ಉಡುಪಿ:(ಜ.27) ಸಾಲ ಹಿಂದಿರುಗಿಸಿಲ್ಲ ಎನ್ನುವ ಕಾರಣಕ್ಕೆ ಯಕ್ಷಗಾನ ಕಲಾವಿದ ನಿತಿನ್ ಆಚಾರ್ಯ ರ ಮೇಲೆ ಆತನ ಸ್ನೇಹಿತರು ಹಲ್ಲೆ ನಡೆಸಿದ ಘಟನೆ ಪಡುಬಿದ್ರೆಯಲ್ಲಿ ನಡೆದಿತ್ತು. ಇದೀಗ ಕಲಾವಿದ ನಿತಿನ್ ಆಚಾರ್ಯ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳಿಗೆ ಮಧ್ಯಂತರ ಜಾಮೀನು ಮಂಜೂರಾಗಿದೆ.
ಇದನ್ನೂ ಓದಿ: ಉಡುಪಿ: 5 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ
ಆರೋಪಿಗಳಾದ ಸಚಿನ್ ಅಮೀನ್, ಅವರ ತಂದೆ ಕುಶಾಲ್ ಅಮೀನ್ ಮಧ್ಯಂತರ ಜಾಮೀನು ಪಡೆದಿದ್ದಾರೆ. ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಪ್ರತಿ ದೂರು ದಾಖಲಾಗಿದೆ.
ಸಚಿನ್ ಅಮೀನ್ ಅವರಿಂದ ಚಿನ್ನವನ್ನು ಪಡೆದು ಅದನ್ನು ಬ್ಯಾಂಕ್‌ನಲ್ಲಿ ಅಡವಿಟ್ಟು ಅದಕ್ಕೆ ಸರಿಯಾಗಿ ಬಡ್ಡಿ ನೀಡದೆ ವಂಚನೆ ಮಾಡಿದ್ದಾರೆ ಎಂದು ಅವರಿಬ್ಬರು ಹಲ್ಲೆ ಮಾಡಿರುವುದಾಗಿ ಪಡುಬಿದ್ರಿ ಠಾಣೆಯಲ್ಲಿ ನಿತಿನ್ ಆಚಾರ್ಯ ದೂರು ದಾಖಲಿಸಿದ್ದರು. ಈ ದೂರು ದಾಖಲಾಗುವ ಕೆಲವು ತಾಸಿನ ಮೊದಲು ಸಚಿನ್ ಅಮೀನ್ ಅವರ ತಾಯಿಯು ತನ್ನ ಮಗ ಸಚಿನ್‌ನಿಂದ ಪಡೆದ ಚಿನ್ನವನ್ನು ಹಿಂದಿರುಗಿಸದೆ ನಿತಿನ್ ಆಚಾರ್ಯ ಮೋಸ ಮಾಡಿದ್ದಾರೆ ಎಂದು ಕಾಪು ಠಾಣೆಯಲ್ಲಿ ದೂರು ನೀಡಿದ್ದರು ಎಂದು ಎಸ್‌ಪಿ ತಿಳಿಸಿದ್ದಾರೆ.
ಏನಿದು ಘಟನೆ?!
ಆರೋಪಿ ಸಚಿನ್ ಹಾಗೂ ಹಲ್ಲೆಗೊಳಗಾದ ನಿತಿನ್ ಇಬ್ಬರೂ ಯಕ್ಷಗಾನ ಕಲಾವಿದರಾಗಿದ್ದು, ಗೆಳೆಯರಾಗಿದ್ದರು. ಪಡೆದ ಸಾಲ ಹಿಂದಿರುಗಿಸಿಲ್ಲ ಎನ್ನುವ ಕಾರಣಕ್ಕೆ ನಿತಿನ್‌ನನ್ನು ಆರೋಪಿ ಸಚಿನ್, ಆತನ ತಂದೆ ಕುಶಾಲಣ್ಣ ಹಾಗೂ ಇನ್ನೋರ್ವ ಫೈನಾನ್ಶಿಯರ್ ಸೇರಿ ಉದ್ಯಾವರದ ಮನೆಯೊಂದರಲ್ಲಿ ಜ. 21ರಂದು ಕಂಬಳದ ಕೋಣಗಳ ಬಾರುಕೋಲಿನ ಮೂಲಕ ಸತತವಾಗಿ ಹಲ್ಲೆಗೈದಿದ್ದರು.
ಬೆತ್ತದಿಂದ ನಿತಿನ್ ಅವರ ಬೆನ್ನಿಗೆ, ತಲೆಗೆ, ಕಾಲಿಗೆ ಹೊಡೆದಿದ್ದಾರೆ. ಕಾಲಿನಿಂದ ತುಳಿದು ಕೈಯಿಂದ ಕೆನ್ನೆಗೆ ಹೊಡೆದು ಖಾಲಿ ಬಾಂಡ್ ಪೇಪರ್‌ಗೆ ಬಲಾತ್ಕಾರವಾಗಿ ಸಹಿ ಪಡೆದುಕೊಂಡಿದ್ದಾರೆ. ಸಂಜೆ ವಾಪಸು ಪಡುಬಿದ್ರಿಗೆ ಆರೋಪಿಗಳೇ ಕಳುಹಿಸಿಕೊಟ್ಟಿದ್ದಾರೆ. ಜ. 21ರ ರಾತ್ರಿ ವೇಳೆ ಪುತ್ತೂರಿನಲ್ಲಿ ನಡೆದ ಯಕ್ಷಗಾನಕ್ಕೆ ಹೋಗಿ ಅಲ್ಲಿ ಕೆಲಸ ಮಾಡಿದ್ದ ನಿತಿನ್, ಜ. 22ರಂದು ಪಡುಬಿದ್ರಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಪೊಲೀಸರಿಗೆ ದೂರು ನೀಡಿದ್ದರು.