ಬಂಟ್ವಾಳ:(ಜ.23) ಚಾಲಕನಿಗೆ ಹಲ್ಲೆ ನಡೆಸಿ ಸಾಕಷ್ಟು ವಿವಾದ ಉಂಟು ಮಾಡಿದ ಘಟನೆ ನಡೆದು ಎರಡು ದಿನಗಳ ನಂತರ ಮತ್ತೆ ಬ್ರಹ್ಮರಕೋಟ್ಲು ಅವೈಜ್ಞಾನಿಕ ಟೋಲ್ ಗೇಟ್ ನಲ್ಲಿ ಮತ್ತೊಂದು ವಿವಾದಾತ್ಮಕ ಘಟನೆ ನಡೆದಿದೆ.
ಇದನ್ನೂ ಓದಿ: ವಿಟ್ಲ: ಪಂಚಲಿಂಗೇಶ್ವರನನ್ನು ನೆಮ್ಮದಿಯಾಗಿ ರಥದಲ್ಲಿ ಕೂರೋಕೆ ಬಿಡದ ವಿಟ್ಲದ ಡ್ರೋನ್ ಶೂರರು
ಬಂಟ್ವಾಳ ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬ್ರಹ್ಮರಕೋಟ್ಲು ಟೋಲ್ ಗೇಟ್ ನಲ್ಲಿ ಕಾರು ಚಾಲಕ ಹಾಗೂ ಟೋಲ್ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾದ ವಿಡಿಯೋ ಒಂದು ಸಾಮಾಜಿಕ ಜಾಲತಾಣದ ಮೂಲಕ ಹರಡಿದೆ.
ಮಂಗಳೂರು ಕಡೆಯಿಂದ ಬಿಸಿರೋಡಿನ ಕಡೆಗೆ ಬರುತ್ತಿದ್ದ ಬಂಟ್ವಾಳ ದಾಖಲೆಯನ್ನು ಹೊಂದಿರುವ ಕಾರು ಚಾಲಕ ಟೋಲ್ ಶುಲ್ಕ ವನ್ನು ನೀಡದೆ ಇದ್ದು ಮಾತಿಗೆ ಮಾತು ಬೆಳೆದಿದೆ.
ಕಾರು ಬಂಟ್ವಾಳ ಮೂಲವಾಗಿದ್ದ ಕಾರಣ ಟೋಲ್ ನಲ್ಲಿ ಶುಲ್ಕ ನೀಡದೆ ಉಚಿತವಾಗಿ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಮಾತು ತಗೆದಿದ್ದು ಟೋಲ್ ಸಿಬ್ಬಂದಿಗಳ ಜೊತೆ ವಾದಕ್ಕಿಳಿದ್ದಿದ್ದ.
ಸ್ಥಳೀಯ ವಾಹನಗಳಿಗೆ ಟೋಲ್ ಶುಲ್ಕ ನೀಡದೆ ಚಲಿಸುವ ಅವಕಾಶಕ್ಕಾಗಿ ಪ್ರತ್ಯೇಕ ನಿಯಮಗಳಿಲ್ಲ. ಟೋಲ್ ನಲ್ಲಿ ಸಂಚರಿಸುವ ಪ್ರತಿಯೊಂದು ವಾಹನಕ್ಕೂ ಟೋಲ್ ಶುಲ್ಕ ವಿಧಿಸಲಾಗುತ್ತದೆ. ಟೋಲ್ ನೀಡದೆ ಹೋಗುವುದಕ್ಕೆ ಇಲ್ಲಿ ಸರ್ವೀಸ್ ರೋಡ್ ಪ್ರತ್ಯೇಕ ವಾಗಿದ್ದು ಅದರಲ್ಲಿ ಹೋಗುವಂತೆ ಟೋಲ್ ಸಿಬ್ಬಂದಿಗಳು ತಿಳಿಸಿದ್ದಾರೆ.
ಆದರೆ ಕಾರು ಚಾಲಕ ಇದನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರದೆ, ವಾದಕ್ಕೆ ಇಳಿದಿದ್ದ. ಈ ಸಂದರ್ಭದಲ್ಲಿ ಟೋಲ್ ಗೇಟ್ ನಲ್ಲಿ ವಾಹನಗಳ ಸಾಲು ಹೆದ್ದಾರಿಯಲ್ಲಿ ಸುಮಾರು ದೂರಕ್ಕೆ ಕ್ರಮಿಸಿತ್ತು.
ವಾಹನವನ್ನು ಬದಿಗಿಟ್ಟು ಚರ್ಚೆ ನಡೆಸುವಂತೆ ಹಿಂಬದಿಯ ವಾಹನಗಳ ಚಾಲಕರು ಭಿನ್ನವಿಸಿಕೊಂಡರು ಅವರು ಕೇಳಿಸಿಕೊಳ್ಳದೆ, ಮಾತಿನ ಚಕಮಕಿ ಜೋರಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಹಂತಕ್ಕೆ ತಲುಪಿದಾಗ ಹಿಂಬದಿಯಲ್ಲಿ ಕ್ಯೂನಲ್ಲಿ ನಿಂತು ಕಾದು ಕಾದು ಸುಸ್ತಾಗಿದ್ದ ವಾಹನದ ಚಾಲಕನೋರ್ವ ಈತನ ಶುಲ್ಕ ವನ್ನು ನೀಡಿ ಕಾರು ಚಾಲಕನ ವಿವಾದಕ್ಕೆ ತೆರೆ ಎಳೆದಿದ್ದಾರೆ.
ದಿನೇ ದಿನೇ ಈ ಟೋಲ್ ನಲ್ಲಿ ಇಂತಹ ವಿವಾದಗಳು ಅಶಾಂತಿ ಗೆ ಕಾರಣವಾಗುತ್ತಿದ್ದು, ಸಭ್ಯ ವಾಹನ ಸವಾರರಿಗೆ ತೊಂದರೆ ಆಗುತ್ತಿದೆ.ಎರಡು ದಿನಗಳ ಹಿಂದೆಯಷ್ಟೇ ನಡೆದ ಹಲ್ಲೆ ಪ್ರಕರಣಕ್ಕೆ ವಾಹನ ಚಾಲಕರ ಸಂಘ ಟೋಲ್ ವಿರುದ್ದ ಪ್ರತಿಭಟನೆ ನಡೆಸಲು ಮುಂದಾಗಿದ್ದು ಕೊನೆ ಕ್ಷಣದಲ್ಲಿ ಕೈ ಬಿಡಲಾಗಿತ್ತು .ಇದೀಗ ಮತ್ತೊಂದು ವಿವಾದ ಉಂಟಾಗಿದ್ದು ಪೊಲೀಸರಿಗೆ ತಲೆನೋವಾಗಿದ್ದು, ಮತ್ತೆ ಏನು ನಡೆಯುತ್ತದೋ ಕಾದು ನೋಡಬೇಕಾಗಿದೆ