ವಿಟ್ಲ:(ಜ.6) ಬೋಳಂತೂರು ಸಮೀಪದ ನಾರ್ಶದ ಉದ್ಯಮಿ ಮನೆಯಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳ ಸೋಗಿ ದರೋಡೆ ನಡೆಸಿದ ಪ್ರಕರಣದಲ್ಲಿ ಪೊಲೀಸರು ನಾಲ್ಕು ತಂಡಗಳಾಗಿ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಚಲನವಲನಗಳ ಮಹತ್ವದ ಸುಳಿವನ್ನು ಪಡೆದ ತಂಡ ವಿವಿಧ ರಾಜ್ಯಗಳಲ್ಲಿ ಶೋಧಕ್ಕೆ ಮುಂದಾಗಿದೆ.
ಇದನ್ನೂ ಓದಿ: ಧರ್ಮಸ್ಥಳ: ಶ್ರೀ.ಧ.ಮಂ.ಸ್ವಾ.ಅ.ಹಿ. ಪ್ರಾ. ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಸಂಭ್ರಮ
ಮಂಗಳೂರು ಸಿಂಗಾರಿ ಬೀಡಿ ಮಾಲೀಕ ನಾರ್ಶ ನಿವಾಸಿ ಸುಲೈಮಾನ್ ಹಾಜಿ ಅವರ ಚಲನ ವಲನಗಳ ಮಾಹಿತಿ ಸಂಗ್ರಹ ಸುಮಾರು ಮೂರುದಿನಗಳಿಂದ ನಡೆದಿದೆ ಎಂದು ಹೇಳಲಾಗುತ್ತಿದೆ. ಬೀಡಿ ಕಂಪನಿಗೆ ಬಂದು ಹೋಗುವ ಸರಿಯಾದ ಮಾಹಿತಿಯನ್ನು ಹೊಂದಿದ ವ್ಯಕ್ತಿಗಳಿಂದಲೇ ಸಂಪೂರ್ಣ ಮಾಹಿತಿ ದರೋಡೆಕೋರರಿಗೆ ಲಭಿಸಿದೆ ಎನ್ನಲಾಗುತ್ತಿದೆ.
ಕೃತ್ಯಕ್ಕೆ ಮಾರುತಿ ಎರ್ಟಿಗಾ ಕಾರನ್ನು ಬಳಸಿಕೊಳ್ಳಲಾಗಿದ್ದು, ಕುಡ್ತಮುಗೇರು, ಕೋಡಪದವು, ಬೋಳಂತೂರು, ಸುರಿಬೈಲು ಆಸುಪಾಸಿನಲ್ಲಿ ಸುತ್ತಾಡಿಕೊಂಡಿರುವುದು ಬಹಿರಂಗಗೊಂಡಿದೆ. ನಾರ್ಶದಿಂದ ಕಲ್ಲಡ್ಕ ಮೂಲಕ ಮಂಗಳೂರಿಗೆ ಕಾರು ಸಾಗಿದೆ ಎಂದು ಹೇಳಲಾಗುತ್ತಿದ್ದು, ಟೋಲ್ ಗೇಟ್ ನಲ್ಲಿ ಕಾರಿನ ಮಹತ್ವದ ಸುಳಿವು ಲಭಿಸಿದೆ ಎಂದು ಹೇಳಲಾಗುತ್ತಿದೆ.
ಪೊಲೀಸ್ ಅಧೀಕ್ಷಕ ಯತೀಶ್ ಎನ್. ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆದಿದ್ದು, ೨೪ ಗಂಟೆಯಲ್ಲಿ ಆಗಿರುವ ಪ್ರಗತಿಯ ಬಗ್ಗೆ ಚರ್ಚೆಗಳಾಗಿದೆ. ಈಗಾಗಲೇ ಅಪರಾಧ ಪತ್ತೆ ಹಚ್ಚುವಲ್ಲಿ ಪರಿಣತಿಯನ್ನು ಹೊಂದಿದ ಜಿಲ್ಲೆಯ ವಿವಿಧ ಅಧಿಕಾರಿಗಳ ನಾಲ್ಕು ತಂಡವನ್ನು ರಚಿಸಿ ತನಿಖೆಗೆ ವೇಗವನ್ನು ನೀಡಲಾಗಿದೆ.
ಸಿಸಿಕ್ಯಾಮರಾಗಳಲ್ಲಿ ಕಾರಿನ ನಂಬರ್ ಪತ್ತೆಯಾಗಿದೆಯಾದರೂ, ಇದು ನಕಲಿ ಎಂದು ಹೇಳಲಾಗುತ್ತಿದೆ. ಇದರಿಂದ ಪೊಲೀಸರ ತನಿಖೆ ಇನ್ನಷ್ಟು ಜಟಿಲಗೊಂಡಿದ್ದು, ತಮಿಳುನಾಡು, ಕೇರಳದಲ್ಲಿ ಶೋಧಕ್ಕೆ ತಂಡಗಳು ತೆರಳಿದೆ. ತನಿಖೆ ಸಂಪೂರ್ಣ ಮಾಹಿತಿಯನ್ನು ಬಹಿರಂಗಗೊಳಿಸಲು ಪೊಲೀಸ್ ಇಲಾಖೆ ನಿರಾಕರಿಸಿದೆ.