ಮಂಗಳೂರು:(ಜ.11) ಪಾರ್ಟಿಗೆ ಬಂದಿದ್ದ ಯುವತಿಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಂಪನಕಟ್ಟೆ ಲೈಟ್‌ಹೌಸ್ ಹಿಲ್ ರೋಡ್ ನಿವಾಸಿ ಬ್ರಯಾನ್ ರಿಚರ್ಡ್ ಅಮನ್ನಾ (34) ಎಂಬುವವರಿಗೆ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 10 ವರ್ಷ ಕಠಿಣ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿದೆ.
ಇದನ್ನೂ ಓದಿ:Tumkuru: ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹತ್ಯೆಗೆ ಶರಣು
ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದ ಸಂತ್ರಸ್ತ ಯುವತಿ, ಜಾಯ್‌ಲೆನ್ ಗ್ಲಾನೆಲ್ ಪಿಂಟೋ ಎಂಬುವವರ ಪರಿಚಯವಾಗಿ ಸ್ನೇಹಿತರಾಗಿದ್ದು, ಅಂಡಮಾನ್‌ಗೆ ವರ್ಗಾವಣೆ ಆದಾಗ 2021ರ ಫೆ.5 ರಂದು ಪುತ್ತೂರಿನಲ್ಲಿ ತಮ್ಮ ಸ್ನೇಹಿತರ ಜೊತೆ ಪಾರ್ಟಿ ಮಾಡಿದ್ದರು. ಪುತ್ತೂರು ತಾಲೂಕಿನ ಕೊಡಿಪ್ಪಾಡಿ ಗ್ರಾಮದ ಕೊಡಿಕಾಡು ಎಂಬಲ್ಲಿ ಇವರು ಆಕಾಶ್ ಕೆ.ಎಸ್ ಎಂಬ ವ್ಯಕ್ತಿಗೆ ಸೇರಿದ ಮನೆಯಲ್ಲಿ ಪಾರ್ಟಿ ಮಾಡಿದ್ದು, ಸ್ನೇಹಿತ ನಿಕೇತ್ ಶೆಟ್ಟಿ ಎಂಬುವವರ ಜೊತೆ ಕಾರಿನಲ್ಲಿ ಅಲ್ಲಿಗೆ ಸಂತ್ರಸ್ತ ಯುವತಿ ಕೂಡಾ ಹೋಗಿದ್ದರು.
ಬ್ರಯಾನ್ ಅಮನ್ನಾ ಯುವತಿಗೆ ತಾನು ಜಾಯಿಲಿನ್‌ನ ಸ್ನೇಹಿತ ಎಂದು ಪರಿಚಯ ಮಾಡಿದ್ದರು. ಬ್ರಯಾನ್ ಅವರು ಈ ಪಾರ್ಟಿಯ ಕ್ಯಾಟರಿಂಗ್ ವ್ಯವಸ್ಥೆ ನೋಡಿಕೊಂಡಿದ್ದರು. ಹೀಗೆ ಪರಿಚಯ ಮಾಡಿಕೊಂಡ ಬ್ರಯಾನ್ ಯುವತಿಯ ವೈನ್‌ಗೆ ಮತ್ತು ಬರಿಸುವ ಅಮಲು ಪದಾರ್ಥ ಸೇರಿಸಿ ಒತ್ತಾಯದಿಂದ ಕುಡಿಸಿದ್ದ. ನಂತರ ಯುವತಿ ರಾತ್ರಿ ಅಲ್ಲೇ ಉಳಿದುಕೊಂಡಿದ್ದು, ನಿದ್ದೆಗೆ ಜಾರಿ ಬೆಳಗ್ಗೆ 5 ಗಂಟೆಗೆ ಎಚ್ಚರವಾದಾಗ ಆಕೆಯ ಮೇಲೆ ಬ್ರಯಾನ್ ಅಮನ್ನಾ ಅತ್ಯಾಚಾರ ಮಾಡುತ್ತಿದ್ದ.
ಈತನ ವಿರುದ್ಧ ಯುವತಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ಭಾರತೀಯ ದಂಡ ಸಂಹಿತೆ ಕಲಂ 376ರಡಿ 10 ವರ್ಷ ಕಠಿಣ ಕಾರಾಗೃಹವಾಸ ಶಿಕ್ಷೆ ಮತ್ತು 10 ಸಾವಿರ ರೂ.ದಂಡ, ಕಲಂ 328 ರ ಅಡಿ 5ವರ್ಷ ಕಾರಾಗೃಹವಾಸದ ಶಿಕ್ಷೆ, 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಹಾಗೂ ನೊಂದ ಯುವತಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದಾರೆ.