ಚಿಕ್ಕಮಗಳೂರು :(ಜ.7) ನಕ್ಸಲ್ ಮುಖಂಡ ವಿಕ್ರಂ ಗೌಡ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ಬಳಿಕ ಎದೆಗುಂದಿರುವ ಕೆಲವು ನಕ್ಸಲರು ಶರಣಾಗಲು ಬಯಸಿದ್ದು, ನಾಳೆ ಶರಣಾಗತಿ ಪ್ರಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಶಿರಾಡಿ: ಆಸಿಡ್ ಸೇವಿಸಿ ವ್ಯಕ್ತಿ ಮೃತ್ಯು!!
ಜ. 8ರಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠರ ಸಮ್ಮುಖದಲ್ಲಿ ಆರು ನಕ್ಸಲರು ಶಸ್ತ್ರತ್ಯಾಗ ಮಾಡಿ ಸಮಾಜದ ಮುಖ್ಯವಾಹಿನಿಗೆ ಸೇರಲಿದ್ದಾರೆ ಎನ್ನಲಾಗಿದೆ.
ನಕ್ಸಲ್ ಶರಣಾಗತಿ ಪ್ಯಾಕೇಜ್ ಅಡಿಯಲ್ಲಿ ಸಕ್ರಿಯ ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಪ್ರಕ್ರಿಯೆ ನಡೆಯುತ್ತಿದ್ದು, ವಿಕ್ರಂ ಗೌಡ ಎನ್‌ಕೌಂಟರ್ ಬಳಿಕ ಈ ಪ್ರಕ್ರಿಯೆ ವೇಗ ಪಡೆದುಕೊಂಡಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಕ್ಸಲರು ಕಾನೂನು ಸಮ್ಮತ ಬದುಕಿಗೆ ಬರಲು ಇಚ್ಚಿಸಿದರೆ ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ನಕ್ಸಲ್ ನಾಯಕಿ ಮುಂಡಗಾರು ಲತಾ ಸೇರಿದಂತೆ 6 ಮಂದಿ ನಕ್ಸಲರು ಜ. 8ರಂದು ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಮುಂದೆ ಶರಣಾಗಲಿದ್ದಾರೆಂದು ಖಚಿತ ಮೂಲಗಳಿಂದ ತಿಳಿದು ಬಂದಿದೆ. ಮುಂಡಗಾರು ಲತಾ, ವನಜಾಕ್ಷಿ ಬಾಳೆಹೊಳೆ, ಸುಂದರಿ ಕುತ್ತೂರು, ಮಾರೆಪ್ಪ ಅರೋಲಿ, ಕೆ.ವಸಂತ, ಟಿ.ಎನ್. ಜೀಶ್ ಶರಣಾಗಲಿರುವ ನಕ್ಸಲರು ಎನ್ನಲಾಗಿದೆ.
ಹೆಬ್ರಿಯಲ್ಲಿ ನಡೆದ ನಕ್ಸಲ್ ಮುಖಂಡ ವಿಕ್ರಮ್ ಗೌಡ ಎನ್‌ಕೌಂಟರ್ ಬಳಿಕ ಭೂಗತರಾಗಿರುವ ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಪ್ರಯತ್ನವನ್ನು ನಕ್ಸಲ್ ಶರಣಾಗತಿ ಸಮಿತಿ, ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರು ನಡೆಸಿದ್ದರು. ಸರಕಾರ ಕೂಡ ಸಕ್ರಿಯ ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಉದ್ದೇಶದಿಂದ ನಕ್ಸಲ್ ಶರಣಾಗತಿ ಪ್ಯಾಕೇಜ್-2024 ಘೋಷಣೆ ಮಾಡಿತ್ತು. ಇವರ ಶರಣಾದರೆ ಮಲೆನಾಡು ನಕ್ಸಲ್ ಪೀಡಿತ ಪ್ರದೇಶವೆಂಬ ಹಣೆಪಟ್ಟಿಯಿಂದ ಹೊರಬರಲಿದೆ.