ಬೆಂಗಳೂರು :(ಜ.22) ದೇವಸ್ಥಾನಗಳ ಜಾತ್ರೆ, ಉತ್ಸವ ಇತ್ಯಾದಿ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ನಿಯಮದಂತೆ ದೇವರ ಮೇಲೆ ಶ್ರದ್ಧೆ ಇರುವವರಿಗೆ ಮಾತ್ರ ವಹಿವಾಟು ಮಾಡಲು ಅವಕಾಶ ನೀಡಬೇಕು ಮತ್ತು ಅನ್ಯ ಮತೀಯರಿಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಮತ್ತು ದೇವಸ್ಥಾನಗಳ ರಕ್ಷಣೆಗಾಗಿ ಮಂದಿರ ಅಧಿವೇಶನದಲ್ಲಿ ತೆಗೆದುಕೊಂಡ ನಿರ್ಣಯಗಳ ಬಗ್ಗೆ ಕರ್ನಾಟಕ ಮಂದಿರ ಮಹಾಸಂಘದ ವತಿಯಿಂದ ಜನವರಿ 21, ಮಂಗಳವಾರ ಧಾರ್ಮಿಕ ದತ್ತಿ ಇಲಾಖೆ ಸಚಿವರಾದ ಶ್ರೀ. ರಾಮಲಿಂಗಾ ರೆಡ್ಡಿ ಇವರಿಗೆ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಮಂದಿರ ಮಹಾಸಂಘದ ರಾಜ್ಯ ಸಂಯೋಜಕರಾದ ಶ್ರೀ. ಮೋಹನ್ ಗೌಡ, ಕಾನೂನು ಸಲಹೆಗಾರರಾದ ಶ್ರೀ. ರವಿಶಂಕರ್, ಬೆಂಗಳೂರು ಜಿಲ್ಲಾ ಸಂಯೋಜಕರಾದ ಡಾ. ಮಹೇಶ್ ಕುಮಾರ್ ಬಿ.ಎನ್, ಡಾ. ಶ್ರೀನಿವಾಸ್ ಗುರೂಜಿ, ಶ್ರೀ. ಜಯರಾಮ್ ಎಸ್, ಶ್ರೀ. ರಮೇಶ ಪಿ, ಶ್ರೀ. ರಂಗನಾಥ್ ಆರ್, ಶ್ರೀ. ವೆಂಕಟೇಶ್ ಮೂರ್ತಿ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಸುಳ್ಯ: ವಾಹನಕ್ಕೆ ಫುಲ್ ಟ್ಯಾಂಕ್ ಡೀಸೆಲ್ ಹಾಕಿಸಿ ಎಸ್ಕೇಪ್ ಆದ ಚಾಲಕ
ಈ ವೇಳೆ ಶ್ರೀ. ಮೋಹನ ಗೌಡ ಇವರು ಪ್ರತಿಕ್ರಿಯಿಸಿ, ಕರ್ನಾಟಕ ಮಂದಿರ ಮಹಾಸಂಘವು ಜನವರಿ 4 ಮತ್ತು 5 ರಂದು ಬೆಂಗಳೂರಿನ ಬಸವೇಶ್ವರ ನಗರದಲ್ಲಿ ರಾಜ್ಯ ಸ್ತರದ ಮಂದಿರ ಅಧಿವೇಶನವನ್ನು ಆಯೋಜಿಸಿದ್ದು, ಇದರಲ್ಲಿ ರಾಜ್ಯದ 800ಕ್ಕೂ ಅಧಿಕ ವಿಶ್ವಸ್ಥರು, ಅರ್ಚಕರು ಭಾಗವಹಿಸಿದ್ದರು. ದೇವಸ್ಥಾನಗಳ ರಕ್ಷಣೆ ದೃಷ್ಟಿಯಿಂದ ಅಧಿವೇಶನದಲ್ಲಿ ತೆಗೆದುಕೊಳ್ಳಲಾದ ನಿರ್ಣಯಗಳ ಬಗ್ಗೆ ತಿಳಿಸುತ್ತಾ, ಕರ್ನಾಟಕದಲ್ಲಿ ಪ್ರಾಚೀನ ಅಥವಾ ಐತಿಹಾಸಿಕ ಮಹತ್ವವಿರುವ, ಆದರೆ ಆಡಳಿತ ಹಾಗೂ ಪುರಾತತ್ವ ವಿಭಾಗದಿಂದ ದುರ್ಲಕ್ಷಿಸಲ್ಪಟ್ಟಿರುವ ದೇವಸ್ಥಾನಗಳ ಜೀರ್ಣೋದ್ಧಾರ ಮಾಡಲು ರಾಜ್ಯ ಸರಕಾರ ಮುಂಬರುವ ಮುಂಗಡ ಪತ್ರದಲ್ಲಿ ಸಾಕಷ್ಟು ಅನುದಾನವನ್ನು ನೀಡಬೇಕು, ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ದೇವಸ್ಥಾನಗಳಿಂದ ಸಂಗ್ರಹವಾದ ಕಾಮನ್ ಪೂಲ್ ನಿಧಿಯನ್ನು ಅನ್ಯ ಯಾವುದೇ ಉದ್ಧೇಶಕ್ಕೆ ಬಳಸದೇ ಹಿಂದೂ ಧಾರ್ಮಿಕ ಉದ್ಧೇಶಕ್ಕೆ ಮಾತ್ರ ಬಳಸಬೇಕು, ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳ ಮೂಲಕ ಭಕ್ತರಿಗೆ, ಮಕ್ಕಳಿಗೆ ಸಂಸ್ಕಾರ ನೀಡುವುದು ಮತ್ತು ಹಿಂದೂ ಧರ್ಮಶಿಕ್ಷಣ ನೀಡಲು ವ್ಯವಸ್ಥೆ ಮಾಡಬೇಕು,
ಧಾರ್ಮಿಕ ದತ್ತಿ ಇಲಾಖೆ ಅಡಿಯಲ್ಲಿ ಬರುವ ಎಲ್ಲಾ ತೀರ್ಥಕ್ಷೇತ್ರಗಳು, ಮಂದಿರಗಳು, ಶ್ರೀಕ್ಷೇತ್ರ, ಕೋಟೆಗಳಲ್ಲಿನ ದೇವಸ್ಥಾನಗಳ ಜಮೀನಿನ ಮೇಲೆ ಖಾಸಗಿಯವರ ಅತಿಕ್ರಮಣ, ಅನ್ಯಮತೀಯರ ಅತಿಕ್ರಮಣಗಳನ್ನು ಸಮೀಕ್ಷೆ ಮಾಡಿ ತಕ್ಷಣ ಆ ಅತಿಕ್ರಮಣಗಳನ್ನು ತೆರವುಗೊಳಿಸಬೇಕು. ಈ ವಿಷಯದಲ್ಲಿ ನಡೆಯುತ್ತಿರುವ ನ್ಯಾಯಾಂಗ ಖಟ್ಲೆಗಳಿಗಾಗಿ ತ್ವರಿತಗತಿ (Fastrack Coart) ನ್ಯಾಯಾಲಯಗಳನ್ನು ನಿರ್ಮಾಣ ಮಾಡಬೇಕು. ದೇವಸ್ಥಾನಗಳ ಪರಿಸರದಲ್ಲಿ ಹಾಗೂ ತೀರ್ಥಕ್ಷೇತ್ರದ ಸ್ಥಳಗಳ ಪಾವಿತ್ರ್ಯ ರಕ್ಷಣೆಗಾಗಿ ಮದ್ಯ ಹಾಗೂ ಮಾಂಸ ನಿಷೇಧ ಮಾಡಬೇಕೆಂದು ರಾಜ್ಯ ಸರಕಾರ ಹೊರಡಿಸಿರುವ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು, ಮಾನ್ಯ ಸರ್ವೋಚ್ಚ ನ್ಯಾಯಾಲಯವು ಯಾವುದೇ ಖಾಸಗಿ ದೇವಸ್ಥಾನಗಳನ್ನು ಸರಕಾರ ವಶಪಡಿಸಿಕೊಂಡಿದ್ದರೆ, ಅದರ ಸಮಸ್ಯೆ ಮತ್ತು ಕಟ್ಲೆಗಳನ್ನು ಬಗೆಹರಿಸಿ, 6 ತಿಂಗಳ ಒಳಗೆ ವಾಪಾಸು ಅದರ ಮೂಲ ವಾರಸುದಾರರಿಗೆ ನೀಡಬೇಕೆಂದು ಆದೇಶ ನೀಡಿದೆ.
