ಮಂಗಳೂರು:(ಫೆ.1) ಅಪ್ರಾಪ್ತೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರಗೈದ ಆರೋಪ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-2 ಫೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ಸಾಬೀತಾಗಿರುವ ಹಿನ್ನೆಲೆಯಲ್ಲಿ ಅಪರಾಧಿಗಳಿಗೆ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಇದನ್ನೂ ಓದಿ: ದಾವಣಗೆರೆ: ಹೆಣ್ಮಕ್ಕಳನ್ನು ಪುಸಲಾಯಿಸಿ ಕಾಮದ ತೀಟೆ ತೀರಿಸಿಕೊಳ್ಳುತ್ತಿದ್ದ ಮೆಡಿಕಲ್ ಶಾಪ್ ಮಾಲೀಕ!!!
ಮಂಗಳೂರಿನ ಮೂಳೂರು ಗ್ರಾಮ ನಿವಾಸಿ ಮೊಹಮ್ಮದ್ ಶಾಕೀರ್ (26) ಕಾರ್ಕಳ ತಾಲೂಕಿನ ಕುಕ್ಕುಂದೂರಿನ ಅಬ್ದುಲ್ ಸಮದ್ (32) ಬಂಟ್ವಾಳ ತಾಲೂಕಿನ ಅಭಿಜಿತ್ (27) ಶಿಕ್ಷೆಗೊಳಗಾದ ಅಪರಾಧಿಗಳು.
ಏನಿದು ಪ್ರಕರಣ:
2021ರ ಡಿ. 7ರಂದು ತೊಕ್ಕೊಟ್ಟು ಬಸ್ಸು ತಂಗುದಾಣದ ಬಳಿಯಿಂದ 16 ವರ್ಷದ ಬಾಲಕಿಯನ್ನು ಮೊಬೈಲ್ ಮತ್ತು ಹೊಸ ಬಟ್ಟೆಗಳನ್ನು ತೆಗೆದುಕೊಡುವುದಾಗಿ ಆಮಿಷ ತೋರಿಸಿ ಶಾಕೀರ್ ಹಾಗೂ ಸಮದ್ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಕೆ.ಜೆ.ಎಂ. ರೋಡ್ ಜಂಕ್ಷನ್‌ಗೆ ಕರೆದುಕೊಂಡು ಹೋಗಿದ್ದರು. ಅಲ್ಲಿಂದ ಸಮದ್ ತನ್ನ ಸ್ಕೂಟರ್‌ನಲ್ಲಿ ಬಾಲಕಿಯನ್ನು ಕೂರಿಸಿಕೊಂಡು ಅಲ್ಲಿನ ಲಾಡ್ಜ್ ಗೆ ಕರೆದುಕೊಂಡು ಹೋಗಿ ರೂಮ್‌ನಲ್ಲಿ ಕೂಡಿ ಹಾಕಿದ್ದು, ಡಿ. 11ರ ಸಂಜೆ ವರೆಗೆ ಇಬ್ಬರೂ ಆಕೆಗೆ ಬೇಡ ಎಂದರೂ ಬಿಯರ್ ಕುಡಿಸಿ, ಸಿಗರೇಟ್‌ನಲ್ಲಿ ಗಾಂಜಾವನ್ನು ಬೆರೆಸಿ ಒತ್ತಾಯದಲ್ಲಿ ಸೇದಿಸಿದ್ದಾರೆ. ಬಳಿಕ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ.
