ಬಂಟ್ವಾಳ:(ಜ.18) ಟೋಲ್ ಹಣ ನೀಡಿಲ್ಲ ಎಂಬ ಕಾರಣಕ್ಕಾಗಿ ಟೋಲ್ ಸಿಬ್ಬಂದಿ ಲಾರಿ ಚಾಲಕನ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದ ಮೂಲಕ ಹರಿದಾಡುತ್ತಿದೆ.
ಇದನ್ನೂ ಓದಿ: ಉಜಿರೆ: ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ “ಶುಭಮಸ್ತು” ಕಾರ್ಯಕ್ರಮ
ಬಂಟ್ವಾಳ ತಾಲೂಕಿನ ಬ್ರಹ್ಮರಕೋಟ್ಲು ಎಂಬಲ್ಲಿರುವ ವಿವಾದಾತ್ಮಕ ಟೋಲ್ ಗೇಟ್ ನಲ್ಲಿ ನಡೆದ ಘಟನೆಯಾಗಿದ್ದು, ಈವರೆಗೆ ಸ್ಥಳೀಯ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.
ಜ.17 ರಂದು ಶುಕ್ರವಾರ ಸಂಜೆ ವೇಳೆ ಮಂಗಳೂರು ಕಡೆಯಿಂದ ಬರುತ್ತಿದ್ದ ಲಾರಿ ಚಾಲಕ ಬ್ರಹ್ಮರಕೋಟ್ಲುನಲ್ಲಿರುವ ಟೋಲ್ ಗೇಟ್ ನಲ್ಲಿ ಹಣ ನೀಡಿಲ್ಲ ಎಂಬ ಕಾರಣಕ್ಕಾಗಿ ಟೋಲ್ ಸಿಬ್ಬಂದಿ ಕೈಯಿಂದ ಹಲ್ಲೆ ನಡೆಸಿದ್ದಲ್ಲದೆ, ಲಾರಿ ಬಾಗಿಲು ತೆರೆದು ಆತನ ಕೈ ಹಿಡಿದು ಹೊರಗೆ ಎಳೆಯುತ್ತಿದ್ದಾನೆ.
ಸಾಲದು ಎಂಬಂತೆ ಅವ್ಯಾಚ್ಯ ಶಬ್ದಗಳಿಂದ ಬೈದು ಲಾರಿಯನ್ನು ವಾಪಸು ಹಿಂದೆ ಕಳುಹಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟೋಲ್ ಗೇಟ್ ಸಿಬ್ಬಂದಿಯ ರೌದ್ರಾವತಾರದ ವಿಡಿಯೋವನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಮಾಡುವ ಇತರ ವಾಹನ ಸವಾರರು ತೆಗೆದು ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರಿಗೆ ಕಳುಹಿಸಿದ್ದಾರೆ. ಆದರೆ ಈವರೆಗೆ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಿಂದ ಯಾವುದೇ ಕ್ರಮ ಆಗಿಲ್ಲ ಎಂಬುದು ಉಲ್ಲೇಖಾರ್ಹ.
ಟೋಲ್ ಗೇಟ್ ನಲ್ಲಿ ರೌಡಿಸಂ ಮಾಮೂಲಿ
ರಾಷ್ಟ್ರೀಯ ಹೆದ್ದಾರಿ ಮಂಗಳೂರು – ಬೆಂಗಳೂರು ಇದರ ಮಧ್ಯೆ ಬರುವ ಬಂಟ್ವಾಳ ತಾಲೂಕಿನ ಬ್ರಹ್ಮರಕೋಟ್ಲು ಟೋಲ್ ಗೇಟ್ ನಲ್ಲಿ ಗಲಾಟೆ ಎಂಬುದು ಮಾಮೂಲಿಯಾಗಿದೆ. ಟೋಲ್ ಆರಂಭವಾದಂದಿನಿಂದ ಇಲ್ಲಿವರೆಗೆ ನಿತ್ಯ ಏನಾದರೊಂದು ಗಲಾಟೆಗಳು ನಡೆಯುತ್ತಲೇ ಇದೆ.
ಇಲ್ಲಿನ ಸಿಬ್ಬಂದಿಗಳು ಅವರ ವ್ಯಾಪ್ತಿ ಮೀರಿ ವಾಹನ ಚಾಲಕರ ಮೇಲೆ ಕೈ ಮಾಡುವುದು ಮತ್ತು ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡುವುದು ಅವರಿಗೆ ಚಾಳಿಯಾಗಿದೆ.
ಇಂತಹ ಅನೇಕ ಪ್ರಕರಣಗಳು ನಡೆದು ಟೋಲ್ ಗೇಟ್ ಸಿಬ್ಬಂದಿಗಳ ಮೇಲೆ ಪ್ರಕರಣಗಳು ದಾಖಲಾದರೂ ಕೂಡ ಇವರ ಕೀಳು ಮಟ್ಟದ ವರ್ತನೆಗೆ ಬ್ರೇಕ್ ಬಿದ್ದಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಇಲ್ಲಿನ ಟೋಲ್ ಎಂಬುದು ಹೆಸರಿಗೆ ಮಾತ್ರ ಎಂಬಂತೆ ಇದ್ದು, ಇಲ್ಲಿ ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲದೆ ಇರುವ ಬಗ್ಗೆ ಸಾಕಷ್ಟು ಬಾರಿ ಮಾಧ್ಯಮಗಳು ವರದಿ ಮಾಡಿದರೆ, ಅನೇಕ ಸಂಘಟನೆಗಳು ಟೋಲ್ ವಿರುದ್ದ ಪ್ರತಿಭಟನೆ ನಡೆಸಿ,ಅವೈಜ್ಞಾನಿಕ ಮಾದರಿಯ ಟೋಲ್ ನ್ನು ಮುಚ್ಚುವಂತೆ ಒತ್ತಾಯ ಮಾಡಿದ್ದರು.