ಬೆಳ್ತಂಗಡಿ (ಜ.27) ( ಯು ಪ್ಲಸ್ ಟಿವಿ): ಬೆಂಗಳೂರಿನ ವಿಕೆ ಸ್ಟುಡಿಯೋಸ್ ವತಿಯಿಂದ ಆಯೋಜನೆಗೊಂಡ ವಿಕೆ ಸ್ಟುಡಿಯೋಸ್ ಕನ್ನಡ ಕಿರುಚಿತ್ರೋತ್ಸವ 2025ರ ಬೆಸ್ಟ್ ಕಿರು ಚಿತ್ರ ಪ್ರಶಸ್ತಿಗೆ “ಕೊಳಂಬೆ” ಬದುಕು ಕಟ್ಟಿದ ಕಥೆ ಎಂಬ ಕಿರುಚಿತ್ರ ಭಾಜನವಾಗಿದೆ. ಜೊತೆಗೆ ಉತ್ತಮ ನಿರ್ದೇಶಕ ಪ್ರಶಸ್ತಿ ಕೊಳಂಬೆ ಕಿರು ಚಿತ್ರವನ್ನು ನಿರ್ದೇಶಿಸಿದ ಅನೀಶ್ ವೇಣೂರು ಅವರ ಪಾಲಾಗಿದೆ.
ಇದನ್ನೂ ಓದಿ: Monalisa : ಕುಂಭಮೇಳದ ಜೇನು ಕಣ್ಣ ಸುಂದರಿ ಮೊನಾಲಿಸಾಳ ಆರೋಗ್ಯ ಸ್ಥಿತಿ ಗಂಭೀರ !!!
ಈ ಮೂಲಕ ಕೊಳಂಬೆ ಕಿರುಚಿತ್ರಕ್ಕೆ ಡಬಲ್ ಧಮಾಕ ಸಿಕ್ಕಿದಂತೆ ಆಗಿದೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಳಂಬೆ ಚಿತ್ರ ತಂಡ ಈ ಪ್ರಶಸ್ತಿಯನ್ನು ಸ್ವೀಕರಿಸಿದೆ. ಕೆ. ಮೋಹನ್ ಕುಮಾರ್ ನೇತೃತ್ವದ ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡ ಕೊಳಂಬೆಯನ್ನು ಮರು ಸೃಷ್ಟಿಸಿದ್ದು ಹೇಗೆ ಎಂಬುವುದರ ಬಗೆಗಿನ ನೈಜ ಘಟನೆಯನ್ನಾಧರಿಸಿದ ಕಿರುಚಿತ್ರ ಇದಾಗಿದೆ.
ನೈಜ ಘಟನೆ ಆಧರಿಸಿದ ಸಿನಿಮಾ ಕೊಳಂಬೆ..!
2019ರ ಆಗಸ್ಟ್ 9 ತಾರೀಕು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಚಾರ್ಮಾಡಿ ಸಮೀಪದ ಕೊಳಂಬೆಯಲ್ಲಿ ಸಂಭವಿಸಿದ ಭೀಕರ ಪ್ರವಾಹದ ಕುರಿತಾದ ದುರಂತವನ್ನು ನೆನಪಿಸುವ ಮತ್ತು ಅಲ್ಲಿಯ ಜನತೆ ಮತ್ತೆ ಹೇಗೆ ಬದುಕು ಕಟ್ಟಿಕೊಂಡರು. ಯಾವ ರೀತಿ ಬದುಕು ಕಟ್ಟೋಣ ಬನ್ನಿ ಎನ್ನುವ ತಂಡ ಇವರ ಜೀವನವನ್ನು ಮತ್ತೆ ಕಟ್ಟಿ ಕೊಟ್ಟಿತು ಎಂಬುವುದರ ಕುರಿತಾದ ನೈಜ ಘಟನೆಯನ್ನಾಧರಿಸಿದ ಕಿರುಚಿತ್ರ ಇದಾಗಿದೆ.
ಬೋಧಿ ಮೀಡಿಯಾ ಪ್ರೊಡಕ್ಷನ್ ಸಹಕಾರದೊಂದಿಗೆ ಕೋಟ್ಯಾನ್ ಕ್ರಿಯೇಷನ್ಸ್ ಯೂಟ್ಯೂಬ್ ಚಾನೆಲ್ ಹಾಗೂ ಫೇಸ್ ಬುಕ್ ಪೇಜ್ ನಲ್ಲಿ ಬಿಡುಗಡೆಯಾಗಿ ಸಾರ್ವಜನಿಕರ ಪ್ರಶಂಸೆಗೂ ಪಾತ್ರವಾಗಿತ್ತು. ಕಾಮಿಡಿ ಕಿಲಾಡಿ ಖ್ಯಾತಿಯ ಮತ್ತು ದಸ್ಕತ್ ತುಳು ಚಲನ ಚಿತ್ರ ಖ್ಯಾತಿಯ ಅನೀಶ್ ಪೂಜಾರಿ ವೇಣೂರು ಅವರು ಇದನ್ನು ನಿರ್ದೇಶನ ಮಾಡುವುದರ ಜೊತೆಗೆ ಚಿತ್ರ ಕಥೆಯನ್ನು ಕೂಡ ಬರೆದಿದ್ದರು. ಚಿತ್ರಕ್ಕೆ ದೀಕ್ಷಿತ್ ಧರ್ಮಸ್ಥಳ ಅವರ ಛಾಯಾಗ್ರಹಣವಿದೆ ,ಗಣೇಶ್ ನೀರ್ಚಾಲ್ ಅವರ ಸಂಕಲನವಿದೆ, ಗಾಯಕಿ ಮಾನಸ ಹೊಳ್ಳ ಅವರ ಸಂಗೀತವಿದೆ. ತಂಡದಲ್ಲಿ ದಿನೇಶ್ ಕೋಟ್ಯಾನ್ , ಸಂತೋಷ ಆಚಾರ್ಯ ಗುಂಪಲಾಜೆ, ನಿತೀಶ್ ಶೆಟ್ಟಿ, ದೀಕ್ಷಿತ್ ಕೆ ಅಂಡಿಂಜೆ , ಮನೋಜ್ , ಆನಂದ್, ನೀರಜ್, ನಿತೀಶ್ ಬಾರ್ಯ, ಪ್ರಜ್ಞೇಶ್ ಶೆಟ್ಟಿ ಇದ್ದಾರೆ.
ರೆಡ್ ಇನ್ ಕಾರ್ನೇಷನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೂ ಆಯ್ಕೆಯಾಗಿತ್ತು…!
ಈ ಕಿರು ಚಿತ್ರವೂ ಪಶ್ಚಿಮ ಬಂಗಾಳದಲ್ಲಿ ನಡೆಯುವ ರೆಡ್ ಇನ್ ಕಾರ್ನೇಷನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ- 2025ಕ್ಕೆ ಆಯ್ಕೆಯಾಗಿತ್ತು.
ಕೊಳಂಬೆಯಲ್ಲಾದ ದುರಂತದ ವಿವರ..!
2019ರ ಆಗಸ್ಟ್. 9ನೇ ತಾರೀಕಿನಂದು ಬೆಳ್ತಂಗಡಿ ತಾಲೂಕಿನಲ್ಲಿ ಭೀಕರ ಮಳೆ ಸುರಿದಿತ್ತು. ಮೃತ್ಯುಂಜಯ ನದಿ ಉಕ್ಕಿ ಹರಿದಿತ್ತು. ಪರಿಣಾಮ ಚಾರ್ಮಾಡಿ ಸಮೀಪದ ಕೊಳಂಬೆ ಎಂಬ ಪುಟ್ಟ ಊರಿನ ಹಲವು ಮನೆಗಳಿಗೆ ನೀರು ನುಗ್ಗಿ ಜಲಸಮಾಧಿಯಾಗಿತ್ತು. ವರುಣನ ತಾಂಡವ ನೃತ್ಯಕ್ಕೆ ಅಕ್ಕಪಕ್ಕದ 20 ಮನೆಗಳು ಮರಳು ದಿಬ್ಬದೊಳಕ್ಕೆ ಹುದುಗಿ ಹೋಗಿತ್ತು. ಕೃಷಿ ಭೂಮಿ ಮರಳು ಭೂಮಿಯಂತಾಗಿ ಬದಲಾಗಿತ್ತು. ಕೊಳಂಬೆ ನಿವಾಸಿಗಳು ಊರೇ ಬಿಟ್ಟು ಹೋಗುವ ಸ್ಥಿತಿ ನಿರ್ಮಾಣವಾಗಿತ್ತು.
