ಉಜಿರೆ, (ಫೆ. 1): ವಿಜ್ಞಾನ ವಿಷಯ ತುಂಬಾ ಕಷ್ಟ. ಹಾಗಾಗಿ ಬೇರೆ ವಿಷಯದ ಕುರಿತು ಗಮನ ಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಾರೆ. ಆದರೆ ಕಲಿಯುವ, ಆಸಕ್ತಿ, ಸಾಮರ್ಥ್ಯ ಇದ್ದರೆ ಎಲ್ಲವೂ ಸಾಧ್ಯ ಎಂದು ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ ಹೇಳಿದರು.
ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಜ.29ರಂದು ಆಯೋಜಿಸಲಾಗಿದ್ದ ಹಿರಿಯ ವಿದ್ಯಾರ್ಥಿಗಳೊಂದಿಗೆ ಸಂವಾದ ಸರಣಿ ‘ಎಸ್ ಡಿ ಎಂ ನೆನಪಿನಂಗಳ’ದ ಹದಿನೇಳನೇ ಕಂತಿನ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ಶಿವಾನಂದ ದ್ವಿತೀಯ ವರ್ಷದ ಬಿ. ಕಾಂ. ವಿದ್ಯಾರ್ಥಿಗೆ 5,000 ಸಹಾಯಧನ ನೀಡಿದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳು ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಇದಕ್ಕೆ ನೀವಲ್ಲ ಕಾರಣ ನಿಮ್ಮ ಸುತ್ತಮುತ್ತಲಿನ ಜನರು. ಯಾರೇ ದುಶ್ಚಟಗಳ ಆಮಿಷ ಒಡ್ಡಿದರೂ ಅದಕ್ಕೆ ಬಲಿಯಾಗದೆ ಇರಬೇಕು. ಇದು ನಿಮ್ಮಿಂದ ಸಾಧ್ಯವಾಗುತ್ತದೆ ಎಂದು ಕಿವಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ, ನೆನಪಿನಂಗಳ ಕಾರ್ಯಕ್ರಮ ಹಳೆ ವಿದ್ಯಾರ್ಥಿಗಳ ಸಾಧನೆ. ಈಗಿನ ಮಕ್ಕಳಿಗೆ ದಾರಿದೀಪವಾಗುವ ಉದ್ದೇಶವಾಗಿದೆ. ಹಳೆವಿದ್ಯಾರ್ಥಿಗಳು ತಮ್ಮ ಕಿರಿಯರಿಗಾಗಿ 5 ಲಕ್ಷ ರೂಪಾಯಿ ಮಿಡ್ ಡೇ ಮೀಲ್ ಗಾಗಿ ಹಣ ನೀಡಿದ್ದಾರೆ ಎಂದು ತಿಳಿಸಿದರು.
ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪೀತಾಂಬರ ಹೆರಾಜೆ, ಕಾರ್ಯಕ್ರಮ ಸಂಯೋಜಕ ಡಾ. ಎಂ.ಪಿ. ಶ್ರೀನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ದಿವಾಕರ ಕೊಕ್ಕಡ ಸ್ವಾಗತಿಸಿದರು. ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ದೀಕ್ಷಿತ್ ರೈ ವಂದಿಸಿದರು. ರಾಜ್ಯಶಾಸ್ತ್ರ ಪ್ರಾಧ್ಯಾಪಕ ಶಿವಕುಮಾರ್ ಪಿ. ಪಿ. ಕಾರ್ಯಕ್ರಮ ನಿರೂಪಿಸಿದರು.