Mon. Jan 20th, 2025

Mangalore: ಒಎನ್ ಜಿಸಿ ಎಂಆರ್ ಪಿಎಲ್ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಚಾಲನೆ

ಮಂಗಳೂರು:(ಜ.19) ಕರಾವಳಿ ಉತ್ಸವ ಹಿನ್ನೆಲೆಯಲ್ಲಿ ಒಎನ್ ಜಿಸಿ-ಎಂಆರ್ ಪಿಎಲ್ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ಶನಿವಾರ ಸಂಜೆ ತಣ್ಣೀರುಬಾವಿ ಬೀಚ್ ನಲ್ಲಿ ಚಾಲನೆ ನೀಡಿದರು.

ಇದನ್ನೂ ಓದಿ: ಬೆಳ್ತಂಗಡಿ: ಸ್ಮಿತೇಶ್ ಎಸ್ ಬಾರ್ಯರವರಿಗೆ ರಾಜ್ಯ ಯುವ ಪ್ರಶಸ್ತಿ 2025


ಬಳಿಕ ಮಾತಾಡಿದ ಅವರು, “ಜನರ ಮನಸುಗಳನ್ನು ಬೆಸೆಯುವ ಇಂತಹ ಕಾರ್ಯಕ್ರಮ ಮಂಗಳೂರಿನಲ್ಲಿ ಆಯೋಜನೆ ಮಾಡಿರುವುದು ಖುಷಿ ತಂದಿದೆ. ಟೀಮ್ ಮಂಗಳೂರು ನೇತೃತ್ವದಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ರಾಜ್ಯ ಸರಕಾರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಈ ಕಾರ್ಯಕ್ರಮ ಆಯೋಜನೆಗೊಂಡಿದೆ.

ಈ ಬಾರಿ ದೇಶ ವಿದೇಶದ ಗಾಳಿಪಟ ಪಟುಗಳು ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ವಿಚಾರ. ಮುಂದಿನ ದಿನಗಳಲ್ಲಿ ಇದನ್ನು ಸ್ಪರ್ಧೆಯ ರೀತಿಯಲ್ಲಿ ಆಯೋಜನೆ ಮಾಡಲು ಚಿಂತನೆ ಮಾಡಲಾಗಿದೆ. ಇಂತಹ ಕಾರ್ಯಕ್ರಮಗಳಿಂದ ನಮ್ಮ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುವುದು ಮಾತ್ರವಲ್ಲದೆ ಮನಸ್ಸಿಗೆ ಉಲ್ಲಾಸ ನೀಡುತ್ತದೆ.

ಎರಡು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಮಂಗಳೂರಿನ ಜನರು ಪಾಲ್ಗೊಳ್ಳಬೇಕು. ಪ್ರತೀ ವರ್ಷ ಒಂದೇ ನಿಗದಿತ ದಿನಾಂಕದಂದು ಈ ಉತ್ಸವ ಆಯೋಜನೆ ಮಾಡುವ ಮೂಲಕ ಅಂತಾರಾಷ್ಟ್ರೀಯ ಕ್ಯಾಲೆಂಡರ್ ನಲ್ಲಿ ಗುರುತಿಸುವಂತಾಗಬೇಕು. ಇದರಿಂದ ದೇಶ ವಿದೇಶದ ಪ್ರವಾಸಿಗರು ಇನ್ನಷ್ಟು ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ. ಇಂತಹ ಕಾರ್ಯಕ್ರಮಗಳಿಗೆ ಜಿಲ್ಲಾಡಳಿತ ಮತ್ತು ಸರಕಾರದ ಸಹಕಾರ ಖಂಡಿತ ಇರಲಿದೆ“ ಎಂದರು.


ಬಳಿಕ ಮಾತಾಡಿದ ವಿಧಾನ ಪರಿಷತ್ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಅವರು, ”ಗಾಳಿಪಟ ಉತ್ಸವದಿಂದ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಬೆಂಬಲ ಸಿಗುತ್ತದೆ. ಇಂದು ಮತ್ತು ನಾಳೆ ಸಾವಿರಾರು ಮಂದಿ ಆಸಕ್ತರು, ಪ್ರವಾಸಿಗರು ಇಲ್ಲಿ ನೆರೆಯುತ್ತಾರೆ. ಮಂಗಳೂರಿನಲ್ಲಿ ಇಂತಹ ಕಾರ್ಯಕ್ರಮಗಳು ಆಯೋಜನೆಗೊಳ್ಳಲಿ. ಇದಕ್ಕೆ ಜನಪ್ರತಿನಿಧಿಗಳು ವಿವಿಧ ಇಲಾಖೆಗಳು ಮಾತ್ರವಲ್ಲದೆ ಜನರು ಬೆಂಬಲ ನೀಡಬೇಕು“ ಎಂದು ಕರೆ ನೀಡಿದರು.


ವೇದಿಕೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಎಂಆರ್ ಪಿಎಲ್ ನಿರ್ದೇಶಕ ನಂದಕುಮಾರ್, ಮೇಯರ್ ಮನೋಜ್ ಕುಮಾರ್, ಮನಪಾ ವಿಪಕ್ಷ ನಾಯಕ ಅನಿಲ್ ಕುಮಾರ್, ಟೀಮ್ ಮಂಗಳೂರಿನ ಸರ್ವೇಶ್ ರಾವ್ ಮತ್ತಿತರರು ಉಪಸ್ಥಿತರಿದ್ದರು.


ಗಾಳಿಪಟ ಉತ್ಸವದಲ್ಲಿ ಗ್ರೀಸ್, ಯುಕೆ, ಜರ್ಮನಿ, ಇಂಡೋನೇಷ್ಯಾ, ನೆದರ್ ಲ್ಯಾಂಡ್, ಎಸ್ಟಿನೋವಾ ಮಾತ್ರವಲ್ಲದೆ ದೇಶದ ವಿವಿಧ ರಾಜ್ಯಗಳಿಂದ ನುರಿತ ಗಾಳಿಪಟ ಹಾರಾಟಗಾರರು ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *