Thu. Feb 6th, 2025

Chamarajanagar: ಕಿವಿ ಚುಚ್ಚಲು ಅರಿವಳಿಕೆ ಮದ್ದು – ಸರ್ಕಾರಿ ವೈದ್ಯರ ಎಡವಟ್ಟಿಗೆ 6 ತಿಂಗಳ ಗಂಡು ಮಗು ಸಾವು

ಚಾಮರಾಜನಗರ (ಫೆ.04): ‘ವೈದ್ಯೋ ನಾರಾಯಣೋ ಹರಿಃ’ ಎಂಬ ಉಕ್ತಿಯಂತೆ ವೈದ್ಯನಾದವನು ದೇವರಿಗೆ ಸಮಾನವಾದವನು. ಆದರೆ ಪ್ರಾಣ ಉಳಿಸಬೇಕಿರುವ ವೈದ್ಯನೇ ಬದುಕಿ ಬಾಳ ಬೇಕಾಗಿದ್ದ ಪುಟ್ಟ ಕಂದನ ಪ್ರಾಣ ತೆಗೆದಿರುವ ಆರೋಪ ಕೇಳಿಬಂದಿದೆ. ವೈದ್ಯ ಮಾಡಿದ ಎಡವಟ್ಟಿಗೆ 6 ತಿಂಗಳ ಗಂಡು ಮಗು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರದಲ್ಲಿ ನಡೆದಿದೆ.

ಇದನ್ನೂ ಓದಿ: Karkala: ಬಾವನ ಮೇಲೆ ಭಾಮೈದನಿಂದ ಮಾರಕಾಸ್ತ್ರದಿಂದ ಹಲ್ಲೆ

ಜಿಲ್ಲೆಯ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆ ವೈದ್ಯ 6 ತಿಂಗಳ ಮಗುವಿನ ಪ್ರಾಣವನ್ನು ತೆಗೆದಿದ್ದಾನೆ. ಡಾಕ್ಟರ್ ಮಾಡಿದ ಸಣ್ಣದೊಂದು ಎಡವಟ್ಟಿಗೆ ಬದುಕಿ ಬಾಳಬೇಕಾದ 6 ತಿಂಗಳ ಕಂದನ ಪ್ರಾಣ ಪಕ್ಷಿಯೇ ಹಾರಿ ಹೋಗಿದೆ. ತನ್ನ ಮಗುವಿನ ಸಾವಿಗೆ ಕಾರಣವಾದ ವೈದ್ಯನ ವಿರುದ್ದ ಕುಟುಂಬಸ್ಥರು ರೊಚ್ಚಿಗೆದ್ದಿದ್ದು ಸರ್ಕಾರಿ ಆಸ್ಪತ್ರೆಯೇ ರಣಾಂಗಣವಾಗಿ ಮಾರ್ಪಟ್ಟಿತ್ತು.

ಆಗಿದ್ದೇನು?
ಹಂಗಳ ಗ್ರಾಮದ ನಿವಾಸಿಗಳಾದ ಆನಂದ್ ಮತ್ತು ಶುಭಮಾನಸ ದಂಪತಿಯ ಆರು ತಿಂಗಳ ಮಗು ಪ್ರಖ್ಯಾತ್​ಗೆ ಕಿವಿ ಚುಚ್ಚಿಸೋಕೆ ಮುಂದಾಗಿದ್ದರು. ಆದರೆ ಚಿಕ್ಕ ಕಂದವಾದ ಕಾರಣ ಮಗುವಿಗೆ ನೋವು ಆಗ ಬಾರದು ಎಂಬ ಕಾರಣಕ್ಕೆ ಬೋಮ್ಮಲಾಪೂರ ಸರ್ಕಾರಿ ಆಸ್ಪತ್ರೆಗೆ ಮಗುವನ್ನ ಕರೆದುಕೊಂಡು ಹೋದ ಪೋಷಕರು ಕಿವಿಗೆ ಬೆಂಟ್ ಇಂಜೆಕ್ಷನ್(ಅನಸ್ತೀಷಿಯಾ) ಕೊಡಿಸಿದ್ದಾರೆ. ಈ ಇಂಜೆಕ್ಷನ್ ನೀಡಿದ 10 ನಿಮಿಷದೊಳಗೆ ಮಗುವಿಗೆ ರಿಯಾಕ್ಷನ್ ಆಗಿದೆ. ಇದ್ದಕ್ಕಿದ್ದಂತೆ ಪಿಡ್ಸ್ ಬಂದಿದೆ, ತಕ್ಷಣವೇ ಬೋಮ್ಮಲಾಪುರ ಸರ್ಕಾರಿ ಆಸ್ಪತ್ರೆಯಿಂದ ಗುಂಡ್ಲುಪೇಟೆ ತಾಲೂಕು ಆಸ್ಪತ್ರೆಗೆ ಮಗುವನ್ನ ಕರೆದೊಯ್ಯಲಾಗಿದೆ. ಆದರೆ ಆಸ್ಪತ್ರೆ ತಲುಪುವ ಮುನ್ನವೆ ಮಗು ಉಸಿರು ಚೆಲ್ಲಿದೆ. ಈ ವಿಚಾರ ತಿಳಿದು ಮೃತ ಮಗುವಿನ ಕುಟುಂಬಸ್ಥರು ರೊಚ್ಚಿಗೆದ್ದು ವೈದ್ಯರಿಗೆ ಕ್ಲಾಸ್ ತೆಗೆದು ಕೊಂಡಿದ್ದಾರೆ.