ಈ ಆದೇಶದ ಅನ್ವಯ ಕರ್ನಾಟಕದ ಕೆಲವು ಖಾಸಗಿ ದೇವಸ್ಥಾನಗಳ ವಿಷಯದಲ್ಲಿ ಸರಕಾರವು ವಶಪಡಿಸಿಕೊಂಡು ಹಲವು ವರ್ಷಗಳು ಸಂದಿದೆ. ಈ ಮಂದಿರಗಳು ಧಾರ್ಮಿಕ ದತ್ತಿ ಇಲಾಖೆಯ ಸುಪರ್ದಿಯಲ್ಲಿದ್ದು, ಈ ಸಮಸ್ಯೆಗೆ ಕೂಡಲೇ ಪರಿಹಾರ ಮಾಡಬೇಕು, ಧಾರ್ಮಿಕ ದತ್ತಿ ಇಲಾಖೆಯ ಕನಿಷ್ಠಪಕ್ಷ ಸಿ ಗ್ರೇಡ್ ದೇವಸ್ಥಾನಗಳನ್ನಾದರೂ ಖಾಸಗಿ ಸಹಭಾಗಿತ್ವದಲ್ಲಿ ಅಬಿವೃದ್ದಿ ಮಾಡಲು ಇರುವ ಕಾನೂನು ಸಮಸ್ಯೆಗಳನ್ನು ಬಗೆಹರಿಸಬೇಕು ಮತ್ತು ದೇವಸ್ಥಾನಗಳ ಅಬಿವೃದ್ಧಿಗೆ ಸಹಕಾರ ನೀಡಬೇಕು, ದೇವಸ್ಥಾನಗಳಲ್ಲಿ ಭಕ್ತರು ಶ್ರದ್ಧೆಯಿಂದ ಅರ್ಪಣೆ ಮಾಡಿದ ನಿಧಿಯನ್ನು ಅನ್ಯ ಅಬಿವೃದ್ಧಿ ಕಾರ್ಯಕ್ಕಾಗಿ ಉಪಯೋಗಿಸದೇ ದೇವಸ್ಥಾನಗಳ ಅಬಿವೃದ್ಧಿ, ಜೀರ್ಣೊದ್ಧಾರಕ್ಕಾಗಿ ಮಾತ್ರ ಉಪಯೋಗಿಸಬೇಕುಎಂದು ಒತ್ತಾಯಿಸಿದರು. ಮಹಾಸಂಘದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮಾನ್ಯ ಸಚಿವರು,
ರಾಜ್ಯ ಸರಕಾರದಿಂದ ದೇವಸ್ಥಾನಗಳ ಅಬಿವೃದ್ಧಿಗಾಗಿ ಈಗಾಗಲೇ ಈ ನಿಯಮಗಳನ್ನು ಅಳವಡಿಸುತ್ತಿದ್ದು, ಉಳಿದ ನಿರ್ಣಯಗಳನ್ನು ಹಂತ ಹಂತವಾಗಿ ತೆಗೆದುಕೊಳ್ಳುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಮನವಿಯಲ್ಲಿ `ರಾಜ್ಯದ ಅನೇಕ ಸ್ಥಳಗಳಲ್ಲಿ ನೂರಾರು ವರ್ಷಗಳಿಂದ ಭಕ್ತರು ಪೂಜಿಸುತ್ತಿರುವ ಅನೇಕ ಪ್ರಾಚೀನ ದೇವಸ್ಥಾನ, ವನದೇವತೆಗಳನ್ನು ಇತ್ತೀಚೆಗೆ ಅರಣ್ಯ ಇಲಾಖೆ ಮೀಸಲು ಅರಣ್ಯದ ನೆಪದಲ್ಲಿ, ನಿತ್ಯ ಪೂಜೆ, ಮಂದಿರಗಳಲ್ಲಿ ಉತ್ಸವಗಳ ಆಚರಣೆ, ದೇವಸ್ಥಾಗಳ ಅಭಿವೃದ್ದಿಗೆ ಅಡ್ಡಿ ಮಾಡುತ್ತಿದ್ದು, ಇದಕ್ಕೆ ಇರುವ ಕಾನೂನು ಅಡಚಣೆಗಳನ್ನು ದೂರ ಮಾಡಬೇಕು ಮತ್ತು ಅಲ್ಲಿ ನಿತ್ಯಪೂಜೆಗೆ ವ್ಯವಸ್ಥೆ ಮಾಡಬೇಕು, ದೇವಸ್ಥಾನಗಳನ್ನು ಶಂಕರಾಚಾರ್ಯರು ಮತ್ತು ಹಿಂದೂ ಧರ್ಮಾಚಾರ್ಯರು ನೇತ್ವತ್ವದಲ್ಲಿ ನಿರ್ವಹಣೆ ಮಾಡುವ ಸನಾತನ ಹಿಂದೂ ಬೋರ್ಡ ಸ್ಥಾಪನೆಗೆ ಸಹಕರಿಸಬೇಕು, ಧಾರ್ಮಿಕ ದತ್ತಿ ಇಲಾಖೆಯ ಮಂದಿರಗಳ ವ್ಯವಸ್ಥಾಪನಾ ಸಮಿತಿಯಲ್ಲಿ ಬಹಳಷ್ಟು ಕಡೆಗಳಲ್ಲಿ ರಾಜಕೀಯ ಹಿನ್ನಲೆಯುಳ್ಳ ವ್ಯಕ್ತಿಗಳ ಆಯ್ಕೆಯಾಗುತ್ತಿದ್ದು, ಅರ್ಚಕರ ಮತ್ತು ವ್ಯವಸ್ಥಾಪನೆ ಸಮಿತಿಯ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಹಾಗಾಗಿ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗೆ ಕಳಕಳಿಯುಳ್ಳ ಸಚ್ಚಾರಿತ್ರ, ಸಜ್ಜನ ಧಾರ್ಮಿಕ ವ್ಯಕ್ತಿಗಳನ್ನು ಮಾತ್ರ ಆಯ್ಕೆ ಮಾಡಬೇಕು, ದೇವಸ್ಥಾನಗಳ ಪಾವಿತ್ರ್ಯವನ್ನು ಕಾಪಾಡಲು ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಬೇಕೆಂಬ ಬೇಡಿಕೆಗಳು ಒಳಗೊಂಡಿದೆ.