Wed. Feb 5th, 2025

Belthangady: ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವರ ಜಾತ್ರೋತ್ಸವ ಸಂಪನ್ನ

ಬೆಳ್ತಂಗಡಿ:(ಫೆ.5) ಶ್ರದ್ಧಾ ಕೇಂದ್ರಗಳ ಅಭಿವೃದ್ಧಿ ಹಾಗೂ ಸೇವೆಯಿಂದ ಭಗವಂತನ ಅನುಗ್ರಹ ಪ್ರಾಪ್ತಿಯಾಗಿ ಜೀವನದಲ್ಲಿ ಉನ್ನತಿ ಹೊಂದಲು ಸಾಧ್ಯವಿದೆ ಎಂದು ಗಮಕ ಕಲಾ ಪರಿಷತ್ ನ ವಿದ್ವಾಂಸರಾದ ರಾಮಕೃಷ್ಣ ಮಡಪುಳಿತ್ತಾಯ ಅವರು ಹೇಳಿದರು.

ಇದನ್ನೂ ಓದಿ: ಮುಂಡಾಜೆ: ರೋವರ್ಸ್ ಮತ್ತು ರೇಂಜರ್ಸ್ ಘಟಕದ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭ

ಅವರು ಫೆ.2 ರಂದು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ವಿಷ್ಣುಮೂರ್ತಿ ದೇವರ ವರ್ಷಾವಧಿ ಜಾತ್ರೋತ್ಸವದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದರು‌.

ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯ ಯೋಗೀಶ್ ಕುಮಾರ್ ಮಾತನಾಡಿ ಕ್ಷೇತ್ರದಲ್ಲಿ ನಡೆಯುವ ಪ್ರತಿ ಕಾರ್ಯಕ್ರಮದಲ್ಲಿ ನಾವು ಶ್ರದ್ದಾ ಭಕ್ತಿಯಿಂದ ಸೇರಿದಾಗ ನಮಗೆ ಒಳಿತಾಗುತ್ತದೆ ಎಂದರು.

ಜಾತ್ರೋತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ್ ರೈ ಮಾತನಾಡಿ ಜಾತ್ರೋತ್ಸವವು ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆದಿದ್ದು, ಸಹಕಾರ ನೀಡಿದ ಭಕ್ತ ಮಹಾಶಯರಿಗೆ ಕೃತಜ್ಞತೆ ಅರ್ಪಿಸಿದರು.

ವೇದಿಕೆ ಯಲ್ಲಿ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷರಾದ ಕೆ.ವಸಂತ ಸಾಲಿಯಾನ್ ಕಾಪಿನಡ್ಕ,‌ ಅಧ್ಯಕ್ಷತೆಯನ್ನು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಕೃಷ್ಣ ಸಂಪಿಗೆತ್ತಾಯ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಭಜನಾ ಮಂಡಳಿ ಅಧ್ಯಕ್ಷ ಹೇಮಂತ್ ಗುಂಡೇರಿ, ಕಾರ್ಯದರ್ಶಿ ನಿತಿನ್ ಶೆಟ್ಟಿ ಪಳಿಕೆ, ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ವಿದ್ಯಾನಂದ ಅಂಗಡಿಬೆಟ್ಟು, ಕಾರ್ಯದರ್ಶಿ ಪ್ರಕಾಶ್ ಆಚಾರ್ಯ ಕುಕ್ಕೆಟ್ಟು, ಪಳಿಕೆ, ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ನೇಸರ, ಉಪಾಧ್ಯಕ್ಷ ಶರತ್ ಕುಮಾರ್ ಕಾಡಬಾಗಿಲು, ಜಾತ್ರೋತ್ಸವ ಸಮಿತಿಯ ಮಾಜಿ ಅಧ್ಯಕ್ಷ ರುಗಳು, ಗೌರವ ಸಲಹೆಗಾರರು, ಸರ್ವ ಸದಸ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಆಟೋಟ ಸ್ಪರ್ಧೆಯಲ್ಲಿ ಸ್ಪರ್ಧಿಸಿದ ಸ್ಪರ್ಧಾಳುಗಳಿಗೆ ಬಹುಮಾನ ವಿತರಣೆ ಜರಗಿತು.

ಜಾತ್ರೋತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ್ ರೈ ಸ್ವಾಗತಿಸಿದರು, ಶಿಕ್ಷಕ ದೇವದಾಸ್ ನಾಯಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಕ್ಷೇತ್ರದಲ್ಲಿ ಉಗ್ರಾಣ ಮುಹೂರ್ತ, ತೋರಣ ಮುಹೂರ್ತ ಗಣಪತಿ ಹವನ, ನವಕ ಕಲಶ, ಮಹಾಪೂಜೆ, ನಿತ್ಯ ಬಲಿ, ಧ್ವಜಾರೋಹಣ, ಶ್ರೀ ರಂಗಪೂಜೆ, ವಸಂತಕಟ್ಟೆ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ,ವೇ.ಮೂ. ಶಶಾಂಕ ಭಟ್ ಬಳಂಜ ಇವರ ನೇತೃತ್ವದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ, ಅನ್ನಸಂತರ್ಪಣೆ ನಡೆಯಿತು.