ಆಗ ಉಜಿರೆಯ ಬದುಕು ಕಟ್ಟೋಣ ತಂಡ ಅನ್ನೋ ತಂಡ ಕೊಳಂಬೆಯನ್ನು ಮತ್ತೆ ಕಟ್ಟುವ ಕಾರ್ಯಕ್ಕೆ ಮುಂದಾಯಿತು. ಉಜಿರೆಯ ಲಕ್ಷ್ಮೀ ಇಂಡಸ್ಟೀಸ್ ನ ಮಾಲೀಕ ಮೋಹನ್ ಕುಮಾರ್ ನೇತೃತ್ವದಲ್ಲಿ ನೂರಕ್ಕೂ ಅಧಿಕ ಯುವಕರ ತಂಡ ಮರಳು ತೆರವುಗೊಳಿಸಿ, ಮರಗಳನ್ನು ತೆರವುಗೊಳಿಸಿ 20ಕ್ಕೂ ಅಧಿಕ ಕುಟುಂಬಗಳ ಬದುಕು ಕಟ್ಟಲು ಹೆಗಲು ಕೊಟ್ಟು ನಿಂತಿತು. ಈ ಪರಿವರ್ತನೆಗೆ ಎಸ್. ಡಿ. ಎಂ ಕಾಲೇಜಿನ ವಿದ್ಯಾರ್ಥಿಗಳು, ಸಂಘ ಸಂಸ್ಥೆ, ಗ್ರಾಮಾಭಿವೃದ್ಧಿ ಯೋಜನೆ ಸೇರಿ 5,000ಕ್ಕೂ ಅಧಿಕ ಮಂದಿ ಶ್ರಮದಾನದ ಮೂಲಕ ನೆರವಿಗೆ ನಿಂತರು.
ಕೊಳಂಬೆಯಲ್ಲಿ ಸಂಪೂರ್ಣ ನಾಶವಾಗಿದ್ದ 12 ಮನೆಗಳನ್ನು ಗುರುತಿಸಿ ಕಂದಾಯ ಇಲಾಖೆ ನೀಡಿದ ವರದಿಯನುಸಾರ ಬದುಕು ಕಟ್ಟೋಣ ಟೀಂ ಫೀಲ್ಡಿಗಿಳಿಯಿತು. ಬದುಕು ಕಟ್ಟೋಣ ತಂಡ 12 ಮನೆಗಳನ್ನು ನಿರ್ಮಾಣ ಮಾಡಿ ಕೊಟ್ಟಿತು. ಇದಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಹಾಗೂ ಹರ್ಷೇಂದ್ರ ಹೆಗ್ಗಡೆ ಯವರ ಸಹಕಾರದೊಂದಿಗೆ ದಾನಿಗಳ ಸಹಕಾರದಿಂದ ನೆರವು ಸಿಕ್ಕಿತ್ತು. ಯಾವ ಸಾಕ್ಷಿಗಳು ಉಳಿಯದಂತೆ ಅಕ್ಷರಶಃ ನರಕವಾಗಿದ್ದ ಬೆಳ್ತಂಗಡಿಯ ಕೊಳಂಬೆ ಗ್ರಾಮದಲ್ಲಿ ಪ್ರವಾಹದ ಮೂರು ವರ್ಷದ ಬಳಿಕ ಪವಾಡವೊಂದು ನಡೆದಿತ್ತು. ಮನೆ, ಕೃಷಿ ಭೂಮಿ ಕಳೆದುಕೊಂಡು ಅನಾಥವಾಗಿದ್ದ ಜನರ ಬದುಕನ್ನು ಮತ್ತೆ ಬದುಕು ಕಟ್ಟೋಣ ಬನ್ನಿ ತಂಡ ಕಟ್ಟಿ ಕೊಟ್ಟಿತ್ತು. ಕತ್ತಲಾಗಿದ್ದ ಕೊಳಂಬೆ ಜನರ ಜೀವನ ಬೆಳಗುವ ಕೆಲಸ ಮಾಡಿತ್ತು.