ಉಜಿರೆ:(ಜ.13) ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆಯಲ್ಲಿ “ಪ್ರವರ್ಧಿತ ಆರ್ಥಿಕತೆಯಲ್ಲಿ ಗ್ರಾಮೀಣ ಉದ್ಯಮಶೀಲತೆಯ ಪಾತ್ರ” ಎಂಬ ವಿಚಾರದ ಕುರಿತಾಗಿ ಅಂತರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮವು ಜ.17 ಮತ್ತು 18 ರಂದು ನಡೆಯಲಿದ್ದು, ಈ ಕಾರ್ಯಕ್ರಮದ ಪತ್ರಿಕಾಗೋಷ್ಠಿ ಜ.13 ರಂದು ನಡೆಯಿತು.
ಪ್ರವರ್ಧಿತ ಆರ್ಥಿಕತೆಯಲ್ಲಿ ಗ್ರಾಮೀಣ ಉದ್ಯಮಶೀಲತೆಯ ಪಾತ್ರ ಎಂಬ ವಿಷಯದ ಮೇಲೆ ಉಜಿರೆ ಎಸ್ ಡಿ ಎಂ ಕಾಲೇಜಿನ ಅರ್ಥಶಾಸ್ತ್ರ ಹಾಗೂ ಗ್ರಾಮೀಣ ಅಭಿವೃದ್ಧಿ ವಿಭಾಗವು ಜನವರಿ 17 ಮತ್ತು 18 ರವರೆಗೆ ಎರಡು ದಿನಗಳ ಕಾಲ ಅಂತರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ.
ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಆಸ್ಟ್ರೇಲಿಯಾ ನ್ಯಾಷನಲ್ ವಿಶ್ವವಿದ್ಯಾಲಯದ ಡಾ. ಕಾಲಿಯಪ್ಪ ಕಲಿರಾಜನ್ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಎಸ್. ಸತೀಶ್ಚಂದ್ರ ಅವರು ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರುತ್ತಾರೆ. ಜೊತೆಗೆ ಹಲವಾರು ಗಣ್ಯ ಅತಿಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಶನಿವಾರ ಸಂಜೆ 18 ರಂದು ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಅಸೆಟ್ ಮೊನಿಟೈಜೇಷನ್ ತಜ್ಞ ಸಮಿತಿ ಸದಸ್ಯ ಬೆಂಗಳೂರಿನ ಪ್ರೊ. ಕೃಷ್ಣರಾಜ್ ಸಮಾರೋಪ ಭಾಷಣವನ್ನು ಮಾಡಲಿದ್ದಾರೆ ಹಾಗೂ ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಅವರು ಗೌರವ ಆಹ್ವಾನಿತರಾಗಿ ಉಪಸ್ಥಿತರಿರುತ್ತಾರೆ. ಜೊತೆಗೆ ಅನೇಕ ಗಣ್ಯ ಅತಿಥಿಗಳು ಪಾಲ್ಗೊಳ್ಳಲಿದ್ದಾರೆ.
ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿವಿಧೆಡೆಯ 40ಕ್ಕೂ ಅಧಿಕ ಸಂಶೋಧನಾನಿರತರು ಈ ಸಂದರ್ಭದಲ್ಲಿ ಪ್ರಬಂಧ ಮಂಡಿಸಲಿದ್ದಾರೆ.
ಈ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಡಾ.ಬಿ.ಎ.ಕುಮಾರ ಹೆಗಡೆ ಕಾರ್ಯಕ್ರಮದ ವಿವರ ನೀಡಿದರು. ವಿಭಾಗದ ಮುಖ್ಯಸ್ಥರಾದ ಡಾ. ಗಣರಾಜ್ ಹಾಗೂ ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ ಡಾ. ಮಹೇಶ್ ಶೆಟ್ಟಿ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ.ಭಾಸ್ಕರ ಹೆಗಡೆ ಉಪಸ್ಥಿತರಿದ್ದರು.