ಬೆಂಗಳೂರು, (ಫೆ.04): ಕದ್ದ ಹಣದಿಂದ ಸ್ನೇಹಿತೆಗೆ 3 ಕೋಟಿ ರೂ. ಮೌಲ್ಯದ ಮನೆ ಕಟ್ಟಿಸಿಕೊಟ್ಟಿದ್ದ ಆರೋಪಿಯನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ, ಆರೋಪಿಗೆ ಪ್ರಖ್ಯಾತ ನಟಿಯ ಜೊತೆಗೂ ನಂಟು ಹೊಂದಿದ್ದನು ಎಂದು ತಿಳಿದುಬಂದಿದೆ. ಸೊಲ್ಲಾಪುರ ಮೂಲದ ಪಂಚಾಕ್ಷರಿ ಸ್ವಾಮಿ (37) ಬಂಧಿತ ಆರೋಪಿ. ಆರೋಪಿ ಪಂಚಾಕ್ಷರಿ ಸ್ವಾಮಿಗೆ ಮದುವೆಯಾಗಿದ್ದರೂ, ಹುಡುಗಿಯರ ಶೋಕಿ ಮಾತ್ರ ಕಡಿಮೆಯಾಗಿರಲಿಲ್ಲ.
ಆರೋಪಿ ಪಂಚಾಕ್ಷರಿ ಸ್ವಾಮಿ ತಂದೆ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ಪಂಚಾಕ್ಷರಿ ಸ್ವಾಮಿ ತಂದೆ ಸಾವಿನ ಬಳಿಕ ರೈಲ್ವೆ ಇಲಾಖೆ ಕೆಲಸ ತಾಯಿಗೆ ಸಿಕ್ಕಿತ್ತು. ಆರೋಪಿ ಪಂಚಾಕ್ಷರಿ ಸ್ವಾಮಿಗೆ ಮದುವೆಯಾಗಿ ಮಗು ಇದೆ. ಈತ 400 ಸ್ಕ್ವೇರ್ ಫೀಟ್ ಮನೆಯಲ್ಲಿ ವಾಸವಾಗಿದ್ದಾನೆ. ಮನೆ ಕೂಡ ಆರೋಪಿ ಪಂಚಾಕ್ಷರಿ ಸ್ವಾಮಿಯ ತಾಯಿಯ ಹೆಸರಿನಲ್ಲಿದೆ. ಈ ಮನೆ ಮೇಲೆ ಸಾಲ ಇದ್ದು, ಸಾಲ ಕಟ್ಟದ ಹಿನ್ನೆಲೆಯಲ್ಲಿ ಬ್ಯಾಂಕ್ನಿಂದ ನೋಟಿಸ್ ಬಂದಿದೆ. ವಾಸದ ಮನೆ ಸದ್ಯ ಹರಾಜಿಗೆ ಬಂದಿದೆ.
ಪ್ರಖ್ಯಾತ ನಟಿಗಾಗಿ ಕೋಟಿ ಕೋಟಿ ಖರ್ಚು
ಪಂಚಾಕ್ಷರಿ ಸ್ವಾಮಿ 2003ರಲ್ಲಿ ಅಪ್ರಾಪ್ತನಿದ್ದಾಗಲೇ ಕಳ್ಳತನಕ್ಕೆ ಇಳಿದಿದ್ದಾನೆ. ಆರೋಪಿ ಪಂಚಾಕ್ಷರಿ ಸ್ವಾಮಿ 2009 ರಿಂದ ಪ್ರೊಫೆಷನಲ್ ಆಗಿ ಕಳ್ಳನಾಗಿದ್ದಾನೆ. ಆರೋಪಿ ಪಂಚಾಕ್ಷರಿ ಸ್ವಾಮಿ ಕಳ್ಳತನ ಮಾಡಿ ಕೋಟಿ ಕೋಟಿ ಹಣ ಗಳಿಸಿದ್ದನು. 2014-15 ರಲ್ಲಿ ಪ್ರಖ್ಯಾತ ನಟಿ ಜೊತೆಗೆ ಸಂಪರ್ಕದಲ್ಲಿದ್ದೆ ಎಂಬುವುದಾಗಿ ಹೇಳಿಕೊಂಡಿದ್ದಾನೆ. ನಟಿಗಾಗಿ ಕೋಟಿ ಕೋಟಿ ಖರ್ಚು ಮಾಡಿದ್ದಾನೆ. 2016 ರಲ್ಲಿ ಕೊಲ್ಕತ್ತದಲ್ಲಿ ಸ್ನೇಹಿತೆಗಾಗಿ 3 ಕೋಟಿ ರೂ. ಖರ್ಚು ಮಾಡಿ ಮನೆ ಕಟ್ಟಿಸಿಕೊಟ್ಟಿದ್ದಾನೆ. ಅಲ್ಲದೇ, ಆಕೆಯ ಹುಟ್ಟಿದ ಹಬ್ಬಕ್ಕೆ 22 ಲಕ್ಷ ರೂ. ಮೌಲ್ಯದ ಅಕ್ವೇರಿಯಂ ಗಿಫ್ಟ್ ಕೊಟ್ಟಿದ್ದಾನೆ. ಬಳಿಕ, 2016ರಲ್ಲಿ ಗುಜರಾತ್ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದರು.
ಜೈಲಿಂದ ಬಂದರೂ ಕಳ್ಳತನ ಬಿಡದ ಆರೋಪಿ
6 ವರ್ಷ ಗುಜರಾತ್ ಸಬರಮತಿ ಜೈಲಿನಲ್ಲಿದ್ದ ಪಂಚಾಕ್ಷರಿ ಸ್ವಾಮಿ ಹೊರಬಂದು ಮತ್ತೆ ಕಳ್ಳತನ ಮಾಡಲು ಆರಂಭಿಸಿದ್ದಾನೆ. ಆಗ, ಮಹಾರಾಷ್ಟ್ರ ಪೊಲೀಸರು ಆರೋಪಿ ಪಂಚಾಕ್ಷರಿ ಸ್ವಾಮಿಯನ್ನು ಬಂಧಿಸಿದ್ದಾರೆ. ಜೈಲಿನಿಂದ ಬಿಡುಗಡೆಯಾಗಿ 2024 ರಲ್ಲಿ ಮತ್ತೆ ಬೆಂಗಳೂರಿನಲ್ಲಿ ಕಳ್ಳತನ ಮಾಡಲು ಶುರುಮಾಡಿದ್ದಾನೆ.