Bigg boss kannada :(ಜ.11) ಕನ್ನಡ ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11 ಗ್ರ್ಯಾಂಡ್ ಫಿನಾಲೆಗೆ ಹತ್ತಿರವಾಗುತ್ತಿದೆ. ಕೆಲವೇ ಕೆಲವು ದಿನ ಬಾಕಿ ಇರುವಾಗ ಫಿನಾಲೆ ಟಾಸ್ಕ್‌ನಲ್ಲಿ ಬಿಗ್ ಬಾಸ್ ಸ್ಪರ್ಧಿಗಳು ರೊಚ್ಚಿಗೆದ್ದು ಆಟ ಆಡುತ್ತಾ ಇದ್ದಾರೆ. ಈ ಮಧ್ಯೆ ಬಿಗ್ ಬಾಸ್ ಶೋ ತಂಡಕ್ಕೆ ಬಿಗ್ ರಿಲೀಫ್ ಸಿಕ್ಕಿದೆ.
ಬಿಗ್ ಬಾಸ್ ಸೀಸನ್ 11 ಶೋಗೆ ಯಾವುದೇ ಅಡ್ಡಿ, ಆತಂಕ ಇಲ್ಲ ಎನ್ನಲಾಗಿದೆ. ಯಾಕಂದ್ರೆ ಬಿಗ್ ಬಾಸ್ ಶೋ ರದ್ದುಗೊಳಿಸಲು ನೀಡಿದ್ದ ಆದೇಶಕ್ಕೆ ಕೋರ್ಟ್‌ನಿಂದ ತಡೆಯಾಜ್ಞೆ ಸಿಕ್ಕಿದೆ. ಈ ಬಿಗ್ ಬಾಸ್ ಕಾರ್ಯಕ್ರಮವನ್ನ ಕಾನೂನು ಬಾಹಿರವಾಗಿ ಅನುಮತಿ ಪಡೆಯದೇ ನಡೆಸಲಾಗುತ್ತಿದೆ ಎಂಬ ದೂರು ದಾಖಲಾಗಿತ್ತು.
ಕನ್ನಡದ ಬಿಗ್ ಬಾಸ್ 11 ಕಾರ್ಯಕ್ರಮಕ್ಕಾಗಿ ಬೆಂಗಳೂರು ಹೊರವಲಯದ ರಾಮೋಹಳ್ಳಿ ಸರ್ವೇ ನಂ 128/1ರಲ್ಲಿ ಬೃಹತ್ ಸೆಟ್ ಹಾಕಲಾಗಿದೆ. ಈ ಸ್ಥಳದಲ್ಲಿ ರಿಯಾಲಿಟಿ ಶೋ ನಡೆಯಲು ಕಾರ್ಮಿಕ ಇಲಾಖೆ, ಪರಿಸರ ಮಾಲಿನ್ಯ ಮಂಡಳಿ, ಸ್ಥಳೀಯ ಗ್ರಾಮ ಪಂಚಾಯ್ತಿಯಿಂದ ಅನುಮತಿ ಪಡೆಯದೇ ಕಾರ್ಯಕ್ರಮ ನಡೆಸುತ್ತಿದ್ದಾರೆ ಎಂದು ರಾಘವೇಂದ್ರ ಆಚಾರ್ ಎಂಬುವವರು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.
ಈ ದೂರಿನ ಸಂಬಂಧ ಬಿಗ್ ಬಾಸ್ ಶೋಗೆ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆ ಬಳಿಕ ಜಿಲ್ಲಾ ಪಂಚಾಯಿತಿ CEO ಲತಾಕುಮಾರಿ ಅವರು ಬಿಗ್ ಬಾಸ್ ಶೋ ಲೈಸೆನ್ಸ್ ರದ್ದಿಗೆ ಆದೇಶಿಸಿದ್ದರು.
ಬಿಗ್ ಬಾಸ್ ಸೀಸನ್ 11 ಶೋ ರದ್ದುಗೊಳಿಸುವ ಆದೇಶದ ಹಿನ್ನೆಲೆಯಲ್ಲಿ ಬಿಗ್ ಬಾಸ್ ಮ್ಯಾನೇಜ್‌ಮೆಂಟ್ ಕೋರ್ಟ್ ಮೆಟ್ಟಿಲೇರಿದ್ದು ತಡೆಯಾಜ್ಞೆ ತಂದಿದೆ. ಲೈಸೆನ್ಸ್ ರದ್ದು ಮಾಡಲು ಕೋರ್ಟ್ ಸ್ಟೇ ನೀಡಿದ್ದು ಅದರ ಕಾಪಿಯನ್ನ ಬಿಗ್ ಬಾಸ್ ಟೀಂ ಕುಂಬಳಗೋಡು ಪೊಲೀಸರು, ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ತಲುಪಿಸಲಾಗಿದೆ.