ಉಳ್ಳಾಲ:(ಜ.1) ಸ್ಕೂಟರ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಸಂಕೊಳಿಗೆ ಬಳಿ ಮಂಗಳವಾರ ತಡರಾತ್ರಿ ಸಂಭವಿಸಿದೆ. ಮೃತ ಸವಾರನನ್ನು ನಾಟೆಕಲ್ ಪನೀರ್ ನಿವಾಸಿ ಉಮ್ಮರ್ ಫಾರೂಕ್ ಯಾನೆ ಅಝರ್(33) ಎಂದು ಗುರುತಿಸಲಾಗಿದೆ.
ಸ್ವಿಗ್ಗಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಅಝರ್, ಮಂಗಳವಾರ ರಾತ್ರಿ ತಲಪಾಡಿಯಿಂದ ಬರುತ್ತಿದ್ದ ವೇಳೆ ಸಂಕೊಳಿಗೆ ಹಾಲ್ ಬಳಿ ಮಂಗಳೂರು ಕಡೆ ಹೋಗುತ್ತಿದ್ದ ಲಾರಿ ಸ್ಕೂಟರ್ ಗೆ ತಾಗಿದೆ ಎನ್ನಲಾಗಿದೆ. ಈ ವೇಳೆ ಸವಾರ ಅಝರ್ ರಸ್ತೆಗೆಸೆಯಲ್ಪಟ್ಟಿದ್ದು, ಈ ಸಂದರ್ಭ ಲಾರಿಯ ಹಿಂಬದಿ ಚಕ್ರ ಅವರ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಅಝರ್ ಅವರ ಮೃತದೇಹವನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಗೆ ಕಾರಣವಾದ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.