ಚಿಕ್ಕಮಗಳೂರು (ಫೆ.1): ಇತ್ತೀಚಿಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಆರು ಮಂದಿ ನಕ್ಸಲ್ರು ಶರಣಾಗಿದ್ದರು. ಇದರ ಬೆನ್ನಲ್ಲೇ ರಾಜ್ಯದಲ್ಲಿ ಉಳಿದಿದ್ದ ಏಕೈಕ ನಕ್ಸಲ್ ಕೂಡ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಿದ್ದಾರೆ. ಕಳೆದ 18 ವರ್ಷಗಳಿಂದ ಭೂಗತರಾಗಿದ್ದ ನಕ್ಸಲ್ ರವೀಂದ್ರ, ಎಸ್ಪಿ ವಿಕ್ರಮ್ ಆಮ್ಟೆ, ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮುಂದೆ ಶರಣಾಗಿದ್ದಾರೆ.
ಇದನ್ನೂ ಓದಿ: ಮಂಗಳೂರು: ಅಪ್ರಾಪ್ತೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಪ್ರಕರಣ
ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ಕೋಟೆಹೊಂಡ ನಿವಾಸಿಯಾಗಿರುವ ರವೀಂದ್ರ ಕಳೆದ 18 ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ನಕ್ಸಲ್ರ ನಾಯಕ ವಿಕ್ರಮ್ ಗೌಡ ಎನ್ಕೌಂಟರ್ ಬಳಿಕ ರವೀಂದ್ರ ನಾಪತ್ತೆಯಾಗಿದ್ದರು. ರವೀಂದ್ರ ಶರಣಾಗತಿಗೆ ನಕ್ಸಲ್ ಶರಣಾಗತಿ ಕಮಿಟಿ ಹರಸಾಹಸ ಪಟ್ಟಿತ್ತು. ಕೊನೆಗೂ ರಾಜ್ಯ ಸರ್ಕಾರದ ನಕ್ಸಲ್ ಶರಣಾಗತಿ ಪ್ಯಾಕೇಜ್ ಒಪ್ಪಿ ರವಿಂದ್ರ ಶರಣಾಗಿದ್ದಾರೆ.
ನಕ್ಸಲ್ ರವೀಂದ್ರ ಒಟ್ಟು 26 ಪ್ರಕರಣಗಳಲ್ಲಿ ಬೇಕಾಗಿದ್ದಾರೆ. ನಕ್ಸಲ್ ರವೀಂದ್ರ ವಿರುದ್ಧ ಕರ್ನಾಟಕದಲ್ಲಿ 17, ಕೇರಳದಲ್ಲಿ 9 ಕೇಸ್ ದಾಖಲಾಗಿವೆ. ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ 14 ಪ್ರಕರಣಗಳು ದಾಖಲಾಗಿವೆ.
17 ವರ್ಷಗಳ ಹಿಂದೆ ಮೂಲಭೂತ ಹಕ್ಕಿಗಾಗಿ ನಕ್ಸಲ್ ಚಳುವಳಿಯಲ್ಲಿ ಧುಮುಕಿದ್ದೆ. ಮನೆ ಸೇರಿದಂತೆ ಮೂಲಭೂತ ಸೌಕರ್ಯ ನೀಡಲು ಸರ್ಕಾರ ವಿಫಲವಾಗಿತ್ತು. ಈಗ ಸ್ವಲ್ಪ ಬದಲಾವಣೆ ಕಾಣುತ್ತಿದೆ. ಇದರಿಂದ ಸಮಾಜದ ಮುಖ್ಯ ವಾಹಿನಿಗೆ ಬರಲು ನಿರ್ಧಾರ ಮಾಡಿದ್ದೇನೆ. ಸರ್ಕಾರಕ್ಕೆ ನನ್ನ ಬೇಡಿಕೆಯ ಕುರಿತು ಪತ್ರ ನೀಡಿದ್ದೇನೆ ಎಂದು ನಕ್ಸಲ್ ರವೀಂದ್ರ ಹೇಳಿದ್ದಾರೆ.