C T Ravi:(ಜ.11) ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಅಶ್ಲೀಲ ಪದ ಪ್ರಯೋಗ ಮಾಡಿದ್ದಾರೆ ಎಂಬ ಆರೋಪ ರಾಜ್ಯಾದ್ಯಂತ ಸದ್ದು ಮಾಡಿತ್ತು. ಈ ಹಿನ್ನೆಲೆಯಲ್ಲಿ ಸಿ. ಟಿ. ರವಿ ಅವರ ಬಂಧನ ಆಗಿ ನಂತರ ಬಿಡುಗಡೆಯೂ ಆಯಿತು. ಆದರೆ ಈಗ ಈ ಬೆನ್ನಲ್ಲೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ಗೆ ಕ್ಷಮೆ ಕೇಳದಿದ್ದರೆ ಹತ್ಯೆ ಮಾಡುವುದಾಗಿ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿಗೆ ಅನಾಮಧೇಯ ವ್ಯಕ್ತಿಗಳು ಬೆದರಿಕೆ ಹಾಕಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಆರು ಜನ ನಕ್ಸಲರು ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರಗಳು ಪತ್ತೆ?!
ಲಕ್ಷ್ಮೀ ಹೆಬ್ಬಾಳ್ಕರ್ ಗೆ ಕ್ಷಮೆ ಕೇಳದಿದ್ದರೆ ನಿಮ್ಮನ್ನು ಮತ್ತು ನಿಮ್ಮ ಪುತ್ರ ಸೂರ್ಯನನ್ನು ಹತ್ಯೆ ಮಾಡಲಾಗುತ್ತದೆ ಎಂಬ ಬೆದರಿಕೆ ಪತ್ರ ಸಿ.ಟಿ. ರವಿಯವರ ಚಿಕ್ಕಮಗಳೂರಿನ ಬಸವನಹಳ್ಳಿ ನಿವಾಸಕ್ಕೆ ಬಂದಿದೆ. ಪತ್ರದಲ್ಲಿ 15 ದಿನದೊಳಗೆ ಚಿಕ್ಕಮಗಳೂರಿನಿಂದ ಬಂದು ಬೆಳಗಾವಿ ಅಭಿನೇತ್ರಿಯ ಕೈಕಾಲು ಹಿಡಿದು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ನಿಮ್ಮ ಮನೆಗೆ ನುಗ್ಗಿ ನಿಮ್ಮ ಕೈಕಾಲು ಮುರಿದು ಸಾಯಿಸುತ್ತೇವೆ. ನಿನ್ನ ಮಗನನ್ನು ಸಾಯಿಸುತ್ತೇವೆ ಹುಷಾರಾಗಿ ಇರಿ ಎಂದು ಬರೆಯಲಾಗಿದೆ.
ಈ ಸಂಬಂಧ ಸಿ.ಟಿ. ರವಿ ಪಿಎ ಚೇತನ್ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಮಾತನಾಡಿ, ಅಪರಿಚಿತ ವ್ಯಕ್ತಿಗಳಿಂದ ಎಂಎಲ್ಸಿ ಸಿ.ಟಿ.ರವಿ ಅವರಿಗೆ ಬೆದರಿಕೆ ಪತ್ರ ಬಂದಿದೆ. ಈ ಸಂಬಂಧ ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸಿ.ಟಿ.ರವಿ ಅವರಿಗೆ ಹೆಚ್ಚಿನ ಭದ್ರತೆ ನೀಡುತ್ತೇವೆ ಎಂದು ಹೇಳಿದ್ದಾರೆ.