ಉಜಿರೆ,(ಜ. 22): ಪ್ರಸ್ತುತ ಯುವಜನತೆ ಹಣಕಾಸಿನ ವಿಚಾರದಲ್ಲಿ ಶಿಸ್ತು ಕಾಯ್ದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ಬೆಳ್ತಂಗಡಿ ಯೂನಿಯನ್ ಬ್ಯಾಂಕ್ ಸೀನಿಯರ್ ಬ್ರಾಂಚ್ ಮ್ಯಾನೇಜರ್ ಎಸ್. ನಾಗರಾಜು ಅಭಿಪ್ರಾಯಪಟ್ಟರು.
ಇದನ್ನೂ ಓದಿ: Puttur: ಮಗ್ಗಿ ಹೇಳುವಾಗ ತಪ್ಪಿತ್ತೆಂದು ನಾಗರಬೆತ್ತದಿಂದ ವಿದ್ಯಾರ್ಥಿಗೆ ಹೊಡೆದ ಶಿಕ್ಷಕ
ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ಇಂದು (ಜ. 22) ವ್ಯವಹಾರ ಆಡಳಿತ (ಬಿಬಿಎ) ವಿಭಾಗವು ಆಯೋಜಿಸಿದ್ದ ‘ಏಕತ್ವಮ್’ ಅಂತರ್ ತರಗತಿ ಫೆಸ್ಟ್ ಉದ್ಘಾಟಿಸಿ, ‘ಬಿಸ್ನೆಸ್ ಇನ್ಸೈಟ್ಸ್’ Business Insights ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
“ಈಗಿನ ಯುವಜನರು ಮನೋರಂಜನೆಯ ಉದ್ದೇಶಕ್ಕಾಗಿ ಹಣವನ್ನು ಹೇರಳವಾಗಿ ಖರ್ಚು ಮಾಡುತ್ತಿದ್ದಾರೆ. ಆದರೆ ಹಣಕಾಸು ವಿಚಾರದಲ್ಲಿ ಶಿಸ್ತು ಕಾಪಾಡುವುದು ವಾಸ್ತವ ಜಗತ್ತಿನಲ್ಲಿ ಅತ್ಯಂತ ಮುಖ್ಯವಾಗಿದೆ. ಹಣವನ್ನು ದುಂದುವೆಚ್ಚ ಮಾಡದೆ ಹೂಡಿಕೆಯತ್ತ ಗಮನಹರಿಸುವುದು ಅಗತ್ಯ” ಎಂದರು.
ಹೂಡಿಕೆಗೂ ಮುನ್ನ ಮುಖ್ಯವಾಗಿ ನಿರ್ದಿಷ್ಟ ಗುರಿ ಇಟ್ಟುಕೊಳ್ಳಬೇಕು. ಬಳಿಕ ಸ್ಟಾಕ್ ಮಾರ್ಕೆಟ್, ಮ್ಯೂಚುವಲ್ ಫಂಡ್ಸ್ ಕುರಿತು ಅರಿತುಕೊಳ್ಳಬೇಕು. ಕಂಪೆನಿ, ಮಾರುಕಟ್ಟೆ ವ್ಯವಸ್ಥೆಗಳನ್ನು ಅರ್ಥೈಸಿಕೊಂಡು, ಹಣಕಾಸು ಹೂಡಿಕೆ ಕುರಿತು ಒಂದಿಷ್ಟು ಅನುಭವಗಳನ್ನು ಪಡೆದ ಬಳಿಕ ದೊಡ್ಡ ಹೆಜ್ಜೆ ಇಡಬೇಕು ಎಂದು ಅವರು ತಿಳಿಸಿದರು.
ರಿಸ್ಕ್ ತೆಗೆದುಕೊಳ್ಳಲು ಧೈರ್ಯವನ್ನು ಹೊಂದಿರಬೇಕಾಗುತ್ತದೆ. ಯಶಸ್ಸನ್ನು ಪಡೆದ ಬಳಿಕ, ತಂದೆ ತಾಯಿ, ಕಲಿಸಿದ ಗುರುಗಳನ್ನು ಎಂದೂ ಮರೆಯಬಾರದು ಎಂದು ಕಿವಿಮಾತು ಹೇಳಿದರು. ವಿದ್ಯಾರ್ಥಿಗಳು ಹೊರತಂದ ‘ಬಿಸ್ನೆಸ್ ಇನ್ಸೈಟ್ಸ್’ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ, “ನಮ್ಮ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳನ್ನು ಶಿಕ್ಷಣವಂತರಾಗಿ ಮಾಡುವುದರ ಜೊತೆಗೆ ಮಾನವೀಯ ಗುಣಗಳುಳ್ಳ ಹೃದಯವಂತರನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ. ಇಂತಹ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳ ಕಾರ್ಯಕ್ಷಮತೆ, ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲು ಪ್ರೋತ್ಸಾಹ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಈ ಅವಕಾಶಗಳನ್ನು ಇನ್ನಷ್ಟು ಬಳಸಿಕೊಳ್ಳಬೇಕು” ಎಂದರು.
ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ರತ್ನಾವತಿ ಕೆ., ಎಸ್ ಡಿ ಎಂ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಬೇಬಿ, ತೃತೀಯ ಬಿಬಿಎ ವಿದ್ಯಾರ್ಥಿ ಪ್ರತಿನಿಧಿ ಸಂಜನಾ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕ, ಬಿಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕ ಶರಶ್ಚಂದ್ರ ಕೆ. ಎಸ್. ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮ ಸಂಯೋಜಕಿ, ಬಿಬಿಎ ವಿಭಾಗ ಮುಖ್ಯಸ್ಥೆ ಹಾಗೂ ವಾಣಿಜ್ಯ ನಿಕಾಯದ ಡೀನ್ ಶಕುಂತಲಾ ಸ್ವಾಗತಿಸಿದರು. ತೃತೀಯ ಬಿಬಿಎ ವಿದ್ಯಾರ್ಥಿನಿಯರಾದ ದೀಕ್ಷಿತಾ ಹಾಗೂ ದೀಪ್ತಿ ಆಚಾರ್ಯ ಪಿ. ನಿರೂಪಿಸಿ, ಸಂಜನಾ ವಂದಿಸಿದರು.