ಚಿತ್ರದುರ್ಗ, (ಫೆ.05): ಸರ್ಕಾರಿ ಕೆಲಸದ ಆಸೆಗೆ ಪತ್ನಿಯೇ ಗಂಡನನ್ನ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಘಟನೆ ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ನಡೆದಿದೆ. ಕೊಲೆಯಾದವನ ಹೆಸರು ಸುರೇಶ್. ಚಿತ್ರದುರ್ಗದ ನೆಹರು ನಗರ ನಿವಾಸಿ. ಈತನ ತಂದೆ ಸರ್ಕಾರಿ ಕೆಲಸದಲ್ಲಿದ್ದ. ತಂದೆ ಸಾವಿನ ಬಳಿಕ ಅನುಕಂಪದ ಆಧಾರದಲ್ಲಿ ಸುರೇಶ್ಗೆ ತಂದೆಯ ಕೆಲಸ ಒಲಿದು ಬಂದಿತ್ತು.
ಮಗ ನನ್ನ ಚೆನ್ನಾಗಿ ನೋಡಿಕೊಳ್ಳುತ್ತಾನೆಂದು ತಾಯಿ ಆಸೆಯಿಂದ ಗಂಡನ ಕೆಲಸವನ್ನು 2ನೇ ಮಗ ಸುರೇಶ್ಗೆ ಕೊಡಿಸಿದ್ದಳು. ಆದ್ರೆ, ಮೊಳಕಾಲ್ಮೂರು ತಾಲ್ಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ SDA ಆಗಿದ್ದ ಸುರೇಶ್ ಪತ್ನಿಯ ಕಿರುಕುಳ ತಾಳದೆ ತನ್ನ ತಾಯಿ, ಸಹೋದರರ ಜೊತೆ ಮಾತು ಬಿಟ್ಟಿದ್ದೋನು, ಆಕ್ಟೋಬರ್ 8, 2024ರಂದು ಸಾವನ್ನಪ್ಪಿದ್ದಾನೆ.
ಹೇಳಿ ಕೇಳಿ ಸುರೇಶ್ಗೆ ಜಾಂಡೀಸ್ ಇತ್ತು. ಗಂಡನ ಸಾವಿನ ವಿಷಯವನ್ನು ಆತನ ಮನೆಯವರಿಗೂ ತಿಳಿಸದೇ ಪತ್ನಿ ನಾಗರತ್ನ ಅಂತ್ಯಕ್ರಿಯೆ ಮುಗಿಸಿದ್ದಳು. ಈಗ ಮೃತನ ತಾಯಿ ಸರೋಜಮ್ಮ. ಸೊಸೆ ನಾಗರತ್ನ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ನನ್ನ ಮಗನನ್ನು ಉಸಿರು ಗಟ್ಟಿಸಿ ಕೊಂದಿದ್ದಾಳೆ. ಜಾಂಡೀಸ್ನಿಂದ ಸತ್ತ ಎಂದು ನಾಟಕವಾಡ್ತಿದ್ದಾಳೆ.
ಅವನ ಕೆಲಸ ಇವಳಿಗೆ ಬರುತ್ತೆ ಎಂದು ಈ ಕೃತ್ಯವೆಸಗಿದ್ದಾಳೆ ಎಂದು ಪೊಲೀಸ್ ಹಾಗೂ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಅಂತ್ಯಕ್ರಿಯೆ ನಡೆದ 4 ತಿಂಗಳ ಬಳಿಕ ಪೊಲೀಸರು ಇದೀಗ ಹೊಳಲ್ಕೆರೆ ರಸ್ತೆಯ ರುದ್ರಭೂಮಿಯಲ್ಲಿ ಸುರೇಶ್ ಕಳೆಬರಹ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ, ತನಿಖೆ ಕೈಗೊಂಡಿದ್ದಾರೆ.
ಇನ್ನು ಸುರೇಶನಿಗೆ ಹುಷಾರಿಲ್ಲ. ಹೀಗಾಗಿ ಆತನನ್ನು ಮಣಿಪಾಲ್ ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗೋದಾಗಿ ನಂಬಿಸಿ ನಮ್ಮನ್ನೆಲ್ಲ ವಂಚಿಸಿದ್ದಾರೆ. ಕೇವಲ ಸರ್ಕಾರಿ ಕೆಲಸದಾಸೆಗೆ ಅನ್ಯಾಯವಾಗಿ ಸುರೇಶನ ಜೀವ ತೆಗೆದಿದ್ದಾಳೆ. ಹೀಗಾಗಿ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು. ಆರೋಪಿಗೆ ತಕ್ಕ ಶಿಕ್ಷೆವಿಧಿಸಬೇಕೆಂದು ಮೃತ ಸುರೇಶನ ಅತ್ತಿಗೆ ಒತ್ತಾಯಿಸಿದ್ದಾರೆ.
ಸದ್ಯ ಸಮಾಧಿಯಲ್ಲಿ ಕೊಳೆತಿದ್ದ ಕಳಬರಹವನ್ನು ಹೊರತೆಗೆದು ಪೋಸ್ಟ್ ಮಾರ್ಟಮ್ ನಡೆಸಲಾಗಿದ್ದು, ವೈದ್ಯರ ರಿಪೋರ್ಟ್ ಬಳಿಕ ಪ್ರಕರಣದ ಸತ್ಯಾಸತ್ಯ ಬಯಲಾಗಲಿದೆ.