ಬೆಳ್ತಂಗಡಿ,ಡಿ.29( ಯು ಪ್ಲಸ್ ಟಿವಿ): 2019ರ ಆಗಸ್ಟ್ 9 ತಾರೀಕು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಚಾರ್ಮಾಡಿ ಸಮೀಪದ ಕೊಳಂಬೆಯಲ್ಲಿ ಸಂಭವಿಸಿದ ಭೀಕರ ಪ್ರವಾಹದ ಕುರಿತಾದ ದುರಂತವನ್ನು ನೆನಪಿಸುವ ಮತ್ತು ಅಲ್ಲಿಯ ಜನತೆ ಮತ್ತೆ ಹೇಗೆ ಬದುಕು ಕಟ್ಟಿಕೊಂಡರು ಎಂಬುವುದರ ಕುರಿತಾದ ಕಿರುಚಿತ್ರವೊಂದು ಬೋಧಿ ಮೀಡಿಯಾ ಪ್ರೊಡಕ್ಷನ್ ಸಹಕಾರದೊಂದಿಗೆ ಕೋಟ್ಯಾನ್ ಯೂಟ್ಯೂಬ್ ಚಾನೆಲ್ ಹಾಗೂ ಫೇಸ್ ಬುಕ್ ಪೇಜ್ ನಲ್ಲಿ ಬಿಡುಗಡೆಯಾಗಿ ಸಾರ್ವಜನಿಕರ ಪ್ರಶಂಸೆಗೂ ಪಾತ್ರವಾಗಿತ್ತು.
ಇದನ್ನೂ ಓದಿ: ಕೊಕ್ಕಡ: ಕೊಕ್ಕಡ ದೇವಸ್ಥಾನದ ಶ್ಯಾಮ ಬಸವ ಇನ್ನಿಲ್ಲ
ಸದ್ಯ ಈ ಕಿರು ಚಿತ್ರವೂ ಪಶ್ಚಿಮ ಬಂಗಾಳದಲ್ಲಿ ನಡೆಯುವ ರೆಡ್ ಇನ್ ಕಾರ್ನೇಷನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ- 2025ಕ್ಕೆ ಆಯ್ಕೆಯಾಗಿದೆ. ಇದಕ್ಕೆ ಚಿತ್ರತಂಡ ಯು ಪ್ಲಸ್ ವಾಹಿನಿಯ ಮುಖಾಂತರ ಸಂಭ್ರಮ ವ್ಯಕ್ತಪಡಿಸಿದ ಸಾಮಾಜಿಕ ಕಳಕಳಿಯ ಈ ಚಿತ್ರದಲ್ಲಿ ಇರುವುದರಿಂದ ನಮ್ಮ ಕೊಳಂಬೆ ಕಿರುಚಿತ್ರ ಪಶ್ಚಿಮ ಬಂಗಾಳದಲ್ಲಿ ನಡೆಯುವ ರೆಡ್ ಇನ್ ಕಾರ್ನೇಷನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ- 2025ಕ್ಕೆ ಆಯ್ಕೆಯಾಗಿದೆ ಎಂದು ಹೇಳಿದೆ.
ಇನ್ನು ಈ ಚಿತ್ರವನ್ನು ಕೋಟ್ಯಾನ್ ಕ್ರಿಯೇಷನ್ಸ್ ನಿರ್ಮಾಣ ಮಾಡಿದ್ದು, ಕ್ಯಾಮಿಡಿ ಕಿಲಾಡಿ ಖ್ಯಾತಿಯ ಮತ್ತು ದಸ್ಕತ್ ತುಳು ಚಲನ ಚಿತ್ರ ಖ್ಯಾತಿಯ ಅನೀಶ್ ಪೂಜಾರಿ ವೇಣೂರು ಅವರು ಇದನ್ನು ನಿರ್ದೇಶನ ಮಾಡುವುದರ ಜೊತೆಗೆ ಚಿತ್ರ ಕಥೆಯನ್ನು ಕೂಡ ಬರೆದಿದ್ದಾರೆ. ಚಿತ್ರಕ್ಕೆ ದೀಕ್ಷಿತ್ ಧರ್ಮಸ್ಥಳ ಅವರ ಛಾಯಾಗ್ರಹಣವಿದೆ ,ಗಣೇಶ್ ನೀರ್ಚಾಲ್ ಅವರ ಸಂಕಲನವಿದೆ, ಗಾಯಕಿ ಮಾನಸ ಹೊಳ್ಳ ಅವರ ಸಂಗೀತವಿದೆ. ತಂಡದಲ್ಲಿ ದಿನೇಶ್ ಕೋಟ್ಯಾನ್ , ಸಂತೋಷ ಆಚಾರ್ಯ ಗುಂಪಲಾಜೆ, ನಿತೀಶ್ ಶೆಟ್ಟಿ, ದೀಕ್ಷಿತ್ ಕೆ ಅಂಡಿಂಜೆ , ಮನೋಜ್ , ಆನಂದ್, ನೀರಜ್, ನಿತೀಶ್ ಬಾರ್ಯ, ಪ್ರಜ್ಞೇಶ್ ಶೆಟ್ಟಿ ಇದ್ದಾರೆ.
ಘಟನೆಯ ವಿವರ:
2019ರ ಆಗಸ್ಟ್. 9 ತಾರೀಕಿನಂದು ಭೀಕರ ಪ್ರವಾಹಕ್ಕೆ ಮೃತ್ಯುಂಜಯ ನದಿ ಉಕ್ಕಿ ಹರಿದ ಪರಿಣಾಮ ಚಾರ್ಮಾಡಿ ಸಮೀಪದ ಕೊಳಂಬೆ ಎಂಬ ಪುಟ್ಟ ಊರಿನ ಹಲವು ಮನೆಗಳು ಜಲಸಮಾಧಿಯಾಗಿತ್ತು. ವರುಣನ ತಾಂಡವ ನೃತ್ಯಕ್ಕೆ ಅಕ್ಕಪಕ್ಕದ 20 ಮನೆಗಳು ಮರಳು ದಿಬ್ಬದೊಳಕ್ಕೆ ಹುದುಗಿ ಹೋಗಿತ್ತು. ಕೃಷಿ ಭೂಮಿ ಮರಳು ಭೂಮಿಯಂತೆ ಕಾಣುತ್ತಿತ್ತು.
ಕೊಳಂಬೆ ನಿವಾಸಿಗಳು ಊರೇ ಬಿಟ್ಟು ಹೋಗುವ ಸ್ಥಿತಿ ನಿರ್ಮಾಣವಾಗಿತ್ತು. ಆಗ ಉಜಿರೆಯ ಬದುಕು ಕಟ್ಟೋಣ ತಂಡ ಅನ್ನೋ ಯುವಕರ ತಂಡವೊಂದು ಕೊಳಂಬೆಯನ್ನು ಮತ್ತೆ ಕಟ್ಟುವ ಕಾರ್ಯಕ್ಕೆ ಮುಂದಾಯಿತು. ಉಜಿರೆಯ ಉದ್ಯಮಿಗಳಾದ ಮೋಹನ್ ಕುಮಾರ್ ಹಾಗೂ ರಾಜೇಶ್ ಪೈ ನೇತೃತ್ವದಲ್ಲಿ ನೂರಕ್ಕೂ ಅಧಿಕ ಯುವಕರ ತಂಡ ಮರಳು ತೆರವುಗೊಳಿಸಿ 20ಕ್ಕೂ ಅಧಿಕ ಕುಟುಂಬಗಳ ಬದುಕು ಕಟ್ಟಲು ಹೆಗಲು ಕೊಟ್ಟು ನಿಂತಿತು.
ಈ ಪರಿವರ್ತನೆಗೆ ವಿದ್ಯಾರ್ಥಿಗಳು, ಸಂಘ ಸಂಸ್ಥೆ, ಗ್ರಾಮಾಭಿವೃದ್ಧಿ ಯೋಜನೆ ಸೇರಿ 5,000ಕ್ಕೂ ಅಧಿಕ ಮಂದಿ ಶ್ರಮದಾನದ ಮೂಲಕ ನೆರವಿಗೆ ನಿಂತರು. ಕೊಳಂಬೆಯಲ್ಲಿ ಸಂಪೂರ್ಣ ನಾಶವಾಗಿದ್ದ 12 ಮನೆಗಳನ್ನು ಗುರುತಿಸಿ ಕಂದಾಯ ಇಲಾಖೆ ನೀಡಿದ ವರದಿಯನುಸಾರ ಬದುಕು ಕಟ್ಟೋಣ ಟೀಂ ಫೀಲ್ಡಿಗಿಳಿಯಿತು. ಇದಾಗಿ 5 ವರ್ಷ ಕಳೆದಿದೆ. ಬದುಕು ಕಟ್ಟೋಣ ತಂಡ ಎರಡು ವರ್ಷಗಳಿಂದ 12 ಮನೆಗಳನ್ನು ನಿರ್ಮಾಣ ಮಾಡಿದೆ.
ಇದಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಹಾಗೂ ಹರ್ಷೇಂದ್ರ ಹೆಗ್ಗಡೆ ಯವರ ಸಹಕಾರದೊಂದಿಗೆ ದಾನಿಗಳ ಸಹಕಾರದಿಂದ ನೆರವು ಸಿಕ್ಕಿತ್ತು. ಯಾವ ಸಾಕ್ಷಿಗಳು ಉಳಿಯದಂತೆ ಅಕ್ಷರಶಃ ನರಕವಾಗಿದ್ದ ಬೆಳ್ತಂಗಡಿಯ ಕೊಳಂಬೆ ಗ್ರಾಮದಲ್ಲಿ ಪ್ರವಾಹದ ಮೂರು ವರ್ಷದ ಬಳಿಕ ಪವಾಡವೊಂದು ನಡೆದಿದೆ. ಮನೆ, ಕೃಷಿ ಭೂಮಿ ಕಳೆದುಕೊಂಡು ಅನಾಥವಾಗಿದ್ದ ಜನರ ಬದುಕನ್ನು ಮತ್ತೆ ಆ ಯುವಕರ ತಂಡ ಕಟ್ಟಿ ಕೊಟ್ಟಿದೆ. ಬೆಳ್ತಂಗಡಿಯ ಉಜಿರೆಯ ‘ಬದುಕು ಕಟ್ಟೋಣ’ ತಂಡ ಪ್ರವಾಹಕ್ಕೆ ತತ್ತರಿಸಿದ್ದ ಬೆಳ್ತಂಗಡಿಯ ಕೊಳಂಬೆ ಗ್ರಾಮದಲ್ಲಿ 12 ಮನೆಗಳನ್ನು ಮತ್ತೆ ನಿರ್ಮಿಸಿ ಶಾಸ್ತ್ರೋಕ್ತವಾಗಿ ಗೃಹ ಪ್ರವೇಶ ಕೂಡ ಮಾಡಿತ್ತು.