ರಾತ್ರಿ 7.15ಕ್ಕೆ ಆಕೆಯನ್ನು ನಾಟೆಕಲ್‌ಗೆ ಕರೆದುಕೊಂಡು ಹೋಗಿ ಅಭಿಜಿತ್‌ನ ಕಾರಿನಲ್ಲಿ ಆರೋಪಿತನ ಜತೆಯಲ್ಲಿ ಕಳುಹಿಸಿದ್ದಾರೆ. ಆತ ಅದೇ ದಿನ ರಾತ್ರಿ 12 ಗಂಟೆಗೆ ಮಂಗಳೂರು ತಾಲೂಕು ಪಜೀರ್ ಗ್ರಾಮದ ಕಂಬಳಪದವು ಎಂಬಲ್ಲಿರುವ ಅಪಾರ್ಟ್‌ಮೆಂಟ್‌ಗೆ ಕರೆದುಕೊಂಡು ಹೋಗಿ ಬಿಯರ್ ಕುಡಿಸಿ, ಗಾಂಜಾ ಸೇದಿಸಿ ಅತ್ಯಾಚಾರ ಮಾಡಿದ್ದಾನೆ. ಅನಂತರ ಶಾಕೀರ್ ಹಾಗೂ ಸಮದ್ ಕೂಡಾ ಅಲ್ಲಿಗೆ ಬಂದಿದ್ದು, ಮತ್ತೊಮ್ಮೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ.
ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದರು. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಉಳ್ಳಾಲ ಪೊಲೀಸ್ ನಿರೀಕ್ಷಕರಾಗಿದ್ದ ಸಂದೀಪ್ ಜಿ.ಎಸ್. ಅವರು ತನಿಖೆ ಪೂರ್ಣಗೊಳಿಸಿ ಆರೋಪಿತರ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-2 ಫೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಈ ಪ್ರಕರಣದಲ್ಲಿ ಅಭಿಯೋಜನೆ ಪರ ಒಟ್ಟು 15 ಸಾಕ್ಷಿದಾರರ ವಿಚಾರಣೆ ಮತ್ತು 50 ದಾಖಲೆಗಳನ್ನು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ನೊಂದ ಬಾಲಕಿಯ ತಾಯಿ ನೀಡಿದ ದೂರಿನನ್ವಯ ಪೊಲೀಸರು ರಕ್ಷಿಸಿದ್ದರು. ಬಾಲಕಿ ಮತ್ತು ಯುವಕರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ಕಂಡುಬಂದಿದೆ.
ಅತ್ಯಾಚಾರ ಮಾಡಿದ ಸ್ಥಳದಿಂದ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು, ಅದು ಗಾಂಜಾ ಎನ್ನುವ ಬಗ್ಗೆ ಎಫ್‌ಎಸ್‌ಎಲ್ ಅಧಿಕಾರಿಗಳು ವರದಿ ನೀಡಿದ್ದರು. ಈ ಪ್ರಕರಣದ ಸಾಕ್ಷ್ಯ, ದಾಖಲೆಗಳು ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ಪ್ರತಿವಾದವನ್ನು ಆಲಿಸಿ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ ಜ. 31ರಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-2 ಫೋಕ್ಸೋ ವಿಶೇಷ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ಮಾನು ಕೆ.ಎಸ್.ಅವರು ತೀರ್ಪು ನೀಡಿದ್ದಾರೆ. ಸರಕಾರದ ಪರ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ. ಬದರಿನಾಥ ನಾಯರಿ ಅವರು ಸಾಕ್ಷಿದಾರರನ್ನು ವಿಚಾರಿಸಿ ವಾದ ಮಂಡನೆ ಮಾಡಿದ್ದಾರೆ.
ನೊಂದ ಬಾಲಕಿಗೆ ಪರಿಹಾರ:
ದಂಡದ ಮೊತ್ತ 1,65,000 ರೂ. ಹಣವನ್ನು ನೊಂದ ಬಾಲಕಿಗೆ ಪಾವತಿಸುವಂತೆ ನ್ಯಾಯಾಲಯವು ಆದೇಶಿಸಿದೆ. ಅಲ್ಲದೆ ದಂಡ ಪ್ರಕ್ರಿಯೆ ಸಂಹಿತೆಯ ಕಲಂ: 357(ಎ) ಪ್ರಕಾರ ಮತ್ತು ಸಂತ್ರಸ್ತರ ಪರಿಹಾರ ಯೋಜನೆ ಅಡಿಯಲ್ಲಿ ಹೆಚ್ಚುವರಿಯಾಗಿ 2,35,000 ರೂ. ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನೀಡುವಂತೆ ತೀರ್ಪಿನಲ್ಲಿ ನಿರ್ದೇಶನ ನೀಡಿದೆ.