ಬೆಳ್ತಂಗಡಿ :(ಜ.13) ಬೆಳ್ತಂಗಡಿ ವೈನ್ ಶಾಪ್ ಕಳ್ಳತನ ಪ್ರಕರಣದ ಪ್ರಮುಖ ಆರೋಪಿಯನ್ನು ಬೆಳ್ತಂಗಡಿ ಪೋಲಿಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಆರೋಪಿಗಳಿಬ್ಬರು ಉಡುಪಿ ಜಿಲ್ಲೆಯ ಕುಂದಾಪುರ ಬ್ಯಾಂಕ್ ಕಳ್ಳತನ ಯತ್ನ ಪ್ರಕರಣದಲ್ಲಿ ಉಡುಪಿಯ ಹಿರಿಯಡ್ಕ ಜೈಲಿನಲ್ಲಿದ್ದು, ಬೆಳ್ತಂಗಡಿ ಪೊಲೀಸರು ಕಳ್ಳತನ ಪ್ರಕರಣದ ತನಿಖೆಗಾಗಿ ಪ್ರಮುಖ ಆರೋಪಿಯಾದ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಇಂದ್ರನಗರ ನಿವಾಸಿ ಮೊಹಮ್ಮದ್ ಹುಸೇನ್ (22) ಎಂಬಾತನನ್ನು ಬೆಳ್ತಂಗಡಿ ಕೋರ್ಟ್ ನಿಂದ ಬಾಡಿ ವಾರೆಂಟ್ ಪಡೆದು ಜಿ.13 ರಂದು ಬೆಳಗ್ಗೆ ಉಡುಪಿಯ ಹಿರಿಯಡ್ಕ ಜೈಲಿನಿಂದ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಯನ್ನು (ಎರಡು ದಿನ)ಜಿ. 13 ಮತ್ತು ಜ. 14 ರಂದು ಬೆಳ್ತಂಗಡಿ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಮಾಡಿದೆ. ಆರೋಪಿಯನ್ನು ಪೊಲೀಸರು ಕಳ್ಳತನ ಮಾಡಿದ ವೈನ್ ಶಾಪ್ ಗೆ ಕರೆತಂದು ಮಹಜರು ನಡೆಸಿದರು.
ಏನಿದು ಪ್ರಕರಣ?!
ಬೆಳ್ತಂಗಡಿ ಬಸ್ ನಿಲ್ದಾಣದ ಶ್ರೀ ಗುರುನಾರಾಯಣ ಕಟ್ಟಡದ ನೆಲ ಮಹಡಿಯಲ್ಲಿರುವ ತ್ರಿ ಸ್ಟಾರ್ ವೈನ್ ಗೆ ಬೀಗ ಒಡೆದು ನುಗ್ಗಿದ ಕಳ್ಳರು ಸುಮಾರು 9 ಸಾವಿರ ಹಣ ಹಾಗೂ ಬಿಯರ್ ಬಾಟಲಿಗಳನ್ನು ಕಳ್ಳತನ ಮಾಡಿದ ಘಟನೆ ಆ.13 ರಂದು ಭಾನುವಾರ ರಾತ್ರಿ ಸಂಭವಿಸಿತ್ತು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿತ್ತು. ಈ ಬಳಿಕ ಆರೋಪಿಗಳಿಬ್ಬರು ಉಡುಪಿ ಜಿಲ್ಲೆಯ ಕುಂದಾಪುರ ಕರ್ನಾಟಕ ಬ್ಯಾಂಕ್ ಗೆ ಅ.16 ರಂದು ಕನ್ನ ಹಾಕುವಾಗ ಕುಂದಾಪುರ ಪೊಲೀಸರಿಗೆ ರೆಡ್ ಹ್ಯಾಂಡ್ ಅಗಿ ಮೊಹಮ್ಮದ್ ಹುಸೇನ್ ಮತ್ತು ಅಪ್ರಾಪ್ತ ಬಾಲಕನೊಬ್ಬ ಸಿಕ್ಕಿಬಿದ್ದು ಜೈಲುಪಾಲಾಗಿದ್ದರು. ಪೊಲೀಸರ ವಿಚಾರ ವೇಳೆ ಬೆಳ್ತಂಗಡಿ ವೈನ್ ಶಾಪ್ ಕಳ್ಳತನ ಪ್ರಕರಣ ಬೆಳಕಿಗೆ ಬಂದಿತ್ತು.