Fri. Jan 24th, 2025

Belthangady: ನಾವೂರು ಶಾಲೆಯ ನೂತನ ಶೌಚಾಲಯದ ಕಟ್ಟಡಕ್ಕೆ ಚಾಲನೆ – ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ಕ್ಯಾನ್ ಫಿನ್ ಹೋಮ್ಸ್ ಮುಂದಾಳತ್ವದಲ್ಲಿ ಸುಸಜ್ಜಿತ ಶೌಚಾಲಯದ ನಿರ್ಮಾಣ – 12 ಲಕ್ಷಕ್ಕೂ ಅಧಿಕ ಮೊತ್ತದಲ್ಲಿ ಶಾಲಾ ಶೌಚಾಲಯ ನಿರ್ಮಾಣ

ಬೆಳ್ತಂಗಡಿ :(ಜ.24) ಬೆಳ್ತಂಗಡಿಯ ರೋಟರಿ ಸಂಸ್ಥೆ ಮತ್ತು ಬೆಂಗಳೂರಿನ ಕ್ಯಾನ್ ಫಿನ್ ಹೋಮ್ಸ್ ಪ್ರೈವೇಟ್ ಲಿಮಿಟೆಡ್ ಇವರ ಸಹಯೋಗದಲ್ಲಿ ನಾವೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಿಸಲಾದ ಶಾಲಾ ಶೌಚಾಲಯದ ಕಟ್ಟಡವನ್ನು ಉದ್ಘಾಟಿಸಲಾಯಿತು.

ಇದನ್ನೂ ಓದಿ: ಉಜಿರೆ: ಗಣರಾಜ್ಯೋತ್ಸವ ಪರೇಡ್

ಕ್ಯಾನ್ ಫಿನ್ ಹೋಮ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಉಪ ಪ್ರಧಾನ ವ್ಯವಸ್ಥಾಪಕ ಪ್ರಶಾಂತ್ ಜೋಶಿ , ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ ಮತ್ತು ನಾವೂರ ಶಾಲೆಯ ಆಡಳಿತ ಮಂಡಳಿ ಸಮ್ಮುಖದಲ್ಲಿ ಕ್ಯಾನ್ ಫಿನ್ ಸಂಸ್ಥೆಯ ಸಿ ಎಸ್ ಆರ್ ನ 12 ಲಕ್ಷಕ್ಕೂ ಅಧಿಕ ಮೊತ್ತದಲ್ಲಿ ನೂತನವಾಗಿ ನಿರ್ಮಿಸಲಾದ ಶಾಲಾ ಶೌಚಾಲಯಕ್ಕೆ ಅಧಿಕೃತ ಚಾಲನೆ ನೀಡಿದರು.

ಬೆಳ್ತಂಗಡಿಯ ರೋಟರಿ ಸಂಸ್ಥೆಯು ಕಳೆದ ಅನೇಕ ವರ್ಷಗಳಿಂದ ಸಮಾಜಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ವಿಶೇಷವಾಗಿ ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿರುವ ರೋಟರಿ ಸಂಸ್ಥೆಯು ಈಗಾಗಲೇ ಸರ್ಕಾರಿ ಶಾಲಕಾಲೇಜುಗಳ ದುರಸ್ತಿ ಕಾರ್ಯ, ಶೌಚಾಲಯ ಮತ್ತು ಶಾಲಾ ಕೊಠಡಿಗಳ ನಿರ್ಮಾಣ, ಅಗತ್ಯವಿರುವ ಮತ್ತು ಅರ್ಹರಿಗೆ ಸ್ಕಾಲರ್ಶಿಪ್ ವಿತರಣೆ, ಸರ್ಕಾರಿ ಆಸ್ಪತ್ರೆಗಳ ದುರಸ್ಥಿ ಕಾರ್ಯ ಮತ್ತು ಉಪಕರಣಗಳ ಕೊಡುಗೆ ಹೀಗೆ ಅನೇಕ ಕಾರ್ಯಗಳನ್ನು ಸರ್ವರ ಸಹಕಾರದೊಂದಿಗೆ ಮಾಡುತ್ತಾ ಬಂದಿದೆ. ಇದರ ಭಾಗವಾಗಿ ಈ ನೂತನ ಶೌಚಾಲಯದ ನಿರ್ಮಾಣವು ಒಂದು. ಇಂತಹ ಮೂಲಭೂತ ಸೌಕರ್ಯಗಳು ವಿದ್ಯಾರ್ಥಿಗಳಿಗೆ ಅತ್ಯಂತ ಅವಶ್ಯಕ. ಇದನ್ನು ಸುಸಜ್ಜಿತವಾಗಿ ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಶಾಲೆಯ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳ ಮೇಲಿರುತ್ತದೆ ಎಂದು ಬೆಳ್ತಂಗಡಿ ರೋಟರಿ ಕ್ಲಬ್ ನ ಅಧ್ಯಕ್ಷರಾದ ಪೂರನ್ ವರ್ಮ ಹೇಳಿದರು.

ಬಳಿಕ ಮಾತನಾಡಿದ ಜೋಶಿ, ವಿದ್ಯಾರ್ಥಿಗಳಿಗೆ ವ್ಯವಸ್ಥಿತವಾದ ಮೂಲ ಸೌಕರ್ಯಗಳನ್ನು ನೀಡುವ ಕಡೆಗೆ ಸಂಘ ಸಂಸ್ಥೆಗಳು ಮೊದಲ ಆದ್ಯತೆಯನ್ನು ನೀಡಬೇಕು. ಮೂಲ ಭೂತ ಸೌಕರ್ಯಗಳು ಸುಸಜ್ಜಿತವಾಗಿದ್ದಾಗ ಮಾತ್ರ ವಿದ್ಯಾರ್ಥಿಗಳಲ್ಲಿ ವಿಧ್ಯಾಭ್ಯಾಸದ ಒಲವು ಹೆಚ್ಚುತ್ತದೆ. ಜೊತೆಗೆ ಶಾಲಾ ಚಟುವಟಿಕೆಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಇಂತಹ ಅಭಿವೃದ್ಧಿದಾಯಕ ಬೆಳವಣಿಗೆಗಳಿಂದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ವೃದ್ಧಿಸುತ್ತದೆ. ಶಾಲೆಯ ಮೇಲೆ ಆಡಳಿತ ಮಂಡಳಿ ಸೇರಿದಂತೆ ಪೋಷಕರಿಗೂ ವಿಶ್ವಾಸ ಬಲವಾಗುತ್ತದೆ ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಬೆಳ್ತಂಗಡಿ ರೋಟರಿ ಸಂಸ್ಥೆಯ ಅಧ್ಯಕ್ಷ ಪೂರನ್ ವರ್ಮ, ಶಾಲೆಯ ವ್ಯವಸ್ಥೆಗಳನ್ನು ವಿದ್ಯಾರ್ಥಿಗಳು ತಮ್ಮ ಮನೆಯ ವ್ಯವಸ್ಥೆಗಳೆಂದು ಭಾವಿಸಬೇಕು. ಶಿಚಿತ್ವದಲ್ಲಿ ನಿಮ್ಮ ಆರೋಗ್ಯವಿದೆ. ವಿದ್ಯಾರ್ಥಿಗಳ ಮೇಲಿನ ಕಾಳಜಿಯಿಂದ ಕ್ಯಾನ್ ಫಿನ್ ಅಂತಹ ಸಂಸ್ಥೆ ನಮಗೆ ಸಹಕಾರ ನೀಡಿದೆ. ಇದನ್ನು ವಿದ್ಯಾರ್ಥಿಗಳು ಸುಸ್ಥಿರವಾಗಿ ಕಾಪಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕಿ ರೋಹಿಣಿ ಕೆ ಮಾತನಾಡಿ, 234 ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ಅನೇಕ ವರ್ಷಗಳಿಂದ ಶೌಚಾಲಯದ ಕೊರತೆ ವಿದ್ಯಾರ್ಥಿಗಳಿಗೆ ಕಾಡುತ್ತಿತ್ತು. ಶಾಲೆಯಲ್ಲಿ ಹಳೆಯ ಶೌಚಾಲಯದ ಕಟ್ಟಡವಿದ್ದರೂ ಅದು ಬಳಕೆಗೆ ಯೋಗ್ಯವಾಗಿರಲಿಲ್ಲ. ನವೀಕರಿಸಲು ಅಥವಾ ನೂತನ ಕಟ್ಟಡ ನಿರ್ಮಿಸಲು ಯಾವುದೇ ಅನುದಾನವೂ ಈವರೆಗೆ ದೊರೆತಿಲ್ಲ.ಈ ಸಲುವಾಗಿ ರೋಟರಿ ಸಂಸ್ಥೆಗೆ ಮನವಿ ಮಾಡಿದ ಬೆನ್ನಲ್ಲೇ, ಬೆಳ್ತಂಗಡಿ ರೋಟರಿ ಸಂಸ್ಥೆ ಯು ಕ್ಯಾನ್ ಫಿನ್ ಹೋಮ್ಸ್ ಬೆಂಗಳೂರಿನ ಸಹಕಾರದಲ್ಲಿ ಶಾಲೆಗೆ ಸುಸಜ್ಜಿತವಾದ ಶೌಚಾಲಯವನ್ನು ನಿರ್ಮಿಸಿ ಕೊಟ್ಟಿದೆ ಎಂದರು.

ಇದೇ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿ ವತಿಯಿಂದ ರೋಟರಿ ಕ್ಲಬ್ ಅಧ್ಯಕ್ಷ ರೋ.ಪೂರನ್ ವರ್ಮಾ ಮತ್ತು ನಿಕಟಪೂರ್ವ ಅಧ್ಯಕ್ಷ ರೋ‌. ಅನಂತ್ ಭಟ್ ಮಚ್ಚಿಮಲೆ ಇವರನ್ನು ಸನ್ಮಾನಿಸಲಾಯಿತು. ಗೌರವಾರ್ಪಣೆ ಕಾರ್ಯಕ್ರಮವನ್ನು ಡಾ.ಪ್ರದೀಪ್ ನಾವೂರ ನೆರವೇರಿಸಿದರು.ಈ ಸಂದರ್ಭದಲ್ಲಿ ಎಂ ಎಲ್ ಸಿ ರೋ. ಪ್ರತಾಪ್ ಸಿಂಹ ನಾಯಕ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳು, ಪೋಷಕರು, ಬೆಳ್ತಂಗಡಿ ರೋಟರಿ ಸಂಸ್ಥೆಯ ಕಾರ್ಯದರ್ಶಿ ರೋ. ಸಂದೇಶ್ ಕುಮಾರ್ ರಾವ್, ರೊ. ಅಬೂಬಕರ್, ರೋ. ವಿದ್ಯಾ ಕುಮಾರ್ ಕಾಂಚೋಡು, ರೋ.ಶ್ರವಣ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಶಾಲೆಯ‌ ಆಡಳಿತ ಸಲಹಗಾರ ಡಾ. ಪ್ರದೀಪ್ ನಿರೂಪಿಸಿ, ಶಿಕ್ಷಕಿ ಶುಭ ವಂದಿಸಿದರು.

ವ್ಯವಸ್ಥಿತ ಗಾರ್ಡನ್ ಮತ್ತು ವೆರಾಂಡಾ :

ನೂತನವಾಗಿ ನಿರ್ಮಾಣಗೊಂಡಿರುವ ಶೌಚಾಲವು ಅನೇಕ ಸುಸಜ್ಜಿತವಾದ ವ್ಯವಸ್ಥೆಗಳನ್ನು ಹೊಂದಿದೆ. ವಿಶೇಷವಾಗಿ ಶೌಚಾಲಯದ ಎದುರು ಹೂ ಗಿಡಗಳ ಗಾರ್ಡನ್ ಮಾಡಿದ್ದು, ಜೊತೆಗೆ ವಿದ್ಯಾರ್ಥಿಗಳ ನೂಕು ನುಗ್ಗಲನ್ನು ತಪ್ಪಿಸಲು ವಿಸ್ತಾರವಾದ ವೆರಾಂಡಾವನ್ನು ಮಾಡಲಾಗಿದೆ. ಶೌಚಾಲಯವು ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕವಾಗಿದ್ದು, ಎರಡು ವಿಭಾಗದಲ್ಲೂ ವಿಶೇಷ ಚೇತನರಿಗೆ ಅನುಕೂಲವಾಗುವಂತೆ ಒಂದೊಂದು ವೆಸ್ಟರ್ನ್ ಕಮೋಡೆಡ್ ಶೌಚಾಲಯವನ್ನೂ ನಿರ್ಮಿಸಲಾಗಿದೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು