ಉಜಿರೆ, (ಜ.7): ಸ್ಕೌಟ್ಸ್ ಗೈಡ್ಸ್ ನಂತಹ ಪಠ್ಯೇತರ ಚಟುವಟಿಕೆಗಳನ್ನು ಶಿಕ್ಷಣದಲ್ಲಿ ಅತ್ಯಗತ್ಯ ಎಂದು ಪರಿಗಣಿಸಬೇಕು ಉಜಿರೆಯ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಸದಸ್ಯರಾದ ಸುಪ್ರಿಯಾ ಹರ್ಷೇಂದ್ರ ಕುಮಾರ್ ಅಭಿಪ್ರಾಯಪಟ್ಟರು.
ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ರೋವರ್ಸ್ ಆ್ಯಂಡ್ ರೇಂಜರ್ಸ್ ಘಟಕ (ಸ್ಕೌಟ್ಸ್ ಗೈಡ್ಸ್ ಹಿರಿಯರ ವಿಭಾಗ) ಇಂದು (ಜ. 6) ಆಯೋಜಿಸಿದ ಒಂದು ದಿನದ ಜಿಲ್ಲಾ ಮಟ್ಟದ ಅಂತರ್ ಕಾಲೇಜು ಉತ್ಸವ ಮತ್ತು ವಸ್ತು ಪ್ರದರ್ಶನ ‘ಪ್ರಮುಕ 2025’ ಉದ್ಘಾಟಿಸಿ ಅವರು ಮಾತನಾಡಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆ ಬೆಳ್ತಂಗಡಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
‘ಪರೋಪಕಾರಾರ್ಥಂ ಇದಮ್ ಶರೀರಂ’ ಎಂಬ ಸಂಸ್ಕೃತ ಸೂಕ್ತಿಯಂತೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾಗಿದೆ. ಪಠ್ಯದ ಜತೆಗೆ ಇಂತಹ ಪಠ್ಯೇತರ ಚಟುವಟಿಕೆಗಳು ಶಿಕ್ಷಣದಲ್ಲಿ ಅಗತ್ಯ ಎಂದು ಅವರು ಹೇಳಿದರು.
“ದೇಶದ ಭವಿಷ್ಯವು ಯುವಪೀಳಿಗೆಯ ಮೇಲೆ ಅವಲಂಬಿತವಾಗಿದ್ದು, ಸ್ಕೌಟ್ಸ್ ಗೈಡ್ಸ್ ನಂತಹ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಪೂರಕವಾಗಿವೆ. ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿರುವ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯು ಈ ದೆಸೆಯಲ್ಲಿ ಸಂಪೂರ್ಣ ಬೆಂಬಲ ನೀಡುತ್ತದೆ” ಎಂದರು.
“ಜೀವನದಲ್ಲಿ ಸವಾಲುಗಳು ಎದುರಾದಾಗ ಮೌಲ್ಯಗಳನ್ನು ಕಳೆದುಕೊಳ್ಳಬೇಡಿ. ಮೌಲ್ಯಗಳು ನಮ್ಮ ಗೌರವ ಹೆಚ್ಚಿಸುತ್ತವೆ. ಕಷ್ಟ ಎದುರಿಸುವ ಧೈರ್ಯ, ಪ್ರಕೃತಿಯೊಂದಿಗೆ ಬೆರೆತು ಸಹಬಾಳ್ವೆ ನಡೆಸಲು ಪ್ರೇರಣೆಯನ್ನು ಸ್ಕೌಟ್ಸ್ ಗೈಡ್ಸ್ ನೀಡಲಿ” ಎಂದರು.
ಅತಿಥಿ, ಕಾಲೇಜಿನ ಹಿರಿಯ ವಿದ್ಯಾರ್ಥಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಹಾಗೂ ರಾಜ್ಯ ಅಲ್ಪಸಂಖ್ಯಾತರ ಇಲಾಖೆಯ ವೈಸ್ ಚೇರ್ಮನ್ ಅಶ್ವಿತ್ ಜೈನ್ ಮಾತನಾಡಿದರು. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಶಕ್ತಿ, ಅಸಾಮಾನ್ಯ ಸಾಮರ್ಥ್ಯ ಯುವಕರಲ್ಲಿದೆ ಎಂದು ಅವರು ಹೇಳಿದರು.
