ಗುರುವಾಯನಕೆರೆ:(ಜ.9) ವಿದ್ವತ್ ಪಿಯು ಕಾಲೇಜ್ ಗುರುವಾಯನಕೆರೆ ಇವರ ನೇತೃತ್ವದಲ್ಲಿ ಬೆಳ್ತಂಗಡಿ ವಾಲಿಬಾಲ್ ಅಸೋಸಿಯೇಷನ್ ಇವರ ಸಹಭಾಗಿತ್ವದಲ್ಲಿ ಮತ್ತು ಲಯನ್ಸ್ ಕ್ಲಬ್ ಬೆಳ್ತಂಗಡಿ ಇವರ ಸಹಯೋಗದೊಂದಿಗೆ ತಾಲೂಕು ಮಟ್ಟದ ಪುರುಷರ ಮತ್ತು ಆಹ್ವಾನಿತ ಮಹಿಳೆಯರ ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟವನ್ನು ವಿದ್ವತ್ ಪಿ ಯು ಕಾಲೇಜಿನ ಕ್ರೀಡಾಂಗಣದಲ್ಲಿ ಜನವರಿ 4, 2025 ರಂದು ನೆರವೇರಿತು.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ 4 ಆಹ್ವಾನಿತ ಮಹಿಳಾ ತಂಡಗಳಲ್ಲಿ ಉಜಿರೆಯ ಎಸ್.ಡಿ.ಮ್ ತಂಡವು ಪ್ರಥಮ ಸ್ಥಾನವನ್ನು ಮುಡಿಗೇರಿಸಿ ಕೊಂಡರೆ, ಮಂಗಳ ಸ್ಪೋರ್ಟ್ಸ್ ಕ್ಲಬ್ ಉರ್ವಾಸ್ಟೋರ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.
ಪುರುಷರ ವಿಭಾಗದಲ್ಲಿ ತಾಲೂಕಿನ 22 ತಂಡಗಳು ಭಾಗವಹಿಸಿ, ಫ್ರೆಂಡ್ಸ್ ಉಜಿರೆ.ಎ ತಂಡ ಪ್ರಥಮ ಸ್ಥಾನ ಗಿಟ್ಟಿಸಿಕೊಂಡರೆ, ದ್ವಿತೀಯ ಆರ್ ಜೆ ಫ್ರೆಂಡ್ಸ್ , ತೃತೀಯ ಭಜರಂಗಿ ಬಾಯ್ಸ್ ಬಿ ತಂಡ ಹಾಗೂ ಫ್ರೆಂಡ್ಸ್ ಉಜಿರೆ ಬಿ ತಂಡ ಚತುರ್ಥ ಸ್ಥಾನವನ್ನು ಪಡೆದುಕೊಂಡಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿದ್ವತ್ ಎಜುಕೇಶನ್ ಫೌಂಡೇಶನ್ ನ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿಯವರು ಮಾತನಾಡಿ, ವಿದ್ಯಾರ್ಜನೆಯ ಜೊತೆಗೆ ಕ್ರೀಡೆ ಮಕ್ಕಳಲ್ಲಿ ಹುರುಪನ್ನು ತುಂಬುವುದು ಮತ್ತು ಮಕ್ಕಳು ದೈಹಿಕವಾಗಿ ಮಾನಸಿಕವಾಗಿ ಪ್ರಭುದ್ಧರಾಗಲು ಬಹಳಷ್ಟು ಸಹಕಾರಿಯಾಗುತ್ತದೆ.
ಮಕ್ಕಳು ಕ್ರೀಡಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒತ್ತು ಕೊಡುವ ವಿದ್ಯಾಸಂಸ್ಥೆಗಳಲ್ಲಿ ಮಕ್ಕಳಿಗೆ ಯಾವುದೇ ಕ್ರೀಡೆ ಗಳಿಗೆ ಅವಕಾಶವಿರುವುದಿಲ್ಲ. ಆದರೆ ವಿದ್ವತ್ ಪಿ ಯು ಕಾಲೇಜಿನ ವಿಶಿಷ್ಟ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ವ್ಯವಸ್ಥಿತ ಶಿಕ್ಷಣದೊಂದಿಗೆ, ಕ್ರೀಡೆಗೂ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಮಕ್ಕಳು ದೈಹಿಕವಾಗಿಯೂ ಮಾನಸಿಕವಾಗಿಯೂ ಸಧೃಡರಾಗುತ್ತಾರೆ ಎಂದರು.
