Sun. Jan 5th, 2025

Belthangady: ಕೊಕ್ಕಡದ ಅಂಗಡಿಯಿಂದ 2 ಲಕ್ಷ ಹಣ ಕಳ್ಳತನ ಪ್ರಕರಣ – ಆರೋಪಿಗಳಿಬ್ಬರನ್ನು ಬಾಡಿ ವಾರೆಂಟ್ ಮೂಲಕ ಕರೆತಂದ ಧರ್ಮಸ್ಥಳ ಪೊಲೀಸರು

ಬೆಳ್ತಂಗಡಿ :(ಜ.2) ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಕೊಕ್ಕಡ ಗ್ರಾಮದ ಕೊಕ್ಕಡ ಪೇಟೆಯಲ್ಲಿರುವ ಇಸುಬು ಎಂಬವರ ಬಾಳೆಹಣ್ಣು ಮತ್ತು ಅಡಿಕೆ ಅಂಗಡಿಯ ಕ್ಯಾಶ್ ಡ್ರಾಯರ್ ನಿಂದ ಅಪರಿಚಿತ ವ್ಯಕ್ತಿ 2024 ರ ನ. 15 ರಂದು 450 ಬಾಳೆಹಣ್ಣು ಖರೀದಿಸುವ ನೆಪದಲ್ಲಿ ಬಂದು ಎರಡು ಲಕ್ಷ ರೂಪಾಯಿ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕಳ್ಳತನ ಪ್ರಕರಣದ ಆರೋಪಿಗಳಿಬ್ಬರನ್ನು ಮಡಿಕೇರಿ ಜೈಲಿನಿಂದ ಬಾಡಿ ವಾರೆಂಟ್ ಮೂಲಕ ಧರ್ಮಸ್ಥಳ ಪೊಲೀಸ್ ಠಾಣೆಗೆ ಕರೆತಂದು ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ: ಉಡುಪಿ: ಜಿಮ್ ನಲ್ಲಿ ಹೊಡೆದಾಟ


ಬಾಡಿ ವಾರೆಂಟ್ ಮೂಲಕ ತನಿಖೆ: ಇಬ್ಬರು ಆರೋಪಿಗಳ ವಿಚಾರಣೆಗಾಗಿ ಮಡಿಕೇರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿ ಒಂದು ದಿನದ ಬಾಡಿ ವಾರಂಟ್ ಮೂಲಕ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಮರ್ಥ್ ಆರ್ ಗಾಣಿಗೇರ ಮತ್ತು ತಂಡದವರು ಮಡಿಕೇರಿ ಜೈಲಿನಿಂದ ಆರೋಪಿಗಳಿಬ್ಬರಾದ ಹಾಸನ ಜಿಲ್ಲೆಯ ಮಹಮ್ಮದ್ ಇಕ್ಬಾಲ್(56) ಮತ್ತು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ನಿವಾಸಿ ಮಹಮ್ಮದ್ ಶಹಬಾದ(25) ಎಂಬವರನ್ನು ಡಿ.30 ರಂದು ಕರೆತಂದು ಬೆಳ್ತಂಗಡಿ ಕೋರ್ಟ್ ಗೆ ಹಾಜರುಪಡಿಸಿ ನಂತರ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ತನಿಖೆ ನಡೆಸಿ ಆರೋಪಿಗಳಿಂದ 20 ಸಾವಿರ ಹಣವನ್ನು ವಶಪಡಿಸಿಕೊಂಡಿದ್ದಾರೆ. ಬಳಿಕ ಇಬ್ಬರು ಆರೋಪಿಗಳನ್ನು ಡಿ.31 ರಂದು ಬೆಳ್ತಂಗಡಿ ಕೋರ್ಟ್ ಗೆ ಹಾಜರುಪಡಿಸಿ ವಾಪಸ್ ಮಡಿಕೇರಿ ಜೈಲಿಗೆ ಕಳುಹಿಸಿದ್ದಾರೆ.


ಕೊಕ್ಕಡ ಕಳ್ಳತನ ಪ್ರಕರಣದಲ್ಲಿ ಆರೋಪಿಗಳ ಬಗ್ಗೆ ಸಿಸಿ ಕ್ಯಾಮರಾ ಹಾಗೂ ಟೆಕ್ನಿಕಲ್ ಆಧಾರದಲ್ಲಿ ಮಾಹಿತಿ ಕಲೆ ಹಾಕಿ ಧರ್ಮಸ್ಥಳ ಪೊಲೀಸರ ತಂಡ ಮಡಿಕೇರಿಗೆ ಹೋಗಿ ಕಾರ್ಯಾಚರಣೆ ಮಾಡುತ್ತಿರುವ ಕೆಲ ಗಂಟೆಗಳ ಮೊದಲು ಆರೋಪಿಗಳಿಬ್ಬರು ಮಡಿಕೇರಿ ಜಿಲ್ಲೆಯ ಸೋಮವಾರ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನಕ್ಕೆ ಯತ್ನಿಸುತ್ತಿರುವಾಗ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದು ಮಡಿಕೇರಿ ಜೈಲು ಪಾಲಾಗಿದ್ದರು.


ಮೂರು ಜಿಲ್ಲೆಯ ನಟೋರಿಯಸ್ ಕಳ್ಳರು: ಉಡುಪಿ, ದಕ್ಷಿಣ ಕನ್ನಡ, ಮಡಿಕೇರಿ ಜಿಲ್ಲೆಯಲ್ಲಿ ಮಹಮ್ಮದ್ ಇಕ್ಬಾಲ್ ವಿರುದ್ಧ 8 ಪ್ರಕರಣ ಹಾಗೂ ಮಹಮ್ಮದ್ ಶಹಬಾದ ವಿರುದ್ಧ 3 ಪ್ರಕರಣ ದಾಖಲಾಗಿದೆ.


ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ನೇತೃತ್ವದ ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಸಮರ್ಥ್ ಆರ್ ಗಾಣಿಗೇರ ಮತ್ತು ಸಬ್ ಇನ್ಸ್ಪೆಕ್ಟರ್ ಕಿಶೋರ್ ಕುಮಾರ್ ಹಾಗೂ ತಂಡದವರು ಸಹಕರಿಸಿದ್ದಾರೆ.

Leave a Reply

Your email address will not be published. Required fields are marked *