Tue. Jan 7th, 2025

Bantwal: ಕೋಚಿಂಗ್ ಪಡೆಯದೇ ಸ್ವ-ಪ್ರಯತ್ನದಿಂದ ಅಭ್ಯಾಸ ಮಾಡಿ ಪಿಎಸ್ ಐ ಪರೀಕ್ಷೆ ಪಾಸ್ ಮಾಡಿದ ಬಂಟ್ವಾಳ ಠಾಣೆಯ ಮುತ್ತಪ್ಪ

ಬಂಟ್ವಾಳ:(ಜ.4) ಕಡುಬಡತನದ ಕುಟುಂಬದಲ್ಲಿ ಹುಟ್ಟಿ ಸ್ವಪ್ರಯತ್ನದಿಂದ ಮತ್ತು ಛಲದಿಂದ ಹಂತಹಂತವಾಗಿ ಪೋಲೀಸ್ ಸಿಬ್ಬಂದಿಯೋರ್ವರು ಪೋಲೀಸ್ ಸಬ್ ಇನ್ಸ್ ಪೆಕ್ಟರ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಇದನ್ನೂ ಓದಿ: ತುಮಕೂರು: ಕಚೇರಿಯನ್ನೇ ಬೆಡ್‌ ರೂಂ ಮಾಡಿಕೊಂಡ ಡಿವೈಎಸ್ಪಿ


ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೆಬಾವಿ ಗ್ರಾಮದ ಯಮನಪ್ಪ ಅವರ ಪುತ್ರ ಮುತ್ತಪ್ಪ ಯಮನಪ್ಪ ಅರ್ವಾರ್ ಎಂಬವರು ಪಿ.ಎಸ್.ಐ.ಪರೀಕ್ಷೆ ಪಾಸ್ ಮಾಡಿದ್ದಾರೆ.


2021 ರಲ್ಲಿ ಪಿ‌.ಎಸ್.ಐ.ಪರೀಕ್ಷೆಗಾಗಿ ಅರ್ಜಿಯನ್ನು ಸಲ್ಲಿಸಲಾಗಿದ್ದು, 2024 ರ ಅಕ್ಟೋಬರ್ 3 ರಂದು ಪರೀಕ್ಷೆಯಲ್ಲಿ ಇವರು ಬರೆದು ಉತ್ತೀರ್ಣರಾಗಿದ್ದಾರೆ. ಡಿ. 25 ರಂದು ಪರೀಕ್ಷೆ ಫಲಿತಾಂಶ ಹೊರಬಿದ್ದಿದ್ದು, ಮುತ್ತಪ್ಪ ಅವರು ತೇರ್ಗಡೆಯಾಗಿರುವ ಬಗ್ಗೆ ತಿಳಿಸಿದ್ದಾರೆ.
2008 ರಲ್ಲಿ ದ.ಕ.ಜಿಲ್ಲೆಗೆ ಕೆ.ಎಸ್. ಆರ್.ಪಿ.ಮೂಲಕ ಪೋಲೀಸ್ ಇಲಾಖೆಯ ಮೆಟ್ಟಿಲು ಹತ್ತಿ, 2016 ರಲ್ಲಿ ಮತ್ತೆ ಪರೀಕ್ಷೆ ಬರೆದು ಸಿವಿಲ್ ಪೊಲೀಸ್ ಆಗಿ ಪರಿವರ್ತಿತರಾದರು.


ಮತ್ತೆ ಅದೇ ವರ್ಷದಿಂದ ಪಿ.ಎಸ್.ಐ.ಪರೀಕ್ಷೆ ಬರೆಯಲು ಆರಂಭಿಸಿ, ಸತತವಾಗಿ ಏಳು ಬಾರಿ ಪರೀಕ್ಷೆಯಲ್ಲಿ ಭಾಗವಹಿಸಿ, ಛಲವಾದಿಯಾಗಿರುವ ಇವರು ಏಳನೇ ಬಾರಿ ಬರೆದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.


ಪೋಲಿಸ್ ಸಿಬ್ಬಂದಿಯಾಗಿದ್ದು, ಒತ್ತಡದ ಮಧ್ಯೆ ಓದಿಕೊಂಡು ಪಿ.ಎಸ್.ಐ.ಪರೀಕ್ಷೆ ತೇರ್ಗಡೆ ಯಾದ ಇವರ ಪ್ರಯತ್ನಕ್ಕೆ ಮೇಲಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಕೂಲಿ ಮಾಡಿ ಬದುಕು ಕಟ್ಟಿಕೊಂಡಿರುವ ಬಡಕುಟುಂಬದಲ್ಲಿ ಹುಟ್ಟಿಬೆಳೆದು ಬಾಗಲಕೋಟೆ ಜಿಲ್ಲೆಯಿಂದ ದ.ಕ.ಜಿಲ್ಲೆಗೆ ಬಂದ ಮುತ್ತಪ್ಪ ಅವರು ಕಟ್ಟಿಕೊಂಡಿದ್ದ ಕನಸು ನನಸು ಮಾಡಿ ಮತ್ತೆ ಬೆಳಗಾವಿ ವಲಯದ ಪಿ‌.ಎಸ್.ಐ‌ ಆಗಿ ಕರ್ತವ್ಯಕ್ಕೆ ಹಾಜರಾಗುವಂತೆ ಇಲಾಖೆ ಅದೇಶ ನೀಡಿದೆ.
ತಾಯಿ ಮತ್ತು ಕುಟುಂಬವನ್ನು ಉತ್ತಮ ರೀತಿಯಲ್ಲಿ ನೋಡಿಕೊಂಡು ಸಮಾಜದಲ್ಲಿ ಒಬ್ಬ ಉತ್ತಮ ಅಧಿಕಾರಿಯಾಗಿ, ಸಮಾಜ ಸೇವೆ ಮಾಡುವ ಕನಸು ಇವರದ್ದು ಆಗಿದೆ.

Leave a Reply

Your email address will not be published. Required fields are marked *