ಬೆಂಗಳೂರು:(ಡಿ.26) ನಗರದಲ್ಲಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮಹಿಳೆಯರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಗರ ಪೊಲೀಸರು ವುಮೆನ್ಸ್ ಹೈಲ್ಯಾಂಡ್, ಪಿಕಪ್—ಡ್ರಾಪ್ ಗೆ ಕ್ಯಾಬ್ ಸೌಲಭ್ಯ, ಚೆನ್ನಮ್ಮ ಪಡೆ ಸೇರಿದಂತೆ ಹಲವು ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಇದನ್ನೂ ಓದಿ: ಉಡುಪಿ: ಉಡುಪಿಗೆ ಆಗಮಿಸಿದ ಹುತಾತ್ಮ ಯೋಧ ಅನೂಪ್ ಪಾರ್ಥಿವ ಶರೀರ
ಪ್ರಮುಖವಾಗಿ ಬ್ರಿಗೇಡ್ ರಸ್ತೆ, ಚರ್ಚ್ಸ್ಟ್ರೀಟ್, ಎಂ.ಜಿ.ರಸ್ತೆಯಲ್ಲಿ ಹೆಚ್ಚಾಗಿ ಹೊಸ ವರ್ಷಾಚರಣೆಗೆ ಜನಸಂದಣಿ ಸೇರುವುದರಿಂದ 15ಕ್ಕೂ ಹೆಚ್ಚು ವುಮೆನ್ಸ್ ಹೈಲ್ಯಾಂಡ್ ಸ್ಥಾಪಿಸಲಾಗಿದೆ.
ಅದೇ ರೀತಿ ಇಂದಿರಾನಗರ, ಕೋರಮಂಗಲದಲ್ಲೂ ವುಮೆನ್ಸ್ ಹೈಲ್ಯಾಂಡ್ ತೆರೆಯಲಾಗಿದೆ. ನೈಟ್ ಪಾರ್ಟಿ ನಡೆಯುವ ಪಬ್, ಬಾರ್ ಅಂಡ್ ರೆಸ್ಟೋರೆಂಟ್, ಕ್ಲಬ್, ಹೋಟೆಲ್ಗಳಲ್ಲಿ ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಮಹಿಳೆಯರಿಗಾಗಿ ಕ್ಯಾಬ್ ಸೌಲಭ್ಯಗಳನ್ನು ಆಯೋಜಕರೇ ಒದಗಿಸಲಿದ್ದಾರೆ.
ಪಾರ್ಟಿಗಳಲ್ಲಿ ಪಾಲ್ಗೊಳ್ಳುವ ಮಹಿಳೆಯರು ಮದ್ಯ ಸೇವಿಸಿ ಅಸ್ವಸ್ಥರಾದರೆ ಅವರನ್ನು ಮನೆಗೆ ಕಳುಹಿಸಲು ಕ್ಯಾಬ್ ಸೌಲಭ್ಯವನ್ನು ಮಾಲೀಕರು ನೀಡಲಿದ್ದಾರೆ.
ಅಲ್ಲದೆ ಅಂತಹ ಪರಿಸ್ಥಿತಿಯಲ್ಲಿ ತಮ್ಮ ವಾಹನಗಳನ್ನು ಚಲಾಯಿಸಲು ಸಾಧ್ಯವಾಗದಿದ್ದರೆ ಅವರುಗಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವ ಜವಾಬ್ದಾರಿಯನ್ನು ಆಯೋಜಕರೇ ವಹಿಸಿಕೊಂಡು ಕ್ಯಾಬ್ ವ್ಯವಸ್ಥೆ ಮಾಡುವಂತೆ ನಗರ ಪೊಲೀಸ್ ಪೊಲೀಸರು ಸೂಚಿಸಿದ್ದಾರೆ.