Wed. Jan 8th, 2025

Belthangady: ಮುಗ್ರೋಡಿ ಕನ್ಸ್ಟ್ರಕ್ಷನ್ ಗೆ ಕಳ್ಳರ ಕಾಟ – ಒಂದೇ ತಿಂಗಳಲ್ಲಿ 20 ಬ್ಯಾಟರಿಗೆ ಕನ್ನ – ನಿಂತ ವಾಹನಗಳಿಂದ ಡೀಸೆಲ್ ಕಳ್ಳತನ

ಬೆಳ್ತಂಗಡಿ :(ಜ.3) ಪುಂಜಾಲಕಟ್ಟೆ-ಚಾರ್ಮಾಡಿ ಹೆದ್ದಾರಿಯ ಕಾಮಗಾರಿ ಮುಗ್ರೋಡಿ ಕನ್ಸ್ಟ್ರಕ್ಷನ್ ತೆಕ್ಕೆಗೆ ಬಂದ ನಂತರ ಕಾಮಗಾರಿ ವೇಗವಾಗಿ ಸಾಗುತ್ತಿದೆ. ಹಲವೆಡೆ ರಸ್ತೆಗಳು ಪೂರ್ಣಗೊಂಡಿದೆ. ಹೀಗಾಗಿ ಈ ಹಿಂದೆ ಹೆದ್ದಾರಿ ಕಾಮಗಾರಿಯಿಂದ ರೋಸಿ ಹೋಗಿದ್ದ ಬೆಳ್ತಂಗಡಿ ಜನತೆಯ ಮುಖದಲ್ಲಿ ಮಂದಹಾಸ ಮೂಡಿದೆ.

ಇದನ್ನೂ ಓದಿ: ಚಿಕ್ಕೋಡಿ: ಪತ್ನಿ ಸರಸಕ್ಕೆ ಬರದಿದ್ದಾಗ ಮಗಳ ಮೇಲೆ ಎರಗಲೇತ್ನಿಸಿದ ಪಾಪಿ ತಂದೆ

ಆದರೆ ಅತ್ಯುತ್ತಮವಾಗಿ ಕೆಲಸ ಮಾಡುತ್ತಿರುವ ಮುಗ್ರೋಡಿ ಕನ್ಸ್ಟ್ರಕ್ಷನ್ ಗೆ ಈಗ ಕಳ್ಳರ ಹಾವಳಿ ಹೆಚ್ಚಿದೆ. ಹೌದು, ಹೆದ್ದಾರಿಯ ಕಾಮಗಾರಿ ನಡೆಸಲು ದೊಡ್ಡ ದೊಡ್ಡ ಹಿಟ್ಯಾಚಿಗಳನ್ನು ಬಳಕೆ ಮಾಡಲಾಗುತ್ತಿದೆ. ದಿನದ ಕೆಲಸದ ನಂತರ ಈ ದೊಡ್ಡ ದೊಡ್ಡ ಹಿಟ್ಯಾಚಿಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಹೋಗಲಾಗುತ್ತಿದೆ. ಆದರೆ ಕಳ್ಳರು ಹಿಟ್ಯಾಚಿಗಳ ಬ್ಯಾಟರಿ ಮತ್ತು ಡೀಸೆಲ್ ಗೆ ಕನ್ನ ಹಾಕುತ್ತಿದ್ದಾರೆ.


20 ಬ್ಯಾಟರಿ ಕಳವು…!


ಹೀಗೆ ರಸ್ತೆ ಬದಿ ನಿಲ್ಲಿಸಿದ ಹಿಟ್ಯಾಚಿಗಳಿಂದ ಸರಿ ಸುಮಾರು 20 ಬ್ಯಾಟರಿಗಳನ್ನು ಕಳ್ಳರು ಎಗರಿಸಿದ್ದಾರೆ. ರಾತ್ರಿ ಸಮಯದಲ್ಲಿ ಬರುವ ಕಳ್ಳರು ಬ್ಯಾಟರಿಗಳನ್ನು ಕದ್ದುಕೊಂಡು ಹೋಗುತ್ತಿದ್ದಾರೆ. ಸರಿ ಸುಮಾರು ಲಕ್ಷ ಬೆಲೆಬಾಳುವ ಬ್ಯಾಟರಿಗಳು ಈಗಾಗಲೇ ಕಳವಾಗಿದೆ.


ವೇಗದ ಕಾಮಗಾರಿಗೆ ತೊಡಕು..!


ಬ್ಯಾಟರಿ ಕಳ್ಳತನದಿಂದ ಹೆದ್ದಾರಿಯ ಕಾಮಗಾರಿ ಕುಂಠಿತಗೊಳ್ಳುತ್ತಿದೆ. ಯಾಕೆಂದರೆ ಮುಗ್ರೋಡಿ ಕನ್ಸ್ಟ್ರಕ್ಷನ್ ಸಂಸ್ಥೆಯ ವಾಹನಗಳ ಎಲ್ಲಾ ಕೆಲಸಗಳು ಮಂಗಳೂರಿನಲ್ಲಿ ನಡೆಯುತ್ತಿದೆ. ಬ್ಯಾಟರಿ ಕೂಡ ಮಂಗಳೂರಿನಿಂದ ಪೂರೈಕೆಯಾಗುತ್ತದೆ. ಹೀಗಾಗಿ ಬ್ಯಾಟರಿ ಇಲ್ಲದೆ ಹಿಟ್ಯಾಚಿಗಳು ಕೆಲಸ ಮಾಡಲು ಆಗುತ್ತಿಲ್ಲ. ಬ್ಯಾಟರಿ ಬರುವವರೆಗೆ ಕಾಮಗಾರಿ ಸ್ಥಗಿತಗೊಳ್ಳುತ್ತಿದೆ.


ದೂರು ನೀಡಿದರೂ ಪ್ರಯೋಜನವಿಲ್ಲ…!


ಕಳ್ಳರ ಕಾಟದ ಬಗ್ಗೆ ಮುಗ್ರೋಡಿ ಕನ್ಸ್ಟ್ರಕ್ಷನ್ ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂಬ ಆರೋಪವಿದೆ. ದೂರು ನೀಡಿದರೂ ಯಾವುದೇ ಬೆಳವಣಿಗೆ ಆಗಿಲ್ಲ. ಕಳ್ಳತನ ಮತ್ತೆ ಮತ್ತೆ ನಡೆಯುತ್ತಿದೆ.

Leave a Reply

Your email address will not be published. Required fields are marked *