Tue. Jan 7th, 2025

Ujire: ಧ.ಮಂ.ಪ.ಪೂ. ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ವತಿಯಿಂದ ವಾರ್ಷಿಕ ಕಾರ್ಯಚಟುವಟಿಕೆಗಳ ಸಮಾರೋಪ ಕಾರ್ಯಕ್ರಮ

ಉಜಿರೆ:(ಜ.5) ಭಾರತದ ಪ್ರಾಚೀನತಮವಾದ ಹಾಗೂ ದೇವ ಭಾಷೆಯೆಂದು ಪ್ರಸಿದ್ಧವಾದ ಭಾಷೆಯೊಂದಿದ್ದರೆ ಅದು ಸಂಸ್ಕೃತವೇ ಆಗಿದೆ. ಭಾಷಾ ಕಲಿಕೆಯೂ ಸಹ ಶಿಕ್ಷಣದೊಂದಿಗೆ ಸಂವಹನ ಕಲೆ ಹಾಗೂ ಕೌಶಲ್ಯಕ್ಕೆ ಬುನಾದಿಯೇ ಸರಿ. ಇದರೊಂದಿಗೆ ಸೃಜನಶೀಲ ಚಟುವಟಿಕೆ ಇದ್ದರೆ ವಿದ್ಯಾರ್ಥಿಗಳ ಶಿಕ್ಷಣದಲ್ಲಿ ಮಹತ್ತರ ಬದಲಾವಣೆ ಸಾಧ್ಯ. ಇವೆಲ್ಲ ಮೌಲ್ಯಯುತ ಜೀವನಕ್ಕೆ ರಹದಾರಿಯಾಗಿದೆ. ಒಟ್ಟಾರೆ ಮೌಲ್ಯಯುತ ಜೀವನ ಪಾಠಕ್ಕೆ ಸಂಸ್ಕೃತ ಭಾಷೆ ಮುಖ್ಯ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಧನ್ಯ ಕುಮಾರ್ ಹೇಳಿದರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗ , ಸಂಸ್ಕೃತ ಸಂಘ ಹಾಗೂ ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಇವುಗಳ ವಾರ್ಷಿಕ ಕಾರ್ಯಚಟುವಟಿಕೆಗಳ ಸಮಾರೋಪ ಕಾರ್ಯಕ್ರಮದಲ್ಲಿ ಆಯ್ದ ಸಂಸ್ಕೃತ ಭಾಷಾ ವಿದ್ಯಾರ್ಥಿಗಳಿಗೆ ದಿ. ಕೋಟೇಶ್ವರ ಕೃಷ್ಣ ಐತಾಳ್ ಸ್ಮಾರಕ ವಿದ್ಯಾರ್ಥಿವೇತನ ನೀಡಿ ಮಾತನಾಡಿದರು.

ಇನ್ನೋರ್ವ ಅಭ್ಯಾಗತರಾದ ಉಜಿರೆಯ ಶ್ರೀ ಧ.ಮಂ ಸನಿವಾಸ ಪ.ಪೂ ಕಾಲೇಜಿನ ಸಂಸ್ಕೃತ ಭಾಷಾ ಉಪನ್ಯಾಸಕ ಮಹೇಶ್ ಭಟ್ ಮಾತನಾಡಿ ಸಂಸ್ಕೃತ ಭಾಷೆ ಹಾಗೂ ಭಾರತೀಯ ಸಂಸ್ಕೃತಿಗಳು ಭಾರತದ ಪ್ರತಿಷ್ಠಿತ ವಿಚಾರಗಳಾಗಿವೆ. ಸಂಸ್ಕೃತ ಕೇವಲ ಅಧ್ಯಾತ್ಮ , ಪೂಜಾದಿಗಳಿಗೆ ಮಾತ್ರ ಸೀಮಿತವಾಗಿರದೆ ವಿಜ್ಞಾನದಂತಹ ಅನೇಕ ಮಹತ್ತರ ಮೂಲ ವಿಷಯಗಳು ಇವೆ ಎಂದು ಹೇಳಿದರು.

ಶ್ರೀ ಧ.ಮಂ ಪ.ಪೂ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ ಐತಾಳ್ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಧ.ಮಂ ಪದವಿ ಕಾಲೇಜಿನ ಸಂಸ್ಕೃತ ಭಾಷಾ ಉಪನ್ಯಾಸಕ ಶ್ರೇಯಸ್ ಪಾಳಂದೆ ಉಪಸ್ಥಿತರಿದ್ದರು.

ಸಂಸ್ಕೃತ ಭಾಷಾ ವಿದ್ಯಾರ್ಥಿಗಳಾದ ನೀರೇಶ್ , ಗುರುಕಿರಣ್ , ಕೆ. ಕ್ಷಮಾ ಹಾಗೂ ಸುಮನಾ ಅವರಿಗೆ ದಿ. ಕೋಟೇಶ್ವರ ಕೃಷ್ಣ ಐತಾಳ್ ಸ್ಮಾರಕ ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು. ಸಂಸ್ಕೃತ ಸಂಘದ ಅಧ್ಯಕ್ಷ ಗುರುದತ್ತ ಮರಾಠೆ ಅವರನ್ನು ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ವಾಲ್ಮೀಕಿ ಹಾಗೂ ರಾಮಾಯಣ ಮಹತ್ವ ತಿಳಿಸುವ ವಾಲ್ಮೀಕಿ ಸ್ಮೃತಿ ಎನ್ನುವ ಗಮಕ ವಾಚನ ಪ್ರವಚನ ಕಾರ್ಯಕ್ರಮ ನಡೆಯಿತು. ಶ್ರೇಯಸ್ ಪಾಳಂದೆ ವಾಚನ ಮಾಡಿ , ಡಾ.ಪ್ರಸನ್ನಕುಮಾರ ಐತಾಳ್ ಪ್ರವಚನ ಮಾಡಿದರು.

ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಇದರ ಸಂಯೋಜಕ ರಜತ್ ಪಡ್ಕೆ ಸ್ವಾಗತಿಸಿ , ಅಜಯ್ ವಿದ್ಯಾರ್ಥಿ ವೇತನ ಪಡೆದವರ ಮಾಹಿತಿ ನೀಡಿದರು. ಸುಮೇಧಾ ನಿರೂಪಿಸಿ , ಸಂಸ್ಕೃತ ಸಂಘದ ಅಧ್ಯಕ್ಷ ಗುರುದತ್ತ ಮರಾಠೆ ವಂದಿಸಿದರು.

Leave a Reply

Your email address will not be published. Required fields are marked *