ಕ್ಷೇತ್ರದ ದೈವಗಳಾದ ಕೊಡಮಣಿತ್ತಾಯ, ಮೂಜಿಲ್ನಾಯ, ಕಲ್ಕುಡ-ಕಲ್ಲುರ್ಟಿ ನೇಮೋತ್ಸವ,ನಾಗದೇವರ ಸನ್ನಿಧಿಯಲ್ಲಿ ಪಂಚಾಮೃತ ಅಭಿಷೇಕ, ಪ್ರಸನ್ನ ಪೂಜೆ, ಆಶ್ಲೇಷಾ ಬಲಿ , ದರ್ಶನ ಬಲಿ, ಬಟ್ಟಲು ಕಾಣಿಕೆ, ಶ್ರೀ ಭೂತ ಬಲಿ, ಶಯನ ಪೂಜೆ, ಕವಾಟ ಬಂಧನ, ಅನ್ನಸಂತರ್ಪಣೆ ನಡೆಯಿತು.ಸಾಮೂಹಿಕ ಶ್ರೀ ಮಹಾರಂಗ ಪೂಜೆ ಹಾಗೂ ನಿತ್ಯ ಪೂಜೆ, ಉತ್ಸವ ಬಲಿ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮಗಳು:


ಪೆರೋಡಿತ್ತಾಯಕಟ್ಟೆ ಮತ್ತು ತಾರೆದೊಟ್ಟು ಅಂಗನವಾಡಿ ಪುಟಾಣಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ನಿಯತಿ ನೃತ್ಯ ನಿಕೇತನ ವಿದ್ಯಾರ್ಥಿಗಳಿಂದ ಭಕ್ತಿ ಸಂಗೀತ,ನೃತ್ಯಾಂಜಲಿ ಭರತನಾಟ್ಯ, ಸತ್ಯ ಮೇವ ಜಯತೇ ನೃತ್ಯರೂಪಕ ಪ್ರದರ್ಶನಗೊಂಡಿತು. ವಿಷ್ಣುಬಾಲ ಯಕ್ಷಗಾನ ಕಲಾವಿದರಿಂದ ಪ್ರಭಾಕರ ಶೆಟ್ಟಿ ನಿರ್ದೇಶನದಲ್ಲಿ ಗುರುದಕ್ಷಿಣೆ ಪೌರಾಣಿಕ ಯಕ್ಷಗಾನ ಪ್ರದರ್ಶನಗೊಂಡಿತು.


ಜಾತ್ರೋತ್ಸವದಲ್ಲಿ ಸೇರಿದ ಸಾವಿರಾರು ಭಕ್ತರು:

ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಿರಂತರ ಕಾರ್ಯಕ್ರಮಗಳು ನಡೆಯುತ್ತಿದ್ದು ಜಾತ್ರೋತ್ಸವದಲ್ಲಿ ಅತ್ಯಂತ ಶ್ರದ್ದಾ ಭಕ್ತಿಯಿಂದ ಸಾವಿರಾರು ಭಕ್ತರು ಭಾಗವಹಿಸಿದರು. ನಿರಂತರ ರಂಗಪೂಜೆ ಹಾಗೂ ದೇವರ ಅನ್ನ ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು. ಸಮಿತಿಯ ಮಾಜಿ ಅಧ್ಯಕ್ಷರುಗಳು, ಜಾತ್ರೋತ್ಸವ ಸಮಿತಿ ಸದಸ್ಯರು ಭಾಗವಹಿಸಿ ಸಹಕರಿಸಿದರು. ಸುಡುಮದ್ದು ಪ್ರದರ್ಶನ ಮನಸೊರೆಗೊಂಡಿತ್ತು.

ಸನ್ಮಾನ:

ದೇಗುಲದ ಜಾತ್ರೋತ್ಸವದ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ದ‌ಕ.ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಯೋಗೀಶ್ ಕುಮಾರ್ ನಡಕ್ಕರ, ಯಕ್ಷಗಾನ ಕಲಾವಿದ ಹಾಗೂ ನಿರ್ದೇಶಕ ಪ್ರಭಾಕರ ಶೆಟ್ಟಿಪಳಿಕೆ , ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಉದ್ಯೋಗಿ ಪದ್ಮನಾಭ ಶೆಟ್ಟಿನೂಜಿ , ಉರಗ ತಜ್ಞ ಸುಜಿತ್ ನಾಯ್ಕ ಕಾಡಬಾಗಿಲು, ಆಂಧ್ರ ಬ್ಯಾಂಕ್ ನಿವೃತ್ತ ಉದ್ಯೋಗಿ ಆನೆ ನರಸಿಂಹ ಬೆಂಗಳೂರು ಇವರನ್ನು ಜಾತ್ರೋತ್ಸವ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *