ಕಾರವಾರ :(ಡಿ.29) ಮುರುಡೇಶ್ವರ ಕಡಲತೀರದಲ್ಲಿದ್ದ ಅನಧಿಕೃತ ಗೂಡಂಗಡಿಗಳ ತೆರವು ಕಾರ್ಯಾಚರಣೆಯನ್ನು ಅಧಿಕಾರಿಗಳು ಆರಂಭಿಸಿದ್ದಾರೆ.
ಇದನ್ನೂ ಓದಿ: ಕಾಸರಗೋಡು: ಸ್ನಾನಕ್ಕೆಂದು ನದಿಗೆ ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ ಸಾವು!!!
ಮುರುಡೇಶ್ವರದ ಕಡಲ ತೀರದಲ್ಲಿ ಸಿಆರ್ ಝೆಡ್ ನಿಯಮ ಉಲ್ಲಂಘಿಸಿ ಸುಮಾರು 80 ಕ್ಕೂ ಹೆಚ್ಚು ಗೂಡಂಗಡಿಗಳನ್ನು ಕಡಲ ತೀರದಲ್ಲಿ ನಿರ್ಮಿಸಿಕೊಂಡು , ಬೀಚ್ ಪ್ರವೇಶಕ್ಕೆ ಸಹ ಇಕ್ಕಟ್ಟಿನ ವಾತಾವರಣ ಸೃಷ್ಟಿಸಿದ್ದರು . ಗ್ರಾಮ ಪಂಚಾಯತ್ ಹಾಗೂ ಕಂದಾಯ ಇಲಾಖೆ ಇದೀಗ ಅನಧಿಕೃತ ಗೂಡಂಗಡಿ ತೆರವು ಮಾಡಲು ಪ್ರಾರಂಭಿಸಿದೆ.
ಕಾರಣವೇನು?
ಡಿಸೆಂಬರ್ 10 ರಂದು ಕೋಲಾರ ಜಿಲ್ಲೆಯ ಮುಳುಬಾಗಿಲಿನ ಮಾಸ್ತಿಕಟ್ಟಾ ಮುರಾರ್ಜಿ ದೇಸಾಯಿ ವಸತಿ ಶಾಲೆಯಿಂದ ಪ್ರವಾಸಕ್ಕೆ ಬಂದಿದ್ದ 60 ವಿದ್ಯಾರ್ಥಿಗಳ ಪೈಕಿ, ನಾಲ್ವರು ವಿದ್ಯಾರ್ಥಿನಿಯರು ಕಡಲತೀರದಲ್ಲಿ ಆಟವಾಡುವ ವೇಳೆ ಸಮುದ್ರದ ಅಲೆಗೆ ಸಿಲುಕಿ ಸಾವನ್ನಪ್ಪಿದ್ದರು.ಇದಾದ ನಂತರದಲ್ಲಿ ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹಾಕಲಾಗಿತ್ತು. ಇನ್ನೂ ದಿನ ಕಳೆದಂತೆ ಮುರುಡೇಶ್ವರ ಕಡಲತೀರದಲ್ಲಿ ಗೂಡಂಗಡಿಗಳು ಹೆಚ್ಚಾಗುತ್ತಿದ್ದು, ಇದರಿಂದ ಇಲ್ಲಿಗೆ ಬರುವ ಪ್ರವಾಸಿಗರಿಗೆ ವಾಹನ ಪಾರ್ಕಿಂಗ್ ಮಾಡಲು ಕಷ್ಟವಾಗುತ್ತಿರುವ ಬಗ್ಗೆ ಸಾರ್ವಜನಿಕರು ,ಸ್ಥಳೀಯ ಗ್ರಾಮ ಪಂಚಾಯತ್ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದ್ದರು.
ಈ ಹಿನ್ನಲೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯತ ಅಧಿಕಾರಿಗಳು ಇಂದು ಬೆಳಗ್ಗಿನಿಂದಲೇ ಕಡಲತೀರದಲ್ಲಿ ಕಾನೂನು ಬಾಹಿರವಾಗಿ ಇಟ್ಟುಕೊಳ್ಳಲಾದ ಗೂಡಂಗಡಿಗಳ ತೆರವು ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.