ಮಡಿಕೇರಿ:(ಜ.13) ಮಡಿಕೇರಿ ನಗರದ ಹೃದಯ ಭಾಗದಲ್ಲಿ ಹಾಡುಹಗಲೇ ಕಾರು ಕಳ್ಳತನ ಮಾಡಿದ ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾರಿನಲ್ಲಿದ್ದ ಜಿಪಿಎಸ್ ಆಧಾರದಲ್ಲಿ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಮಡಿಕೇರಿ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಮಂಗಳೂರು: ಸಿಗರೇಟ್ ಸೇದುವ ಲೈಟರ್ ವಿಚಾರಕ್ಕೆ ಎರಡು ತಂಡಗಳ ನಡುವೆ ಮಾರಾಮಾರಿ
ನಾಪೋಕ್ಲು ನಿವಾಸಿ ರಫೀಕ್(30) ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಕಾರನ್ನು ವಶಕ್ಕೆ ಪಡೆಯಲಾಗಿದೆ. ಅಂಬೆಕಲ್ ನವೀನ್ ಕುಶಾಲಪ್ಪ ಎಂಬವರು ಜನರಲ್ ತಿಮ್ಮಯ್ಯ ವೃತ್ತದಿಂದ ಮಂಗಳೂರು ರಸ್ತೆ ಕಡೆಗೆ ತೆರಳುವ ಮಾರ್ಗದ ಪಾರ್ಕಿಂಗ್ ಸ್ಥಳದಲ್ಲಿ ಕಾರನ್ನು ನಿಲ್ಲಿಸಿ ತಮ್ಮ ಫೋಟೋ ಸ್ಟುಡಿಯೋಗೆ ತೆರಳಿದ್ದರು.
ಮರಳಿ ಬಂದ ಸಂದರ್ಭ ಪಾರ್ಕಿಂಗ್ ಮಾಡಿದ ಸ್ಥಳದಲ್ಲಿ ಕಾರು ಇರಲಿಲ್ಲ. ಇದರಿಂದ ಆತಂಕಗೊಂಡ ಅಂಬೆಕಲ್ ನವೀನ್ ಕುಶಾಲಪ್ಪ ಅವರು ಅಲ್ಲಿದ್ದ ಸಿ.ಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲನೆ ನಡೆಸಿದರು. ಈ ವೇಳೆ ವ್ಯಕ್ತಿಯೊಬ್ಬ ನೇರವಾಗಿ ಕಾರು ಬಳಿ ಬಂದು ತನ್ನದೇ ಕಾರು ಎಂಬಂತೆ ಬಾಗಿಲು ತೆರೆದು ಕಾರನ್ನು ಚಲಾಯಿಸಿಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂದಿದೆ.
ಕಾರು ಕಳವು ಕುರಿತು ನವೀನ್ ಕುಶಾಲಪ್ಪ ಅವರು ತಕ್ಷಣ ನಗರ ಪೊಲೀಸ್ ಠಾಣೆಗೆ ದೂರು ನೀಡಿದರು. ತನಿಖೆ ಕೈಗೊಂಡ ಮಡಿಕೇರಿ ಪೊಲೀಸರು ಕಾರಿನಲ್ಲಿ ಅಳವಡಿಸಿದ್ದ ಜಿಪಿಎಸ್ ತಂತ್ರಜ್ಞಾನದ ಆಧಾರದಲ್ಲಿ ಕಾರಿನ ಲೊಕೇಶನ್ ಪತ್ತೆ ಹಚ್ಚಿದರು. ನಂತರ ಸ್ಥಳಕ್ಕೆ ತೆರಳಿ ಕಾರು ಸಹಿತ ಆರೋಪಿಯನ್ನು ಬಂಧಿಸಿ, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.