Wed. Jan 15th, 2025

Ujire: ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಭಾರತೀಯ ಸೇನಾ ದಿನಾಚರಣೆ

ಉಜಿರೆ (ಜ.15): ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ನ್ಯಾಷನಲ್ ಕೆಡೆಟ್ ಕೋರ್ National Cadet Corps (ಎನ್.ಸಿ.ಸಿ.) ವತಿಯಿಂದ 77ನೇ ಭಾರತೀಯ ಸೇನಾ ದಿನಾಚರಣೆ ನಡೆಯಿತು.

ಇದನ್ನೂ ಓದಿ: ಮಂಗಳೂರು: ಮಂಗಳೂರಿಗೆ ಬರಲಿದ್ದಾರೆ ಡಾಲಿ ಚಾಯ್‌ವಾಲ

ಸ್ವಾತಂತ್ರದ ಬಳಿಕ ಭಾರತೀಯ ಸೇನೆಯ ಆಡಳಿತವು ಬ್ರಿಟಿಷರಿಂದ ಮುಕ್ತಗೊಂಡು (1949ರ ಜ. 15) ಸೇನೆಯ ಪ್ರಧಾನ ದಂಡನಾಯಕನಾಗಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರು ನೇಮಕಗೊಂಡ ಸವಿನೆನಪಿಗಾಗಿ ಸೇನಾ ದಿನ ಆಚರಿಸಲ್ಪಡುತ್ತದೆ.

ಕಾರ್ಯಕ್ರಮದ ಪ್ರಯುಕ್ತ, ದೇಶದ ಸೈನ್ಯದ ಇತಿಹಾಸ, ಪರಂಪರೆ ಮತ್ತು ಸೈನಿಕರ ಶ್ರಮವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ವಸ್ತುಪ್ರದರ್ಶನ ಹಾಗೂ ಕಾಲೇಜಿನ ಒಳಾಂಗಣದಲ್ಲಿ ಸೈನಿಕ ಕಾರ್ಯಾಚರಣೆಯ ಪ್ರಾತ್ಯಕ್ಷಿಕೆ ಏರ್ಪಡಿಸಲಾಯಿತು.

ಸೈನ್ಯದ ಟೆಂಟ್ ಒಂದನ್ನು ಸ್ಥಾಪಿಸಿ, ಸೈನ್ಯದ ತುಕಡಿಗಳು ಅಲ್ಲಿಂದ ಕಾರ್ಯಾಚರಣೆಗೆ ಹೊರಡುವ, ಸೈನಿಕರ ತಂಡವೊಂದು ಉಗ್ರರನ್ನು ಎದುರಿಸುವ ವೇಳೆ ಗಾಯಗೊಂಡಾಗ ಇನ್ನೊಂದು ತಂಡ ಬೆಂಬಲಕ್ಕೆ ಬಂದು ವ್ಯೂಹಾತ್ಮಕವಾಗಿ ಶತ್ರುಗಳ ಅಡಗುತಾಣಗಳನ್ನು ನಾಶಗೈಯುವ ಚಿತ್ರಣವನ್ನು ಕೆಡೆಟ್ ಗಳು ಪ್ರದರ್ಶಿಸಿದರು. ಭೂಸೇನೆಗೆ ಬೆಂಬಲವಾಗಿ ನೌಕಾಪಡೆಯ ತುಕಡಿಯೊಂದರ ಉಪಸ್ಥಿತಿಯನ್ನೂ ಚಿತ್ರಿಸಲಾಗಿತ್ತು.

ಕಾರ್ಯಾಚರಣೆ ವೇಳೆ ಬಳಸುವ ಫೈಲ್ ಫಾರ್ಮೇಶನ್, ಆ್ಯರೋ ಹೆಡ್ ಫಾರ್ಮೇಶನ್, ಡೈಮಂಡ್ ಹೆಡ್ ಫಾರ್ಮೇಶನ್, ಸ್ಪಿಯರ್ ಹೆಡ್ ಫಾರ್ಮೇಶನ್, ಇತ್ಯಾದಿ ವಿವಿಧ ವ್ಯೂಹಗಳನ್ನು ಪ್ರದರ್ಶಿಸಿದರು. ಸೀನಿಯರ್ ಅಂಡರ್ ಆಫೀಸರ್ ಸೀಮಾ ಜಹಾಂಗೀರ್ ಪ್ರಾತ್ಯಕ್ಷಿಕೆಯ ವೀಕ್ಷಕ ವಿವರಣೆ ನೀಡಿದರು.

ಜೂನಿಯರ್ ಅಂಡರ್ ಆಫೀಸರ್ (ಜೆಯುಒ) ಶಶಿಕುಮಾರ್ ಮತ್ತು ಕಂಪನಿ ಕ್ವಾರ್ಟರ್ ಮಾಸ್ಟರ್ ಸರ್ಜೆಂಟ್ (ಸಿಕ್ಯುಎಂಎಸ್) ಅರ್ಪಣ್ ಆಳ್ವ ಕಾರ್ಯಾಚರಣೆ ತಂಡಗಳ ನಾಯಕರ ಪಾತ್ರ ವಹಿಸಿದ್ದರು. ವಿದ್ಯಾರ್ಥಿಗಳಿಗೆ ಹಿರಿಯ ಕೆಡೆಟ್ ಶ್ರೀಮಂತ್ ಜಿ.ಎಂ. ತರಬೇತಿ ನೀಡಿದ್ದರು.

ಇದಕ್ಕೂ ಮೊದಲು, ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ, “ಭಾರತೀಯ ಸೇನೆಯು ದೇಶಕ್ಕೆ ನೀಡಿರುವ ಕೊಡುಗೆ ಅಪಾರ. ನಮ್ಮ ಕಾಲೇಜಿನ ಎನ್.ಸಿ.ಸಿ. ವಿಭಾಗವು ಬಹಳ ಅತ್ಯುನ್ನತ ದಾಖಲೆಗಳನ್ನು ಹೊಂದಿದೆ. ಸೈನಿಕರಲ್ಲಿರುವ ಶಿಸ್ತು, ಪರಿಶ್ರಮ ಇತ್ಯಾದಿ ಗುಣಗಳನ್ನು ಭವಿಷ್ಯದ ಸೈನಿಕರು (ಕೆಡೆಟ್ ಗಳು) ಅಳವಡಿಸಿಕೊಳ್ಳಬೇಕಾಗಿದೆ” ಎಂದರು.

ಕಾರ್ಯಕ್ರಮದ ಪ್ರಯುಕ್ತ ರಚಿಸಲಾದ ಭಿತ್ತಿಪತ್ರಿಕೆಯನ್ನು ಇದೇ ಸಂದರ್ಭದಲ್ಲಿ ಅವರು ಅನಾವರಣಗೊಳಿಸಿದರು. ವಸ್ತು ಪ್ರದರ್ಶನ ಉದ್ಘಾಟಿಸಿದರು.

ಉಪ ಪ್ರಾಂಶುಪಾಲೆ ಡಾ. ಶಲೀಪ್ ಎ.ಪಿ., ಕಲಾ ನಿಕಾಯದ ಡೀನ್ ಡಾ. ಶ್ರೀಧರ್ ಭಟ್, ಎನ್.ಸಿ.ಸಿ. ಭೂದಳದ ಮುಖ್ಯಸ್ಥ ಲೆಫ್ಟಿನೆಂಟ್ ಭಾನುಪ್ರಕಾಶ್ ಬಿ.ಇ., ಆಫೀಸರ್ ಇನ್ ಚಾರ್ಜ್ ಶೋಭಾ, ಮಾಜಿ ಆಫೀಸರ್ ಇನ್ ಚಾರ್ಜ್ ಶುಭಾರಾಣಿ ಉಪಸ್ಥಿತರಿದ್ದರು.

ಕೆಡೆಟ್ ಶೆಟ್ಟಿ ಯೋನ ಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರು.

ಪ್ರವೇಶ ದ್ವಾರದಲ್ಲಿ ರಂಗೋಲಿ ಮೂಲಕ ರಚಿಸಿದ ಸೇನಾ ದಿನಾಚರಣೆ ಕುರಿತ ಚಿತ್ರವನ್ನು ಕಾರ್ಪೊರಲ್ ದೀಪ್ತಿ ಆಚಾರ್ಯ ಪಿ. ಪ್ರಾಂಶುಪಾಲರಿಗೆ ವಿವರಿಸಿದರು (ಫ್ಲ್ಯಾಗ್ ಏರಿಯಾ ಬ್ರೀಫಿಂಗ್ ನಡೆಸಿದರು).

ವಸ್ತು ಪ್ರದರ್ಶನದಲ್ಲಿ ಯುದ್ಧದಲ್ಲಿ ಬಳಸಲಾಗುವ ಬಂದೂಕು, ಯುದ್ಧ ಟ್ಯಾಂಕ್ ಗಳ ಮಾದರಿ, ಸೇನಾ ಮೆಡಲ್ ಗಳ ಮಾದರಿ ಹಾಗೂ ಎನ್ ಸಿ ಸಿ ಸಮವಸ್ತ್ರ ಮತ್ತು ಬ್ಯಾಜ್ ಪ್ರದರ್ಶಿಸಲಾಯಿತು.

Leave a Reply

Your email address will not be published. Required fields are marked *