ಸುಳ್ಯ:(ಜ.23) ಬೆಂಗಳೂರಿನಲ್ಲಿ ಕೆಲಸಕ್ಕಿದ್ದ ಯುವಕನೊಬ್ಬ ರಜೆಯಲ್ಲಿ ಮನೆಗೆ ಬಂದು ಮತ್ತೆ ಬೆಂಗಳೂರಿಗೆ ತೆರಳಿ ನಾಪತ್ತೆಯಾಗಿರುವ ಬಗ್ಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಳ್ಯದ ಕುರುಂಜಿಗುಡ್ಡೆ ಸುಂದರ ನಾಯ್ಕ ಅವರ ಪುತ್ರ ಗಣೇಶ (40) ನಾಪತ್ತೆಯಾಗಿರುವ ಯುವಕ.
ಇದನ್ನೂ ಓದಿ: ಕಾರ್ಕಳ: ನಿಂತಿದ್ದ ಲಾರಿಗೆ ಬಸ್ ಡಿಕ್ಕಿ
ಗಣೇಶ ನಾಲ್ಕು ವರ್ಷಗಳಿಂದ ಬೆಂಗಳೂರಿನಲ್ಲಿ ರಂಜಿತ್ ಅವರೊಂದಿಗೆ ಎಲೆಕ್ಟ್ರಿಷಿಯನ್ ಕೆಲಸ ಮಾಡಿಕೊಂಡಿದ್ದು, 2024ರ ಡಿ. 28ರಂದು ರಜೆ ಪಡೆದು ಕುರುಂಜಿಗುಡ್ಡೆಯ ತನ್ನ ಮನೆಗೆ ಬಂದಿದ್ದು, ರಜೆ ಮುಗಿಸಿ ಜ. 19ರಂದು ಬೆಂಗಳೂರಿಗೆ ತೆರಳಲು ಮನೆಯಿಂದ ಹೊರಟು ಸುಳ್ಯ ಬಸ್ ನಿಲ್ದಾಣದಿಂದ ಬಸ್ಸು ಹತ್ತಿ ಹೊರಟು ಬೆಂಗಳೂರಿಗೆ ತೆರಳುತ್ತಿರುವುದಾಗಿ ತಿಳಿಸಿದ್ದಾರೆ.
ಬಳಿಕ ಗಣೇಶ್ ಅವರು ಬೆಂಗಳೂರಿಗೆ ತಲುಪಿದ ಬಗ್ಗೆ ಖಚಿತಪಡಿಸಲು ಫೋನ್ ಮಾಡಿದಾಗ ಮೊಬೈಲ್ ನಂಬರ್ ಸ್ವಿಚ್ಡ್ ಆಫ್ ಆಗಿದ್ದು, ಮಾಲಕ ರಂಜಿತ್ ಅವರಲ್ಲಿ ವಿಚಾರಿಸಿದಾಗ ಅಲ್ಲಿಗೆ ತಲುಪಿರುವುದಿಲ್ಲ ಎಂದು ತಿಳಿಸಿದ್ದಾರೆ ಎಂದು ಗಣೇಶ್ ಅವರ ತಂದೆ ಸುಳ್ಯ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.