ಮುಖ್ಯ ಅಥಿತಿಯಾಗಿ ಭಾಗವಹಿಸಿದ ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಭಾರತಿ ಯವರು ಮಾತನಾಡಿ, ವಿದ್ವತ್ ಸಂಸ್ಥೆಯ ಕಾರ್ಯ ವೈಖರಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಈ ವಿದ್ಯಾ ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆದು ಮಾದರಿ ವಿದ್ಯಾಸಂಸ್ಥೆಯಾಗಿ ಹೊರಹೊಮ್ಮಲಿ ಎಂದು ಹಾರೈಸಿದರು.
ಲಯನ್ಸ್ ಕ್ಲಬ್ ಬೆಳ್ತಂಗಡಿ ಇದರ ಅಧ್ಯಕ್ಷರಾದ ದೇವದಾಸ್ ಶೆಟ್ಟಿ ಯವರು ಮಾತನಾಡಿ ವಿದ್ಯಾಭ್ಯಾಸದ ಜೊತೆಗೆ ಕ್ರೀಡೆ ಮಕ್ಕಳ ಆರೋಗ್ಯವನ್ನೂ ಕಾಪಾಡುತ್ತದೆ ಅದೇ ರೀತಿ ಬುದ್ಧಿಮತ್ತೆಯನ್ನು ಹೆಚ್ಚಿಸುತ್ತದೆ. ವಿದ್ವತ್ ಪಿ ಯು ಕಾಲೇಜು ಹಾಗೂ ಬೆಳ್ತಂಗಡಿ ತಾಲೂಕು ವಾಲಿಬಾಲ್ ಅಸೊಸಿಯೆಷನೊಂದಿಗೆ ಬೆಳ್ತಂಗಡಿ ಲಯನ್ಸ್ ಕ್ಲಬ್ ನ ಸಹಯೋಗ ತುಂಬಾ ಸಂತಸ ತಂದಿದೆ ಎಂದರು.
ಇನ್ನೋರ್ವ ಮುಖ್ಯ ಅಥಿತಿಯಾಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ನಿರ್ದೇಶಕರಾದ ರಾಜಶೇಖರ್ ಶೆಟ್ಟಿಯವರು ಮಾತನಾಡಿ ಶಿಕ್ಷಣದೊಂದಿಗೆ ಕ್ರೀಡೆಗೆ ಒತ್ತುಕೊಡುವ ವಿದ್ವತ್ ಕಾಲೇಜಿನನಂಥ ಶಿಕ್ಷಣ ಸಂಸ್ಥೆಯು ನಮ್ಮ ಗ್ರಾಮೀಣ ಪ್ರದೇಶವಾದ ಗುರುವಾಯನಕೆರೆಯಲ್ಲಿರುವುದು ಮಕ್ಕಳ ಸೌಭಾಗ್ಯ ಎಂದರು. ಓದಿನ ಜೊತೆಗೆ ಮಕ್ಕಳು ಗುರುಹಿರಿಯರೊಂದಿಗೆ ಗೌರವಯುತವಾಗಿ ವರ್ತಿಸಿ, ಉತ್ತಮ ವಿದ್ಯಾರ್ಜನೆಯ ಜೊತೆಗೆ ತಮ್ಮ ಕನಸನ್ನು ನನಸು ಮಾಡಿಕೊಳ್ಳಿ ಎಂಬ ಕಿವಿಮಾತು ಹೇಳಿದರು.
ವಿದ್ವತ್ ಎಜುಕೇಶನ್ ಫೌಂಡೇಶನ್ ನ ಕೋಶಾಧಿಕಾರಿ ಕಾಶೀನಾಥ್. ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಬೆಳ್ತಂಗಡಿ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷರಾದ ಯಶವಂತ್ ಗೌಡ ಬೆಳಾಲು ಧನ್ಯವಾದ ಸಮರ್ಪಿಸಿದರು.