ಸುಳ್ಯ:(ಜ.18) ಪತ್ನಿಯನ್ನು ಗುಂಡಿಕ್ಕಿ ಕೊಂದು ಪತಿ ಆತ್ಮಹತ್ಯೆಗೆ ಶರಣಾದ ಘಟನೆ ಸುಳ್ಯ ತಾಲೂಕು ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಡಿಮಜಲು ಎಂಬಲ್ಲಿ ಜ.17ರ ರಾತ್ರಿ ನಡೆದಿದೆ.
ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಡಿಮಜಲು ಎಂಬಲ್ಲಿ ರಾಮಚಂದ್ರ(54) ಎಂಬವರು ತನ್ನ ಪತ್ನಿ ವಿನೋದ(43) ಅವರನ್ನು ಗುಂಡಿಕ್ಕಿ ಕೊಂದು ಬಳಿಕ ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಡಿಮಜಲು ನಿವಾಸಿ ಕೃಷಿಕ ರಾಮಚಂದ್ರ ಗೌಡ ಅವರು ಪ್ರತಿದಿನ ಕುಡಿದು ಬಂದು ಹೆಂಡತಿ ಹಾಗೂ ಮಕ್ಕಳೊಂದಿಗೆ ಜಗಳ ಮಾಡುತ್ತಿದ್ದರು ಎನ್ನಲಾಗಿದೆ. ದಂಪತಿಗೆ ಪ್ರಶಾಂತ್, ನಿಶಾಂತ್ ಮತ್ತು ರಂಜಿತ್ ಎಂಬ ಮೂವರು ಗಂಡು ಮಕ್ಕಳು. ಕಾಡು ಪ್ರಾಣಿಗಳ ಉಪಟಳದ ಲೈಸೆನ್ಸ್ ಇರುವ ಕೋವಿ ಕೂಡ ಇರಿಸಿಕೊಂಡಿದ್ದರು. 3 ತಿಂಗಳ ಹಿಂದೆ ಇದೇ ಕೋವಿ ಹಿಡಿದು ಮಕ್ಕಳು ಹಾಗೂ ಪತ್ನಿಯನ್ನು ಓಡಿಸಿದ್ದರಂತೆ.
ಪ್ರಕರಣ ಪೋಲೀಸ್ ಠಾಣೆಯ ಮೆಟ್ಟಿಲೇರಿದ್ದರಿಂದ ಪೋಲೀಸರ ಸೂಚನೆಯಂತೆ ಮನೆಯಲ್ಲಿದ್ದ ಕೋವಿಯನ್ನು ಸುಳ್ಯದ ಕೋವಿ ಮಳಿಗೆಯಲ್ಲಿ ಮೂರು ತಿಂಗಳ ಅವಧಿಗೆ ಡೆಪಾಸಿಟ್ ಮಾಡಲಾಗಿತ್ತು. ಅವಧಿ ಮುಗಿದ ಹಿನ್ನೆಲೆಯಲ್ಲಿ ರಾಮಚಂದ್ರ ಅವರ ಪತ್ನಿ ವಿನೋದರವರ ವಿನಂತಿಯ ಮೇರೆಗೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತರೊಬ್ಬರು ಕೋವಿ ಬಿಡಿಸಿಕೊಳ್ಳಲು ಸಹಕರಿಸಿದ್ದರು. ಅದರಂತೆ ಕೋವಿಯನ್ನು ಮೂರು ದಿನ ಹಿಂದೆಯಷ್ಟೇ ಮನೆಗೆ ವಾಪಸ್ ತರಲಾಗಿತ್ತು.
ನಿನ್ನೆ ರಾತ್ರಿ ಕುಡಿದು ಬಂದು ಎಂದಿನಂತೆ 10 ಗಂಟೆಯ ನಂತರ ಪತ್ನಿ ವಿನೋದ ಹಾಗೂ ಪುತ್ರ ಪ್ರಶಾಂತ್ ರೊಡನೆ ರಾಮಚಂದ್ರ ಗೌಡರು ಜಗಳ ತೆಗೆದಿದ್ದಾರೆ. ಮಗ ಪ್ರಶಾಂತ್ ಅಪ್ಪನಿಗೆ ತಿರುಗೇಟು ಕೊಟ್ಟಾಗ ರಾತ್ರಿ 10.30ರ ವೇಳೆಗೆ ರಾಮಚಂದ್ರ ಗೌಡರು ಮನೆಯಲ್ಲಿದ್ದ ಕೋವಿ ಎತ್ತಿಕೊಂಡು, ಮಗನಿಗೆ ಗುಂಡಿಕ್ಕಲು ಬಂದಿದ್ದಾರೆ.
ಇದನ್ನು ಕಂಡ ಪತ್ನಿ ವಿನೋದರವರು ಅಡ್ಡ ಬಂದಿದ್ದಾರೆ. ಗಂಡನನ್ನು ತಡೆಯಲು ಪ್ರಯತ್ನಿಸಿ, ಅವರು ಮಲಗುತ್ತಿದ್ದ ಕೊಠಡಿಯ ಕಡೆಗೆ ದೂಡಿಕೊಂಡು ಬಂದಿದ್ದಾರೆ. ಆ ವೇಳೆ ರಾಮಚಂದ್ರ ಗೌಡರು ಕೋವಿಯ ಟ್ರಿಗರ್ ಎಳೆದಿದ್ದಾರೆ. ಪರಿಣಾಮ ಗುಂಡು ತಗುಲಿ ವಿನೋದ ನೆಲಕ್ಕುರುಳಿದ್ದಾರೆ. ಇದನ್ನು ಕಂಡು ರಾಮಚಂದ್ರ ಗೌಡರಿಗೆ ಕುಡಿತದ ಅಮಲು ಇಳಿದಿದೆ.
ಭಯದಲ್ಲಿ ಇನ್ನು ನಾನು ಬದುಕಿದರೆ ಕಷ್ಟ ಎಂದು ರಬ್ಬರ್ ಗೆ ಹಾಕಲೆಂದು ತಂದಿದ್ದ ವಿಷವನ್ನು ಕುಡಿದು ಪತ್ನಿ ಬಿದ್ದಲ್ಲಿಗೇ ಬಂದು ಬಿದ್ದಿದ್ದಾರೆ. ಆ ಹೊತ್ತಲ್ಲಿ ಮನೆಯಲ್ಲಿ ಹಿರಿಮಗ ಪ್ರಶಾಂತ್ ಮಾತ್ರ ಇದ್ದನೆನ್ನಲಾಗಿದೆ. ಎರಡನೇ ಮಗ ನಿಶಾಂತ್ ಸುಳ್ಯದಲ್ಲಿದ್ದರೆಂದೂ, ಕಿರಿಮಗ ರಂಜಿತ್ ಬೆಳ್ತಂಗಡಿಗೆ ಹೋಗಿದ್ದರು ಎಂದು ತಿಳಿದು ಬಂದಿದೆ.