ಬೆಳ್ತಂಗಡಿ:(ಫೆ.3) ಇತಿಹಾಸ ಪ್ರಸಿದ್ಧ ಸರ್ವಧರ್ಮೀಯ ಸಮನ್ವಯ ಕೇಂದ್ರ ಕಾಜೂರು ಮಖಾಂ ಶರೀಫ್ ನಲ್ಲಿ ಕಳೆದ 10 ದಿನಗಳಿಂದ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆದ ಉರೂಸ್ ಮಹಾ ಸಂಭ್ರಮಕ್ಕೆ ಫೆ.2 ಎಂದು ತೆರೆಬಿತ್ತು.
ಇದನ್ನೂ ಓದಿ: ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ಕಾಜೂರು ಉರೂಸ್ ಸಾರ್ವಜನಿಕ ಸಮಾವೇಶ
ಸಯ್ಯಿದ್ ಕುಂಬೋಳ್ ತಂಙಳ್, ಸಯ್ಯಿದ್ ಕಾಜೂರು ತಂಙಳ್, ಸಯ್ಯಿದ್ ಹಾಮಿದ್ ಇಂಬಿಚ್ಚಿಕೋಯ ತಂಙಳ್, ಖಾಝಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ಮಾರ್ಗದರ್ಶನ ಮತ್ತು ಧಾರ್ಮಿಕ ನೇತೃತ್ವದಲ್ಲಿ ನಡೆದ ಉರೂಸ್ ಸಮಾರಂಭದಲ್ಲಿ ಕರ್ನಾಟಕ ಕೇರಳ ತಮಿಳುನಾಡು ಮೊದಲಾದ ರಾಜ್ಯ ಗಳಿಂದಲೂ ಸಾವಿರಾರು ಮಂದಿ ಆಗಮಿಸುವ ಮೂಲಕ ಗತಕಾಲದ ವೈಭವ ಮರುಕಳಿಸಿತು.
ಉರೂಸ್ ಸಮಾರೋಪದ ಪ್ರಯುಕ್ತ ಸಯ್ಯಿದ್ ಕುಂಬೋಳ್ ತಂಙಳ್ ನೇತೃತ್ವದಲ್ಲಿ ಖತ್ಮುಲ್ ಕುರ್‌ಆನ್, ಮುಂದಿನ ಉರೂಸ್‌ಗೆ ವಾಗ್ದಾನ ದುಆ ಕಾರ್ಯಕ್ರಮ ರವಿವಾರ ಬೆಳಗ್ಗೆ ನಡೆಯಿತು.
ರಾತ್ರಿ ನಡೆದ ಸಮಾರೋಪದಲ್ಲಿ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಕಾರಂದೂರು ಮರ್ಕಝ್ ಶಿಕ್ಷಣ ಮಹಾವಿದ್ಯಾಲಯದ ಉಪಾಧ್ಯಕ್ಷ, ಖ್ಯಾತ ವಾಗ್ಮಿ ಸಯ್ಯಿದ್ ಸಿಹಾಬುದ್ದೀನ್ ಅಹ್ದಲ್ ತಂಙಳ್ ಮುತ್ತನ್ನೂರು ಕೇರಳ ಮತ್ತು ಕಾಜೂರು ತಂಙಳ್ ನೇತೃತ್ವದಲ್ಲಿ ಮೌಲೀದ್ ಪಾರಾಯಣ ನಡೆದು ಮಹಾ ಅನ್ನದಾನಕ್ಕೆ ಚಾಲನೆ ನೀಡಲಾಯಿತು.
ಉರೂಸ್ ಪ್ರಯುಕ್ತ ಫೆ.3 ರಂದು ಸಂಜೆಯವರೆಗೂ ಕ್ಷೇತ್ರಕ್ಕೆ ಆಗಮಿಸಿದ ಸರ್ವಧರ್ಮೀಯರಿಗೂ ಮಹಾ ಅನ್ನದಾನ ನಡೆಯಿತು.
ಕಾಜೂರು ಕಿಲ್ಲೂರು ಜಂಟಿ ಉರೂಸ್ ಸಮಿತಿ ಹಾಗೂ ನೂರಾರು ಸಂಖ್ಯೆಯ ಸ್ವಯಂ ಸೇವಕರು, ಕಾಜೂರು ಮತ್ತು ಅಂಗಸಂಸ್ಥೆಗಳ ಪ್ರತಿನಿಧಿಗಳು, ಉಸ್ತಾದರುಗಳು, ಸುನ್ನೀ ಸಮೂಹ ಸಂಘಟೆನೆಗಳಾದ ಎಸ್ಸೆಸ್ಸೆಫ್, ಎಸ್‌ವೈಎಸ್, ಕರ್ನಾಟಕ ಮುಸ್ಲಿಂ ಜಮಾಅತ್, ಎಸ್‌ಎಮ್, ಎಸ್‌ಜೆಯು ಇದರ ಪದಾಧಿಕಾರಿಗಳು ಆಹೋರಾತ್ರಿ ತಮ್ಮ ಶ್ರಮ ಸೇವೆ ನೀಡಿ ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದರು. ಅಗ್ನಿ ಶಾಮಕ ಇಲಾಖೆ, ಪೊಲೀಸ್ ಮತ್ತು ಗೃಹರಕ್ಷಕ ದಳ,
ಆರೋಗ್ಯ ಇಲಾಖೆ, ಗ್ರಾ.ಪಂ ಮಿತ್ತಬಾಗಿಲು ಮತ್ತು ಮಲವಂತಿಗೆಯ ಪಿಡಿಒ ಮತ್ತು ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಿದರು. ಆಗಮಿಸುವ ಸರ್ವರಿಗೂ ಸಮರ್ಪಕ ವಾಹನ ನಿಲುಗಡೆ, ದಿಡುಪೆ ಯಂಗ್‌ಮನ್ಸ್ ವತಿಯಿಂದ ತಂಪುಪಾನೀಯ ವ್ಯವಸ್ಥೆ ಅಚ್ಚುಕಟ್ಟಾಗಿ ನಡೆಯಿತು. ಆರ್‌ಡಿಸಿ ದಪ್ಪು ಸಮಿತಿ ವತಿಯಿಂದ ಪ್ರತಿದಿನ ದಫ್ಫು ಪ್ರದರ್ಶನ ಏರ್ಪಡಿಸಿ ಕಾರ್ಯಕ್ರಮಕ್ಕೆ ಇಸ್ಲಾಮಿಕ್ ಸಾಂಸ್ಕೃತಿಕ ಮೆರುಗು ನೀಡಿದರು.
ಒಟ್ಟಿನಲ್ಲಿ ಕಳೆದ 10 ದಿನಗಳಲ್ಲಿ ನಡೆದ ಉರೂಸ್ ಕಾರ್ಯಕ್ರಮ ಅತ್ಯಂತ ಭಕ್ತಿ ಭಾವ ಸಂಭ್ರಮ ಸಡಗರದಿಂದ ಸಮಾಪ್ತಿಗೊಂಡಿತು. ಭವಿಷ್ಯದ ಚಿಂತನೆ, ಅಭಿವೃದ್ಧಿಯ ದೀರ್ಘದೃಷ್ಟಿತ್ವ, ಶೈಕ್ಷಣಿಕ ಪ್ರಗತಿಯ ಗುರಿಯನ್ನು ನಿಗದಿಗೊಳಿಸುವಲ್ಲಿ ಈ ಉರೂಸ್ ಒಂದು ಐತಿಹಾಸಿಕ ಮಾದರಿ ಕಾರ್ಯಕ್ರಮವಾಗಿ ರೂಪುಪಡೆಯಿತು.