ಉಜಿರೆ:(ಫೆ.1) ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಅಂಗವಾಗಿ ಸಾಮಾಜಿಕ ಜವಾಬ್ದಾರಿಗಳ ಉಪಕ್ರಮ ಸಮಿತಿ, ಮಹಿಳಾ ಅಭಿವೃದ್ಧಿ ಕೋಶ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಯೋಗದೊಂದಿಗೆ ‘ದಂತ ಆರೋಗ್ಯ’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಜ. 25ರಂದು ನಡೆಯಿತು.
ಉಜಿರೆಯ ದಂತ ಚಿಕಿತ್ಸಾಲಯದ ದಂತ ಶಸ್ತ್ರ ಚಿಕಿತ್ಸಕಿ ಮತ್ತು ಲೇಸರ್ ಸ್ಪೆಷಾಲಿಸ್ಟ್ ಡಾ. ದೀಪಾಲಿ ಎಸ್. ಡೋಂಗ್ರೆ ಮತ್ತು ಬೆಳ್ತಂಗಡಿಯ ಶ್ರೀ ದುರ್ಗಾ ಡೆಂಟಲ್ ಕೇರ್ ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕನ್ಸಲ್ಟೆಂಟ್ ಆರ್ಥೋ ಡೆಂಟಿಸ್ಟ್ ಮತ್ತು ದಂತ ಶಸ್ತ್ರಚಿಕಿತ್ಸಕಿ ಡಾ. ಆಶಾ ರಾಘವೇಂದ್ರ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ದೇಹದಲ್ಲಿ ಬಾಯಿಯು ಆರೋಗ್ಯದ ಸೂಚಕವಾಗಿದೆ. ದೇಹದಲ್ಲಿ ಯಾವುದೇ ಬದಲಾವಣೆ ಆದರೂ ಬಾಯಿ ಅದನ್ನು ಪ್ರತಿಬಿಂಬಿಸುತ್ತದೆ. ಹಲ್ಲಿನ ಊತ, ರಕ್ತಸ್ರಾವ ಇವೆಲ್ಲಾ ಪ್ರಸ್ತುತ ಹಲ್ಲಿನ ಸಾಮಾನ್ಯ ಸಮಸ್ಯೆಗಳು. ಆಧುನಿಕ ತಂತ್ರಜ್ಞಾನ ಇವೆಲ್ಲದಕ್ಕೂ ಪರಿಹಾರವನ್ನು ಒದಗಿಸುತ್ತದೆ ಎಂದು ಡಾ. ದೀಪಾಲಿ ಎಸ್. ಡೋಂಗ್ರೆ ಹೇಳಿದರು.
ದಂತ ಸಮಸ್ಯೆಗಳ ಕುರಿತು ಮಾತನಾಡಿದ ಅವರು, “ಈಗಿನ ಯುವಜನರು ದಂತ ಸಮಸ್ಯೆ ಇದ್ದರೆ ಇನ್ನೊಬ್ಬರ ಜೊತೆ ಮಾತನಾಡಲು ಹಿಂಜರಿಯುತ್ತಾರೆ. ತಮ್ಮ ಬಗ್ಗೆಯೇ ಕೀಳರಿಮೆ ಪಡುತ್ತಾರೆ. ಯಾರೂ ಹುಟ್ಟಿನಿಂದ ಸೌಂದರ್ಯ ಪಡೆದಿರುವುದಿಲ್ಲ. ನಮ್ಮನ್ನು ನಾವು ಪ್ರಸ್ತುತಪಡಿಸುವ ರೀತಿ ಬದಲಾಗಬೇಕು” ಎಂದರು.
ಡಾ. ಆಶಾ ರಾಘವೇಂದ್ರ, ದಂತ ಸಮಸ್ಯೆಗಳಿಗೆ ನೀಡುವ ಪರಿಹಾರ ಕ್ರಮಗಳ ಕುರಿತು ಮಾತನಾಡಿದರು. ದಂತ ಚಿಕಿತ್ಸೆಗೆ ಹೆಚ್ಚು ಹಣ ಖರ್ಚು ಮಾಡಬೇಕು ಎಂದು ಜನ ಹಿಂಜರಿಯುತ್ತಾರೆ. ಆದರೆ ದಂತ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಬಹಳ ಮುಖ್ಯ ಎಂದರು.
“ಮಹಿಳೆಯರಿಗೆ ಮಲ್ಟಿ ಟಾಸ್ಕಿಂಗ್ ಕೌಶಲವಿರುವುದು ವಿಶೇಷ ಸಾಮರ್ಥ್ಯ. ನಿಮ್ಮ ಗುರಿ ಯಾವಾಗಲೂ ನಿಶ್ಚಿತವಾಗಿರಬೇಕು, ಅದರಿಂದ ಹೆಜ್ಜೆಯನ್ನು ಹಿಂತೆಗೆಯಬೇಡಿ” ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪ ಪ್ರಾಂಶುಪಾಲೆ ಡಾ. ಶಲೀಫ್ ಕುಮಾರಿ ಮಾತನಾಡಿ, “2008 ರಿಂದ ಹೆಣ್ಣು ಮಕ್ಕಳ ದಿನವನ್ನು ಆಚರಿಸಿಕೊಂಡು ಬಂದಿದ್ದೇವೆ. ಮಹಿಳಾ ಆರೋಗ್ಯ, ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶ. ಮಹಿಳೆಯರು ಸಮಾಜದ ಬೆನ್ನೆಲುಬಾಗಿದ್ದಾರೆ. ಒಂದು ಮಹಿಳೆಗೆ ಶಿಕ್ಷಣ ನೀಡಿದರೆ ಸಮಾಜಕ್ಕೆ ಶಿಕ್ಷಣ ನೀಡಿದಂತೆ” ಎಂದರು.
ಮಹಿಳಾ ಅಭಿವೃದ್ಧಿ ಕೋಶದ ಸಂಯೋಜಕಿ ಅಕ್ಷತಾ ಜೈನ್ ಸ್ವಾಗತಿಸಿ, ಸಾಮಾಜಿಕ ಜವಾಬ್ದಾರಿಗಳ ಉಪಕ್ರಮ ಸಮಿತಿಯ ಸಂಯೋಜಕಿ ದೀಪಾ ಆರ್. ಪಿ. ವಂದಿಸಿದರು. ವಿದ್ಯಾರ್ಥಿನಿ ಸಾತ್ವಿಕ ಜೈನ್ ಕಾರ್ಯಕ್ರಮ ನಿರೂಪಿಸಿದರು.