Sat. Jan 18th, 2025

Ujire: ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ “ಪ್ರವರ್ಧಿತ ಆರ್ಥಿಕತೆಯಲ್ಲಿ ಗ್ರಾಮೀಣ ಉದ್ಯಮಶೀಲತೆಯ ಪಾತ್ರ” ಅಂತರರಾಷ್ಟ್ರೀಯ ವಿಚಾರ ಸಂಕಿರಣ

ಉಜಿರೆ(ಜ.17): ಗ್ರಾಮೀಣ ಜನರ ಉನ್ನತಿಗೆ ಗ್ರಾಮೀಣ ಉದ್ಯಮಶೀಲತೆ ಮತ್ತು ಅದರ ಅಭಿವೃದ್ಧಿ ಪ್ರಸ್ತುತ ಅತ್ಯಗತ್ಯವಾಗಿದೆ ಎಂದು ಉಜಿರೆಯ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಅಭಿಪ್ರಾಯಪಟ್ಟರು.

ಇದನ್ನೂ ಓದಿ: ವಿಟ್ಲ: ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ಆರೋಪ!!!

ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಅರ್ಥಶಾಸ್ತ್ರ ಹಾಗೂ ಗ್ರಾಮೀಣ ಅಭಿವೃದ್ಧಿ ವಿಭಾಗದ ವತಿಯಿಂದ ಆಯೋಜಿಸಿದ “ಪ್ರವರ್ಧಿತ ಆರ್ಥಿಕತೆಯಲ್ಲಿ ಗ್ರಾಮೀಣ ಉದ್ಯಮಶೀಲತೆಯ ಪಾತ್ರ” (Rural Entrepreneurship in Emerging Economics- A way forward) ಕುರಿತ ಎರಡು ದಿನಗಳ ಅಂತರರಾಷ್ಟ್ರೀಯ ವಿಚಾರ ಸಂಕಿರಣ (Multi-disciplinary International Conference)ವನ್ನು ಇಂದು (ಜ. 17) ಉದ್ಘಾಟಿಸಿ ಅವರು ಮಾತನಾಡಿದರು.

ಗಾಂಧೀಜಿ ಅವರು ಹೇಳಿದಂತೆ ಹಳ್ಳಿಗಳ ಉದ್ಧಾರದಿಂದ ದೇಶದ ಪ್ರಗತಿ ಸಾಧ್ಯ. ದೇಶದ 60-70 ಪ್ರತಿಶತ ಜನಸಂಖ್ಯೆ ಗ್ರಾಮೀಣ ಪ್ರದೇಶದಲ್ಲಿದೆ. ಆದರೆ ಗ್ರಾಮೀಣರು ಬಡತನ, ನಿರುದ್ಯೋಗ, ಪ್ರತಿಭೆಗಳ ವಲಸೆಯಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಉದ್ಯಮಶೀಲತೆ ಉತ್ತಮ ಪರಿಹಾರವಾಗಬಲ್ಲದು ಎಂದು ಅವರು ಹೇಳಿದರು.

ಪ್ರಸ್ತುತ ಗ್ರಾಮೀಣ ಉದ್ಯಮಶೀಲತೆಗೆ ಸವಾಲುಗಳ ಹೊರತಾಗಿಯೂ ಹೇರಳ ಅವಕಾಶವಿದೆ. ನೈಸರ್ಗಿಕ ಸಂಪನ್ಮೂಲ, ಗ್ರಾಮೀಣ ಸಂಪನ್ಮೂಲ, ಸಾಂಸ್ಕೃತಿಕ ಸಂಪನ್ಮೂಲ ಇತ್ಯಾದಿಗಳ ಸಮರ್ಪಕ ಬಳಕೆಯಿಂದ ಗ್ರಾಮೀಣ ಉದ್ಯಮಶೀಲತೆಯನ್ನು ಯಶಸ್ವಿಯಾಗಿಸಬಹುದು. ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವಣ ಅಸಮಾನತೆಯನ್ನು ಕಡಿಮೆಗೊಳಿಸುವಲ್ಲಿ, ಸುಸ್ಥಿರ ಮತ್ತು ಸಮಗ್ರ ಅಭಿವೃದ್ಧಿಗೆ ಗ್ರಾಮೀಣ ಉದ್ಯಮಶೀಲತೆ ನೆರವಾಗುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಕೂಡ ತನ್ನ ಎನ್ ಜಿ ಒಗಳಾದ ರುಡ್ ಸೆಟ್, ಸಿರಿ ಮತ್ತು ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಗ್ರಾಮೀಣ ಉದ್ಯಮಶೀಲತೆಯನ್ನು ಬೆಂಬಲಿಸುತ್ತಿದೆ” ಎಂದರು.

ಮುಖ್ಯ ಅತಿಥಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕರ್ನಾಟಕದ ಓಂಬಡ್ಸ್ಮನ್ ಡಾ. ಬಾಲು ಕೆಂಚಪ್ಪ ಮಾತನಾಡಿದರು. ಗ್ರಾಮೀಣ ಉದ್ಯಮಶೀಲತೆಗೆ ಸುದೃಢ ಅಂತರ್ಜಾಲ ವ್ಯವಸ್ಥೆ ಅಗತ್ಯ. ಮಾರುಕಟ್ಟೆ ಪ್ರವೇಶ, ಹಣಕಾಸು ಕೂಡ ಮುಖ್ಯ ಸವಾಲುಗಳಾಗಿವೆ. ಗ್ರಾಮೀಣ ಉದ್ಯಮಶೀಲತೆಗೆ ಇರುವ ಸರಕಾರದ ಬೆಂಬಲ ಯೋಜನೆಗಳನ್ನು ಜನರಿಗೆ ತಲುಪಿಸಲು ರುಡ್ ಸೆಟ್ ನಂತಹ ಎನ್ ಜಿ ಒ ಗಳು ಕೂಡ ಹೆಚ್ಚಬೇಕು ಎಂದರು.

ಭಾರತದಲ್ಲಿ ಯುಪಿಐ ವ್ಯವಸ್ಥೆ ಉತ್ತಮವಾಗಿದೆ. ಜಾಗತಿಕ ಡಿಜಿಟಲ್ ವ್ಯವಹಾರದ 50 ಪ್ರತಿಶತ ವ್ಯವಹಾರಗಳು ಭಾರತದಲ್ಲಿ ನಡೆಯುತ್ತಿದೆ. ವಿದೇಶಗಳು ಕೂಡ ಈ ನಿಟ್ಟಿನಲ್ಲಿ ಹಿಂದಿವೆ. ಆದರೆ ಡಿಜಿಟಲ್ ವ್ಯವಹಾರದಲ್ಲಿ ಗ್ರಾಮೀಣರ ಒಳಗೊಳ್ಳುವಿಕೆ ಇನ್ನಷ್ಟು ಸಮರ್ಪಕವಾಗಬೇಕು. ಯುಪಿಐ ವ್ಯವಹಾರಕ್ಕೆ ಗ್ರಾಮೀಣ ವ್ಯಾಪಾರಿಗಳು ಕ್ಯುಆರ್ ಕೋಡ್ ಬಳಸಿದರೂ ಗಳಿಸಿದ ಹಣವನ್ನು ಎಟಿಎಂ ಮೂಲಕ ಹಿಂದೆಗೆದುಕೊಳ್ಳಲು ತಿಳಿದಿಲ್ಲ ಎಂಬಂತಾಗಬಾರದು ಎಂದರು.

ಅತಿಥಿ, ಉದ್ಯಮಿ ಶಶಿಧರ ಶೆಟ್ಟಿ ಬರೋಡ ಮಾತನಾಡಿ, ಉದ್ಯಮಶೀಲತೆಯ ಮಹತ್ವ ತಿಳಿಸಿದರು. ಎಲ್ಲವೂ ವಿದ್ಯಾಭ್ಯಾಸದಿಂದಲೇ ಆಗುವುದಿಲ್ಲವಾದರೂ ವಿದ್ಯಾಭ್ಯಾಸವಿಲ್ಲದೆ ಉದ್ಯಮದಲ್ಲಿ ಹೆಚ್ಚಿನ ಯಶಸ್ಸು ಸಾಧ್ಯವಿಲ್ಲ. ಆದರೆ ವಿದ್ಯಾಭ್ಯಾಸವಾಗಲಿ, ಉದ್ಯಮವಾಗಲಿ, ಸಮರ್ಪಣಾಭಾವ ಅಗತ್ಯ. ಉದ್ಯಮ ನಡೆಸಲು ಧೈರ್ಯ ಬೇಕು. ವ್ಯವಹಾರದಲ್ಲಿ ಮೋಸ, ಅತಿಯಾಸೆ ಇರಬಾರದು ಎಂದರು.

“ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ಯಮಶೀಲತೆಗೆ ಹೇರಳ ಅವಕಾಶಗಳಿವೆ. ಆದರೆ ಆಳಕ್ಕಿಳಿದು ಮುನ್ನಡೆಯುವವರ ಕೊರತೆಯಿದೆ. ವಿಭಿನ್ನ ಪರಿಕಲ್ಪನೆಯೊಂದಿಗೆ ಉದ್ಯಮಶೀಲರಾಗಲು ಮುಂದೆ ಬರುವ ನೂರು ಮಂದಿ ಯುವಕರಿಗೆ ನಾನು ಹಣಕಾಸು ಬೆಂಬಲ ನೀಡಲು ತಯಾರಿದ್ದೇನೆ” ಎಂದು ಅವರು ಘೋಷಿಸಿದರು. ಕಸದಿಂದ ಗೊಬ್ಬರ ತಯಾರಿಸುವ ಯೋಜನೆಯೊಂದರ ಬಗ್ಗೆ ಉಜಿರೆ ಗ್ರಾಮ ಪಂಚಾಯತ್ ನೊಂದಿಗೆ ತಾನು ಕೆಲಸ ಮಾಡುತ್ತಿರುವುದಾಗಿಯೂ ಅವರು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ, ಆಸ್ಟ್ರೇಲಿಯಾದ ದಿ ಆಸ್ಟ್ರೇಲಿಯನ್ ನ್ಯಾಷನಲ್ ಯುನಿವರ್ಸಿಟಿಯ ವಿಶ್ರಾಂತ ಪ್ರಾಧ್ಯಾಪಕ ಡಾ. ಕಾಳಿಯಪ್ಪ ಕಾಳಿರಾಜನ್, “ಗ್ರಾಮೀಣ ಉದ್ಯಮಶೀಲತೆಯು ಬಡತನ, ಹಸಿವು ನಿವಾರಿಸುತ್ತದೆ. ಗ್ರಾಮೀಣ ಪ್ರದೇಶಕ್ಕೆ ಗ್ರಾಮೀಣ ಉದ್ಯಮಶೀಲತೆ ಅಗತ್ಯ” ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ, “ಗ್ರಾಮೀಣ ಉದ್ಯಮಶೀಲತೆಯು ಉದ್ಯೋಗ ಸೃಜಿಸಿ ದೇಶದ ಜಿಡಿಪಿಗೆ ಕೊಡುಗೆ ನೀಡುತ್ತದೆ. ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ಕಡಿಮೆಗೊಳಿಸುತ್ತದೆ. ಕೊರೊನಾ ಸಂದರ್ಭದಲ್ಲಿ ಅನೇಕ ಮಂದಿ ಊರಿಗೆ ಮರಳಿ ಸ್ವೋದ್ಯೋಗ ಪ್ರಾರಂಭಿಸಿದ್ದಾರೆ. ಈ ವಿಚಾರ ಸಂಕಿರಣವು ವಾಣಿಜ್ಯ, ಅರ್ಥಶಾಸ್ತ್ರ, ವ್ಯವಹಾರ ಆಡಳಿತ ವಿಭಾಗದ ವಿದ್ಯಾರ್ಥಿಗಳು ಹಾಗೂ ಇತರ ಪ್ರತಿನಿಧಿಗಳಿಗೆ ಗ್ರಾಮೀಣ ಉದ್ಯಮಶೀಲತೆ ಕುರಿತು ಹೊಳಹುಗಳನ್ನು ನೀಡಲಿದೆ” ಎಂದರು.

ವಿಚಾರ ಸಂಕಿರಣದ ಮುಖ್ಯ ಸಲಹೆಗಾರ, ರಾಜ್ಯ ಯೋಜನಾ ಮಂಡಳಿ ಸದಸ್ಯ, ಮಂಗಳೂರು ವಿವಿ ಅರ್ಥಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಜಿ.ವಿ. ಜೋಷಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಅತಿಥಿಗಳನ್ನು ಸನ್ಮಾನಿಸಲಾಯಿತು.

ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ ಡಾ. ಮಹೇಶ್ ಕುಮಾರ್ ಶೆಟ್ಟಿ ಎಚ್. ಸ್ವಾಗತಿಸಿದರು. ಅರ್ಥಶಾಸ್ತ್ರ & ಗ್ರಾಮೀಣ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಡಾ. ಗಣರಾಜ ಕೆ. ವಂದಿಸಿದರು. ಅಶ್ವಿತ್ ಎಚ್.ಆರ್. ಮತ್ತು ಅಶ್ವಿನಿ ಜೈನ್ ಕಾರ್ಯಕ್ರಮ ನಿರೂಪಿಸಿದರು.

ದೇಶದ ವಿವಿಧೆಡೆಯಿಂದ 300ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *