ಮೂಡುಬಿದಿರೆ:(ಜ.22) ನಿರ್ವಾಹಕನೊಬ್ಬ ಬಸ್ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿಯ ಮಹಿಳೆಗೆ ಕಪಾಳ ಮೋಕ್ಷ ಮಾಡಿರುವ ಘಟನೆ ನಡೆದಿದ್ದು, ನಿರ್ವಾಹಕನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಬೆಳ್ತಂಗಡಿ: ಜ.24 ರಿಂದ ಫೆಬ್ರವರಿ. 2 ರವರೆಗೆ ಕಾಜೂರು ಮಖಾಂ ಉರೂಸ್
ಬಂಧಿತ ಆರೋಪಿ ಶಾಲೋಮ್ ಬಸ್ ನ ನಿರ್ವಾಹಕ ಪ್ರಶಾಂತ್ ಪೂಜಾರಿ ಎಂದು ತಿಳಿದು ಬಂದಿದೆ.
ಪುತ್ತಿಗೆಯಲ್ಲಿರುವ ಆಳ್ವಾಸ್ ಹಾಸ್ಟೆಲ್ ಗೆ ಮುಚ್ಚೂರಿನಿಂದ ಸುಮಾರು 15 ಮಂದಿ ಮಹಿಳೆಯರು ಶಾಲೋಮ್ ಬಸ್ ನಲ್ಲಿ ನಿತ್ಯ ಕೆಲಸಕ್ಕೆಂದು ಪ್ರಯಾಣಿಸುತ್ತಿದ್ದರು. ತಮ್ಮ ಕೆಲಸ ಬೇಗ ಮುಗಿದರೆ ಮನೆಗೆ ಬೇರೊಂದು ಬಸ್ಸಿನಲ್ಲಿ ತೆರಳುತ್ತಿದ್ದರು.
ಈ ಕುರಿತಂತೆ ನಿರ್ವಾಹಕನು ಪ್ರತೀ ದಿನ ಇದೇ ಬಸ್ಸಿನಲ್ಲಿ ಬರದಿದ್ದರೆ ರಿಯಾಯಿತಿ ದರದಲ್ಲಿ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಕ್ಯಾತೆ ತೆಗೆದಿದ್ದು, ಇದಕ್ಕೆ ಮಹಿಳಾ ಪ್ರಯಾಣಿಕರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದರು. ಮಹಿಳೆಯ ಆಕ್ಷೇಪವನ್ನು ವಿರೋಧಿಸಿ ಮಹಿಳೆ ಜತೆ ವಾಗ್ವಾದ ನಡೆಸಿದ್ದ ನಿರ್ವಾಹಕ ಆಕೆಗೆ ಕಪಾಳ ಮೋಕ್ಷ ಮಾಡಿದ್ದ ಎಂದು ಆರೋಪಿಸಿ ದೂರು ನೀಡಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬುಧವಾರ ಬಂಧಿಸಲಾಗಿದ್ದು, ಇದೀಗ ಆತನ ವಿರುದ್ಧ ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.