ಶಿರ್ವ :(ಜ.21) ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗ ಕಾಪು ತಾಲೂಕು ಮತ್ತು ಶಿರ್ವದ ವಿದ್ಯಾವರ್ಧಕ ಸಂಘದ ಶಿಕ್ಷಣ ಸಂಸ್ಥೆಗಳ ಸಹಕಾರದೊಂದಿಗೆ 80:20ರ ಅನುಪಾತದಲ್ಲಿ ಸಂಘದ ಆಡಳಿತಕ್ಕೊಳಪಟ್ಟ ಹಿಂದೂ ಪ್ರೌಢಶಾಲೆ, ಶಿರ್ವ ಮತ್ತು ಹಿಂದೂ ಹಿರಿಯ ಪ್ರಾಥಮಿಕ ಶಾಲೆ, ಶಿರ್ವ ಸಂಸ್ಥೆಗಳಿಗೆ ಒಂದು ಲಕ್ಷದ ಎಪ್ಪತ್ತು ಸಾವಿರ ರೂಪಾಯಿ ಮೌಲ್ಯದ ಡೆಸ್ಕ್ ಮತ್ತು ಬೆಂಚುಗಳನ್ನು ಸೋಮವಾರ (ದಿ. 20-01-2025 ರಂದು) ಹಸ್ತಾಂತರಿಸಲಾಯಿತು.
ಇದನ್ನೂ ಓದಿ: ಉಜಿರೆ :ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ಸ.ಪ್ರೌ.ಕಲ್ಮಂಜ ಶಾಲೆಗೆ ಶುದ್ಧ ಕುಡಿಯುವ ನೀರು ಘಟಕ ಕೊಡುಗೆ
ಶಿರ್ವದ ಹಿಂದೂ ಪ್ರೌಢಶಾಲೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ| ವೈ ಭಾಸ್ಕರ ಶೆಟ್ಟಿ ಕೊಡುಗೆಯನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಿ ಮಾತನಾಡಿ ಶ್ರೀ ಕ್ಷೇತ್ರದ ವತಿಯಿಂದ ಶಿಕ್ಷಣ ಕ್ಷೇತ್ರಕ್ಕೆ ದೊರಕುತ್ತಿರುವ ನೆರವಿನಿಂದ ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮ ಶಾಲೆಗಳಿಗೆ ತುಂಬಾ ಪ್ರಯೋಜನವಾಗುತ್ತಿದ್ದು ಹಿರಿಯರು ಸ್ಥಾಪಿಸಿದ ಸಂಸ್ಥೆಗಳನ್ನು ಉಳಿಸಿ ಬೆಳೆಸಲು ಸಹಕಾರಿಯಾಗಿದೆ ಎಂದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಕಾಪು ತಾಲೂಕಿನ ಯೋಜನಾಧಿಕಾರಿ ಮಮತಾ ಶೆಟ್ಟಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಿವಿಧ ಕ್ಷೇತ್ರಗಳಿಗೆ ಒದಗಿಸಲಾಗುತ್ತಿರುವ ಕೊಡುಗೆಗಳ ಬಗ್ಗೆ ತಿಳಿಸಿದರಲ್ಲದೇ, ಈ ಶೈಕ್ಷಣಿಕ ವರ್ಷದಲ್ಲಿ ಕಾಪು ತಾಲೂಕಿನ ವಿವಿಧ ಶಾಲೆಗಳಿಗೆ ರೂ. 11.39 ಲಕ್ಷ ಮೌಲ್ಯದ 134 ಜತೆ ಬೆಂಚು ಮತ್ತು ಡೆಸ್ಕ್ಗಳನ್ನು ವಿತರಿಸಲಾಗಿದೆ ಎಂದರು.
ಉಸಿರಿಗಾಗಿ ಹಸಿರು ಸಂಘಟನಕಾರರಾದ ಸಂತೋಷ್ ಕುಮಾರ್ ಶೆಟ್ಟಿಗಾರ್, ಕಾಪು, ಶಿರ್ವ ವಲಯದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಶಿರ್ವ ಒಕ್ಕೂಟದ ಅಧ್ಯಕ್ಷೆ ವಿಮಲಾ ಹಸ್ಲರ್, ಶಿರ್ವ ವಲಯದ ಮೇಲ್ವಿಚಾರಕಿ ಗೀತಾ, ಹಿಂದೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಭಾಸ್ಕರ ಎ., ಅಧ್ಯಾಪಕ-ಅಧ್ಯಾಪಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹಿಂದೂ ಪ್ರೌಢಶಾಲೆಯ ಮುಖ್ಯಶಿಕ್ಷಕಿ ವಸಂತಿ ಸ್ವಾಗತಿಸಿ, ಶಿಕ್ಷಕ ಸುರೇಂದ್ರನಾಥ ಶೆಟ್ಟಿ ವಂದಿಸಿ, ಶಿಕ್ಷಕಿ ಸುಪ್ರೀತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.