“ರೋವರ್ಸ್ ಮತ್ತು ರೇಂಜರ್ ವಿದ್ಯಾರ್ಥಿಗಳು ಕೇವಲ ತಂಡದ ಪ್ರತಿನಿಧಿಗಳಲ್ಲ ಬದಲಾಗಿ ತಂಡದ ನಾಯಕರು. ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ಹೊಂದಿರುವ ಹಾಗೂ ಇನ್ನೊಬ್ಬರಿಗೆ ಮಾದರಿಯಾಗುವಂತಹ ವ್ಯಕ್ತಿಗಳು. ಬದಲಾವಣೆಯ ಹರಿಕಾರರು. ಸಮಾಜಕ್ಕೆ ಸೇವೆ ಸಲ್ಲಿಸುವ ಮೂಲಕ ನೀವು ಇತರರಿಗೆ ಮಾದರಿಯಾಗಿದ್ದೀರಿ” ಎಂದರು.
ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ದ. ಕ. ಜಿಲ್ಲಾ ಆಯುಕ್ತ (ಸ್ಕೌಟ್ಸ್) ಬಿ. ಎಂ. ತುಂಬೆ ಮಾತನಾಡಿದರು. “ಬಾಲ್ಯವೆಂಬುವುದು ಬಹಳ ಸುಂದರ. ಅದನ್ನು ಸಿಹಿಯಾಗಿಸಿ ಯೌವನವನ್ನು ಆಹ್ವಾನಿಸಿ. ಯೌವನದಲ್ಲಿ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಿ. ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಯಭಾರಿಗಳಾಗಿ” ಎಂದರು.
ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ದ.ಕ. ಜಿಲ್ಲಾ ಕಾರ್ಯದರ್ಶಿ ಪ್ರತಿಮ್ ಕುಮಾರ್ ಕೆ.ಎಸ್. ಮಾತನಾಡಿದರು. ವಿಶ್ವಮಟ್ಟದ ಸಂಸ್ಥೆಯಾಗಿರುವ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾಗಿದೆ. ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿಸಲು ಸಹಕರಿಸುತ್ತದೆ ಎಂದರು. ಕಾರ್ಯಕ್ರಮಕ್ಕಾಗಿ ಕಾಲೇಜನ್ನು ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ, ಮಾನವಕುಲದ ಸೇವೆಯೇ ಜೀವನದ ಅತ್ಯುತ್ತಮ ಸೇವೆ. ನಿಜವಾದ ರಾಷ್ಟ್ರ ನಿರ್ಮಾಣವೆಂದರೆ ಮನಸ್ಸುಗಳನ್ನು ಕಟ್ಟುವಂತದ್ದು. ಮನುಷ್ಯರು ಯಂತ್ರಗಳಂತಾಗಿ ಸಂವೇದನೆ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಸ್ಕೌಟ್ಸ್ ಗೈಡ್ಸ್ ನಂತಹ ಸಂಸ್ಥೆಗಳು ಅರ್ಥ ಕಂಡುಕೊಳ್ಳುತ್ತವೆ. ಸ್ಕೌಟ್ಸ್ ಗೈಡ್ಸ್ ಯುವಜನತೆಯಲ್ಲಿ ಮಾನವೀಯ ಮೌಲ್ಯಗಳನ್ನು ಉದ್ದೀಪನಗೊಳಿಸುತ್ತದೆ, ವ್ಯಕ್ತಿತ್ವ ನಿರ್ಮಾಣ ಮಾಡುತ್ತದೆ ಎಂದರು.
ಕಾರ್ಯಕ್ರಮ ಸಂಯೋಜಕಿ, ರೇಂಜರ್ ಲೀಡರ್ ಗಾನವಿ ಡಿ. ಪ್ರಾಸ್ತಾವಿಕವಾಗಿ ಮಾತನಾಡಿ, ಇಂಡೋನೇಷಿಯನ್ ಭಾಷೆಯಲ್ಲಿ ‘ಪ್ರಮುಕ’ ಎಂದರೆ ಕೆಲಸವನ್ನು ಪ್ರೀತಿಸುವ ಯುವ ಜನರು ಅಥವಾ ಕೆಲಸಕ್ಕೆ ಸಿದ್ಧರಾಗಿರುವ ಯುವ ನಾಗರಿಕರು ಎಂದರ್ಥ. ಈ ಹೆಸರಿನಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ವಿವಿಧ ಸ್ಪರ್ಧೆಗಳ ಟ್ರೋಫಿಗಳನ್ನು ಮೆರವಣಿಗೆಯಲ್ಲಿ ತರಲಾಯಿತು.
ವೇದಿಕೆಯಲ್ಲಿ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್., ಕಾಲೇಜಿನ ರೋವರ್ಸ್ ರೇಂಜರ್ಸ್ ವಿದ್ಯಾರ್ಥಿ ನಾಯಕರಾದ ಹರ್ಷಿಣಿ ಮತ್ತು ದಿಲೀಪ್ ಉಪಸ್ಥಿತರಿದ್ದರು.
ರೇಂಜರ್ ನಿತ್ಯಾ ಮತ್ತು ತಂಡದವರು ಪ್ರಾರ್ಥಿಸಿದರು. ಕಾರ್ಯಕ್ರಮ ಸಂಯೋಜಕ, ರೋವರ್ ಸ್ಕೌಟ್ ಲೀಡರ್ ಪ್ರಸಾದ್ ಕುಮಾರ್ ವಂದಿಸಿದರು. ವಿದ್ಯಾರ್ಥಿನಿಯರಾದ ಮಾನಸಾ ಅಗ್ನಿಹೋತ್ರಿ, ಭೂಮಿಕಾ ಕೆ.ಎಲ್. ಜೈನ್ ಮತ್ತು ಮೋಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.
ಜಿಲ್ಲೆಯ ವಿವಿಧ ಕಾಲೇಜುಗಳ ರೋವರ್ಸ್ ರೇಂಜರ್ಸ್, ರೋವರ್ ಸ್ಕೌಟ್ ಲೀಡರ್ಸ್, ರೇಂಜರ್ ಲೀಡರ್ಸ್, ಸ್ಥಳೀಯ ಎಸ್.ಡಿ.ಎಂ. ಶಾಲೆಗಳ ಸ್ಕೌಟ್ಸ್ ಗೈಡ್ಸ್, ಕಬ್ ಬುಲ್ ಬುಲ್, ಬನ್ನೀಸ್, ಸ್ಕೌಟ್ ಮಾಸ್ಟರ್ಸ್, ಗೈಡ್ ಕ್ಯಾಪ್ಟನ್ಸ್ ಪಾಲ್ಗೊಂಡಿದ್ದರು.
ಬೆಳಗ್ಗೆ ಕಾಲೇಜು ಒಳಾಂಗಣದಲ್ಲಿ ಸ್ಕೌಟ್ಸ್ ಧ್ವಜಾರೋಹಣ ಹಾಗೂ ಪ್ರಾರ್ಥನೆ ನೆರವೇರಿತು. ಸ್ಕೌಟ್ಸ್ ಗೈಡ್ಸ್ ಶಿಬಿರಗಳಲ್ಲಿರುವ ಸಾಹಸಮಯ ಆಟಗಳ ಮಾದರಿಗಳು, ಟೆಂಟ್, ಮರದ ಮೇಲಿನ ಅಟ್ಟಳಿಗೆ, ಬಿದಿರು ಮತ್ತು ಹಗ್ಗಗಳನ್ನು ಬಳಸಿ ತಯಾರಿಸಿದ ಏಣಿ ಸೇರಿದಂತೆ ಸ್ಕೌಟಿಂಗ್ ಸಂಬಂಧಿತ ವಿವಿಧ ವಸ್ತು, ಮಾದರಿಗಳನ್ನು ವಸ್ತು ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿತ್ತು.