹಿಕ ಧರಣಿ ನಡೆಯಿತು.

ಇದನ್ನೂ ಓದಿ: ಮಡಿಕೇರಿ: ಕರ್ನಾಟಕ ರಾಜ್ಯದ ಆರೋಗ್ಯ ಕ್ಷೇತ್ರದಲ್ಲೇ ಮೊಟ್ಟ ಮೊದಲ ಬಾರಿಗೆ ಮೂಳೆ ದಾನ

ಧರಣಿ ಉದ್ಘಾಟಿಸಿ ಮಾತನಾಡಿದ ದ.ಕ. ಜಿಲ್ಲಾ ಸಿಪಿಎಂ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮಂಗಳೂರು ಪೊಲೀಸ್ ಆಯುಕ್ತ ಅನುಪಮ ಅಗರ್ವಾಲ್‌ ಅವರನ್ನು ವರ್ಗಾವಣೆಗೆ ಆಗ್ರಹಿಸಿ ಕಳೆದೊಂದು ತಿಂಗಳಿನಿಂದ ಹೋರಾಟ ನಡೆಯುತ್ತಿದೆ. ರಾಜ್ಯ ಸರಕಾರ ನಮ್ಮ ಬೇಡಿಕೆಯನ್ನು ಈಡೇರಿಸುತ್ತದೆ ಎಂಬ ಭರವಸೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯರ ಬಗ್ಗೆ ನಮಗೆ ನಂಬಿಕೆ ಇದೆ. ಮಂಗಳೂರು ಸುಸಂಸ್ಕೃತ ನಗರ. ಇಲ್ಲಿ ಪೊಲೀಸ್ ಅಧಿಕಾರಿ ವಿರುದ್ಧ ಇಷ್ಟೊಂದು ದೀರ್ಘಾವಧಿ ಪ್ರತಿಭಟನೆ ಈ ವರೆಗೂ ನಡೆದಿಲ್ಲ. ಅದು ಕೂಡಾ ಜನಪರ ಸಂಘಟನೆಗಳಿಂದ. ಆದ್ದರಿಂದ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್‌ ಅವರನ್ನು ಎತ್ತಂಗಡಿ ಮಾಡಬೇಕು, ಅಮಾನತುಗೊಳಿಸಿ ತನಿಖೆಗೊಳಪಡಿಸಬೇಕು ಎಂದು ಅವರು ಆಗ್ರಹಿಸಿದರು.

ರಾಷ್ಟ್ರೀಯ ಹೆದ್ದಾರಿ ದುರಸ್ತಿ, ಕೂಳೂರಿನ ಹೊಸ ಸೇತುವೆ ಹಾಗೂ ನಂತೂರಿನಲ್ಲಿ ಮೇಲೇತುವೆ ಕಾಮಗಾರಿಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಒತ್ತಾಯಿಸಿ ನಾವು ಆಯೋಜಿಸಿದ್ದ ಸಾಮಾನ್ಯ ಧರಣಿಗೆ ಅನುಮತಿ ಕೋರಿದಾಗ ಪೊಲೀಸ್ ಆಯುಕ್ತರು 10 ದಿನಗಳ ಕಾಲ ನಮ್ಮನ್ನು ಅಲೆದಾಡಿಸಿ, ಅನುಮತಿ ನಿರಾಕರಿಸಿದರು. ಅನುಮತಿ ನಿರಾಕರಿಸಿದರೂ ನಾವು ಧರಣಿ ಮಾಡುತ್ತೇವೆ ಎಂದಾಗ ನಮ್ಮ ಮನೆಗೆ ಪೊಲೀಸರನ್ನು ಕಳುಹಿಸಿದರು. ಇದರಿಂದಾಗಿ ಗೊತ್ತಾಗುತ್ತದೆ ಅವರೊಬ್ಬ ಸರ್ವಾಧಿಕಾರಿ ಎಂದು. ನಾವು ರಾಷ್ಟ್ರೀಯ ಹೆದ್ದಾರಿ, ಕೂಳೂರು ಸೇತುವೆ, ನಂತೂರು ಪ್ರೈ ಓವ‌ರ್ ಬಗ್ಗೆ ಮಾತನಾಡಿದರೆ ಅದು ಬಿಜೆಪಿಯ ಸಂಸದ, ಶಾಸಕರಿಗೆ ಮುಜುಗರವಾಗುತ್ತದೆ. ಅದನ್ನು ನಮ್ಮ ಪೊಲೀಸ್ ಆಯಕ್ತರು ಇಷ್ಟಪಡುತ್ತಿಲ್ಲ. ನಮ್ಮ ಧರಣಿ, ಪ್ರತಿಭಟನೆಗಳಿಗೆ ನಿಷೇಧ ಹೇರುವ ಆಯುಕ್ತರು ಬಿಜೆಪಿಯ ಸಂಸದ, ಶಾಸಕರು ಯಾವುದೇ ರೀತಿಯ ಮೆರವಣಿಗೆ ಮಾಡಿದರೂ ಅದಕ್ಕೆ ಅನುಮತಿ ನೀಡುತ್ತಾರೆ ಎಂದು ಆರೋಪಿಸಿದರು.

ಸಚಿವ ಲಕ್ಷ್ಮೀ ಹೆಬ್ಬಾಳ್ಳರ್ ಬಗ್ಗೆ ಕೆಟ್ಟದಾಗಿ ಮಾತನಾಡಿದ ಸಿ.ಟಿ.ರವಿಯನ್ನು ಬೆಂಬಲಿಸಿ ಮಂಗಳೂರು ನಗರ ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಅಕಾಂಗ್ರೆಸ್ ಕಚೇರಿಗೆ ನಡೆಸಿದ ಮೆರವಣಿಗೆಗೆ ಸಾಕಷ್ಟು ಪೊಲೀಸ್ ಬಂದೋಬಸ್ತ್ ಮಾಡಿದ್ದ ಪೊಲೀಸ್ ಆಯುಕ್ತರು, ಮೆರವಣಿಗೆ ಕಾಂಗ್ರೆಸ್ ಕಚೇರಿ ಮುಂಭಾಗ ಬಂದಾಗ ಸಾಂಕೇತಿಕ ಬಂಧನ ಮಾಡಿದರು ಎಂದು ಆಪಾದಿಸಿದರು.

ಜನಪರ ಸಂಘಟನೆಗಳಿಗೆ ನೀಡುವ ನೋಟಿಸ್ ಅನ್ನು ಬಿಜೆಪಿ ನಡೆಸುವ ಪ್ರತಿಭಟನೆಗಳಿಗೂ ನೀಡಿ ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದರು.

ಪೊಲೀಸ್ ಆಯುಕ್ತರು ಬಿಜೆಪಿ ಹಿತಾಸಕ್ತಿಗಳ ಹಿತ ಕಾಪಾಡುತ್ತಿದ್ದಾರೆ, ಮತೀಯ ಶಕ್ತಿಗಳಿಗೆ ಗೂಂಡಾಗಳಿಗೆ ಭಯರಹಿತ ವಾತಾವರಣ ಮಂಗಳೂರಿನಲ್ಲಿದೆ. ಎಸ್ಪಿ ಲಿಮಿಟ್ನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿಲ್ಲ. ಅಕ್ರಮ ಮರಳುಗಾರಿಕೆ ನಡೆಯುತ್ತಿಲ್ಲ. ಆದರೆ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆಗೆ ಪೊಲೀಸರಿಂದ ರಕ್ಷಣೆ ನೀಡಲಾಗುತ್ತದೆ ಎಂದು ಆರೋಪಿಸಿದರು.

Leave a Reply

Your email address will not be published. Required fields are marked *