ವೈದ್ಯ ಓವರ್ ಡೋಸ್ ನೀಡಿದ ಪರಿಣಾಮವೇ ಮಗು ಸಾವನ್ನಪ್ಪಿರುವುದಾಗಿ ಕುಟುಂಬಸ್ಥರ ಆರೋಪವಾಗಿದೆ. ಪಿಹೆಚ್​ಸಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಗುಂಡ್ಲುಪೇಟೆ ತಾಲೂಕು ವೈದ್ಯಾಧಿಕಾರಿ ಡಾ.ಅಲಂಪಾಷಾ ಹೇಳಿದ್ದಾರೆ.

ಕಿವಿಗೆ ನೋವಾಗಬಾರ್ದು ಅಂತ ವೈದ್ಯರ ಬಳಿ ಕರೆದುಕೊಂಡು ಹೋದರೆ, ಆ ವೈದ್ಯ ಮಗುವಿನ ಪ್ರಾಣವನ್ನು ತೆಗೆದಿದ್ದು ನಿಜಕ್ಕೂ ದುರಂತವೇ ಸರಿ. ಮರಣೋತ್ತರ ಪರೀಕ್ಷೆ ವರದಿಯ ಬಳಿಕ ಸತ್ಯಾ ಸತ್ಯತೆ ಬೆಳಕಿಗೆ ಬರಬೇಕಿದೆ.

ಇನ್ನು ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಆಸ್ಪತ್ರೆಯಲ್ಲಿ ಹೈಡ್ರಾಮಾವೇ ನಡೆಯಿತು. ಮಾಧ್ಯಮ ಪ್ರತಿನಿಧಿಗಳನ್ನು ಹೊರಗಿಟ್ಟು ಟಿಹೆಚ್ಒ ಮತ್ತು ಪೊಲೀಸರು ಸಭೆ ಸೇರಿದ್ದಾರೆ. ಬಾಗಿಲು ಹಾಕಿ ಮಾಧ್ಯಮದವರು ಒಳಪ್ರವೇಶಿಸದಂತೆ ಪೊಲೀಸ್ ನಿಯೋಜನೆ ಮಾಡಲಾಗಿದೆ. ಮೃತ ಹಸುಗೂಸು ತಂದೆ ಜತೆ ಟಿಹೆಚ್ಒ ಡೀಲಿಂಗ್‌ಗೆ ಮುಂದಾದ ಆರೋಪ ಕೇಳಿಬಂದಿದೆ.

ಎಲ್ಲವನ್ನೂ ನೋಡಿ ರೊಚ್ಚಿಗೆದ್ದ ಬೊಮ್ಮಲಾಪುರ ಗ್ರಾಮದ ನಿವಾಸಿಗಳು ಮಾಧ್ಯಮ ಪ್ರತಿನಿಧಿಗಳನ್ನು ಒಳಬಿಡಿ ಎಂದು ಗಲಾಟೆ ಮಾಡಿದ್ದಾರೆ. ಗ್ರಾಮಸ್ಥರು ರೊಚ್ಚಿಗೇಳುತ್ತಿದ್ದಂತೆ ಮಾಧ್ಯಮದವರನ್ನು ಪೊಲೀಸರು ಒಳಬಿಟ್ಟಿದ್ದಾರೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು