ಮಂಗಳೂರು:(ಜ.23) ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಸಮೀಪದ ಯುನಿಸೆಕ್ಸ್ ಮಸಾಜ್ ಸೆಂಟರ್ ಮೇಲೆ ದಾಳಿ ನಡೆಸಿದ ಘಟನೆ ವರದಿಯಾಗಿದೆ. ಕಲರ್ಸ್ ಹೆಸರಿನ ಮಸಾಜ್ ಸೆಂಟರ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಅನ್ನುವ ಆರೋಪದಲ್ಲಿ ದಾಳಿ ನಡೆಸಲಾಗಿದೆ ಎನ್ನಲಾಗಿದೆ.
ಪ್ರಸಾದ್ ಅತ್ತಾವರ ನೇತೃತ್ವದ ಶ್ರೀರಾಮ ಸೇನಾ ಸಂಘಟನೆಯ ಕಾರ್ಯಕರ್ತರು ಎನ್ನಲಾದವರು ಬಿಜೈ ಕೆಎಸ್ಆರ್ಟಿಸಿ ಬಳಿಯ ಕಲರ್ಸ್ ಮಸಾಜ್ ಸೆಂಟರ್ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.
ರಾಮ ಸೇನೆಯ ಕಾರ್ಯಕರ್ತರು ಎನ್ನಲಾದವರು ಸೆಂಟರ್‌ಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದು, ಕಿಟಕಿಗಳ ಗಾಜುಗಳನ್ನು ಪುಡಿಗೈದಿದ್ದಾರೆ.
ಅಲ್ಲದೇ ಮಸಾಜ್ ಪಾರ್ಲರ್‌ನಲ್ಲಿ ಇದ್ದ ಯುವತಿಯರ ಮೇಲೆಯೂ ಹಲ್ಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ರಾಮಸೇನೆ ಸಂಸ್ಥಾಪಕ ಪ್ರಸಾದ್ ಅತ್ತಾವರ ಪ್ರತಿಕ್ರಿಯಿಸಿದ್ದು, ನಮ್ಮ ರಾಮಸೇನೆ ಸಂಘಟನೆ ಕಾರ್ಯಕರ್ತರು ದಾಳಿ ಮಾಡಿದ್ದಾರೆ. ‘ಮಸಾಜ್ ಸೆಂಟರ್ನಲ್ಲಿ ಡ್ರಗ್ಸ್ ನೀಡಿ ವೇಶ್ಯಾವಾಟಿಕೆ ನಡೆಸುತ್ತಿದ್ದರು’ 16, 17 ವರ್ಷದ ಹೆಣ್ಣುಮಕ್ಕಳನ್ನು ಬಳಸಿಕೊಳ್ತಿದ್ದರೆಂದು ಆರೋಪ ಮಾಡಿದ್ದಾರೆ. ನಮ್ಮ ಕಾರ್ಯಕರ್ತನ ಸಂಬಂಧಿ ಯುವತಿ ಇದರಲ್ಲಿ ಸಿಲುಕಿದ್ದಾಳೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದೇವೆ ಎಂದರು.
ಮಂಗಳೂರಿನಲ್ಲಿ ಸುಮಾರು 25 ಮಸಾಜ್ ಪಾರ್ಲರ್ಗಳಿವೆ. ಖಚಿತ ಮಾಹಿತಿ ಮೇರೆಗೆ ಅದೆಲ್ಲವನ್ನೂ ಬಿಟ್ಟು ಈ ಮಸಾಜ್ ಪಾರ್ಲರ್ ಮೇಲೆ ರಾಮಸೇನೆ ಸಂಘಟನೆ ದಾಳಿ ನಡೆಸಿದೆ. ಮಸಾಜ್ ಪಾರ್ಲರ್ಗೆ ಅನುಮತಿ ಇತ್ತೋ ಇಲ್ಲವೋ ನಮಗೆ ಗೊತ್ತಿಲ್ಲ. ಹೆಣ್ಣುಮಕ್ಕಳ ರಕ್ಷಣೆ ಉದ್ದೇಶದಿಂದ ನಾವು ದಾಳಿ ನಡೆಸಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.