ಪುತ್ತೂರು:(ಜ.5) ದೇಶಕ್ಕೆ ಶಕ್ತಿ ತುಂಬಿಸುವಂತಹ ಯೋಜನೆಗಳತ್ತ ನಾವು ದೃಷ್ಠಿ ಹರಿಸಬೇಕು. ಗೌಡ ಸಮುದಾಯಕ್ಕೆ ಆರ್ಥಿಕ ಶಕ್ತಿ ತುಂಬುವ ಸಮೃದ್ಧ ಯೋಜನೆಗಳತ್ತ ಚಿಂತನೆ ಹೆಚ್ಚಾಗಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಕಾಪು: ನಕಲಿ ದಾಖಲೆ ಸೃಷ್ಟಿಸಿ ಕಟಪಾಡಿ ಸಹಕಾರಿ ಬ್ಯಾಂಕ್ ನಿಂದ 45 ಲಕ್ಷ ರೂ. ಹಣ ಪಡೆದು ವಂಚನೆ
ಪುತ್ತೂರು ಒಕ್ಕಲಿಗ ಗೌಡಸಂಘ ಹಾಗೂ ಸಹಸಂಸ್ಥೆಗಳ ಆಶ್ರಯದಲ್ಲಿ ಶನಿವಾರ ಪುತ್ತೂರು ತೆಂಕಿಲ ಗೌಡ ಸಮುದಾಯಭವನದಲ್ಲಿ ನಡೆದ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ದಶಮಾನೋತ್ಸವ, ಸಾರ್ವಜನಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮದ ಸಭಾಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಇತಿಹಾಸದಲ್ಲಿ 800 ವರ್ಷಗಳ ಆಡಳಿತ ನಡೆಸಿದ ಹೆಮ್ಮೆ ಗೌಡರದ್ದಾಗಿದೆ. 21ನೇ ಶತಮಾನದಲ್ಲಿಯೂ ನಾಡನ್ನು ಆಳುವ ಶಕ್ತಿ ಗೌಡರಿಗೆ ಸಿಕ್ಕಿದೆ. ನಾಡಸೇವೆಯಲ್ಲಿ ಗೌಡ ಸಮುದಾಯದ ಮಹತ್ತರ ಕೊಡುಗೆ ಇದೆ. ಜಗತ್ತು ಸದಾ ಪರಿವರ್ತನೆಶೀಲ. ಇಲ್ಲಿ ಬದಲಾವಣೆಯೇ ಸ್ಥಿರ. ಆದರೆ ಸೋಮಾರಿತನದ ಜಾಡ್ಯದಿಂದ ನಾವು ಹೊರಬರಬೇಕು. ದೇಶದ ಪ್ರಗತಿಗಾಗಿ ನಾವು ಒಂದಾಗಬೇಕು. ಇದು ಕೇವಲ ಜಾತಿಗಾಗಿ ಅಲ್ಲ. ಇಡೀ ಸಮಾಜದ, ಜನಾಂಗದ ಸಂಘಟನೆ ನಮ್ಮ ಉದ್ದೇಶವಾಗಿರಬೇಕು. ಆರ್ಥಿಕತೆಯಲ್ಲಿ ದೃಢತೆ ಇದ್ದಾಗ ಮಾತ್ರ ನಮ್ಮ ಚಿಂತನೆಗಳು ಈಡೇರುವುದು ಸುಲಭವಾಗುತ್ತದೆ. ಆರ್ಥಿಕ ಸ್ವಾವಲಂಬಿತನ ಬದುಕಿನ ಅಭಿವೃದ್ಧಿಗೆ ಪೂರಕವಾಗುತ್ತದೆ. ಈ ನಿಟ್ಟಿನಲ್ಲಿ ಗೌಡ ಸಮುದಾಯದ ಯೋಚನೆಗಳು ಸಾಗಬೇಕಾಗಿದೆ ಎಂದು ಅವರು ಹೇಳಿದರು.
ಮಂಗಳೂರು ಆದಿಚುಂಚನಗಿರಿ ಶಾಖಾ ಮಠದ ಡಾ.ಧರ್ಮಪಾಲನಾಥ ಶ್ವಾಮೀಜಿ ಅವರು ಆಶೀರ್ವಚನ ನೀಡಿ, ಆಧುನಿಕ ಆವಿಷ್ಕಾರಗಳ ನಡುವೆ ಕಲ್ಮಷಗೊಳ್ಳುತ್ತಿರುವ ಮನಸ್ಸುಗಳಿಗೆ ಹಿರಿಯರ ಮಾರ್ಗದರ್ಶನ ಅತೀ ಅಗತ್ಯ. ಸಮಾಜದಲ್ಲಿ ಗುರುತಿಸಿಕೊಳ್ಳುವ ಮೂಲಕ ತಮ್ಮ ಅಸ್ಮಿಮತೆಯನ್ನು ಉಳಿಸಿಕೊಳ್ಳುವ ಕೆಲಸಕ್ಕೆ ಸಂಘಟನೆಗಳು ಆಸಕ್ತಿವಹಿಸಬೇಕಾಗಿದೆ. ಬದುಕು ಅರ್ಥಹೀನವಾಗದಂತೆ ಮನುಷ್ಯ ಜೀವನಾನ್ವೇಷನೆಗೆ ಮೊದಲ ಆದ್ಯತೆ ನೀಡಬೇಕು. ಇದರಿಂದ ಸಮಾಜದಲ್ಲಿ ಅರ್ಥಪೂರ್ಣ ಜೀವನ ಸಾಗಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪುತ್ತೂರು ಒಕ್ಕಲಿಗ ಸಂಘ ಸ್ವಸಹಾಯ, ಸಹಕಾರಿ ಸಂಘಗಳ ಮೂಲಕ ಸಮಾಜಕ್ಕೆ ಮಾದರಿಯಾಗಿ ನಿಂತಿದೆ ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ಪುತ್ತೂರಿನ ಒಕ್ಕಲಿಗ ಗೌಡ ಸಂಘ ಸಮರ್ಪಕವಾದ ಸಂಘಟನೆಯ ಮೂಲಕ ಗೌಡಸಮುದಾಯದಲ್ಲಿ ಆರ್ಥಿಕ ಶಕ್ತಿಯನ್ನು ಉದ್ದೀಪನೆ ಮಾಡುವ ಚಿಂತನೆ ಆರ್ಥಿಕ ಸ್ವಾಲಂಬಿತನಕ್ಕೆ ಕಾರಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉದ್ಯಮಿ ಕುಶಾಲಪ್ಪ ಗೌಡ, ನಿವೃತ್ತ ಶಿಕ್ಷಕಿ ವಸಂತಿ, ರಾಷ್ಟ್ರಮಟ್ಟದ ಕ್ರೀಡಾಪ್ರತಿಭೆ ಕೀರ್ತಿ ಗುಮ್ಮಟೆಗದ್ದೆ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ಅಶೋಕ್ ರೈ ಅವರನ್ನು ಧರ್ಮಪಾಲನಾಥ ಸ್ವಾಮೀಜಿ ಅವರು ಗೌರವಿಸಿದರು.
ಬೆಳಿಗ್ಗೆ ಸಭಾ ಕಾರ್ಯಕ್ರಮದ ಮೊದಲು ನೆಲ್ಲಿಕಟ್ಟೆಯಲ್ಲಿರುವ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಕಚೇರಿಯ ಮಹಡಿಯಲ್ಲಿ ರೂ.20 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಸಭಾಭವನವನ್ನು ಡಾ.ನಿರ್ಮಲಾನಂದನಾಥ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು.
ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಅಧ್ಯಕ್ಷ ಮಾಜಿ ಶಾಸಕ ಸಂಜೀವ ಮಠಂದೂರು, ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ದಯಾನಂದ ಕೆ ಎಸ್, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಒಕ್ಕಲಿಗ ಗೌಡ ಸೇವಾ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ರವಿ ಮುಂಗ್ಲಿಮನೆ, ಅಖಿಲ ಕರ್ನಾಟಕ ಮಹಿಳಾ ಒಕ್ಕಲಿಗರ ಘಟಕದ ರಾಜ್ಯಾಧ್ಯಕ್ಷೆ ಡಾ.ಶಾಂತ ಸುರೇಂದ್ರ ಗೌಡ,
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಮುಖ್ಯ ಪ್ರವರ್ತಕ ನ್ಯಾಯವಾದಿ ಮೋಹನ್ ಗೌಡ ಇಡ್ಯಡ್ಕ, ಶಮಾನೋತ್ಸವ ಸಮಿತಿ ಅಧ್ಯಕ್ಷ ಪಟೇಲ್ ಗೋಪಾಲಕೃಷ್ಣ ಗೌಡ ಚಾರ್ವಾಕ, ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು, ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷ ಎ ವಿ ನಾರಾಯಣ, ಟ್ರಸ್ಟ್ ಅಧ್ಯಕ್ಷ ಡಿ ವಿ ಮನೋಹರ್,ಪುರುಷೋತ್ತಮ ಮುಂಗ್ಲಿಮನೆ, ರಾಧಾಕೃಷ್ಣ ಬಂಬಿಲ,ವಸಂತ ವೀರಮಂಗಲ, ಸೀತಾರಾಮ ಕೇವಳ, ಗೌಡ ಮಹಿಳಾ ಸಂಘದ ಅಧ್ಯಕ್ಷ ವಾರಿಜ ಕೆ, ಯುವ ಗೌಡ ಸೇವಾ ಸಂಘದ ಅಧ್ಯಕ್ಷ ಅಮರನಾಥ್, ಟ್ರಸ್ಟ್ ನ ಕಾರ್ಯದರ್ಶಿ ದಿವ್ಯಪ್ರಸಾದ್, ಒಕ್ಕಲಿಗ ಗೌಡ ಸೇವಾ ಸಂಘದ ಮಾಜಿ ಅಧ್ಯಕ್ಷ ವಿಶ್ವನಾಥ ಗೌಡ ಕೆ ಮತ್ತಿತ್ತರರು ಉಪಸ್ಥಿತರಿದ್ದರು.